ದೇಶದಲ್ಲಿ 2019ರಿಂದ 2021ರವರೆಗೆ 13 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ. ಈ ಪೈಕಿ, ರಾಜ್ಯದಲ್ಲಿ 31,935 ಮಹಿಳೆಯರು ಹಾಗೂ ಬಾಲಕಿಯರು ನಾಪತ್ತೆಯಾಗಿದ್ದಾರೆಂದು ಕೇಂದ್ರ ಗೃಹ ಸಚಿವಾಲಯ ಸಂಸತ್ ಅಧಿವೇಶನದಲ್ಲಿ ಹೇಳಿದೆ. ಈ ಅಂಕಿಅಂಶಗಳು ದಿಗ್ಭ್ರಮೆ ಉಂಟುಮಾಡಿವೆ. ರಾಜ್ಯದಲ್ಲಿ ಮಹಿಳೆಯರು-ಬಾಲಕಿಯರ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಮ್ರಗ ತನಿಖೆ ನಡೆಸಬೇಕು ಎಂದು ವಿಮೆನ್ ಇಂಡಿಯಾ ಮೂವ್ಮೇಂಟ್ ಕರ್ನಾಟಕ ರಾಜ್ಯ ಸಮಿತಿ ನಡೆಸಿದ ಸಭೆಯಲ್ಲಿ ಒತ್ತಾಯಿಸಿದೆ.
ಮೈಸೂರಿನಲ್ಲಿ ಸಂಘಟನೆಯ ನಾಯಕಿಯರ ಸಭೆ ನಡೆದಿದೆ. ಸಭೆಯಲ್ಲಿ ನಾನಾ ವಿಚಾರಣಗಳನ್ನು ಚರ್ಚಿಸಿದ ಸಂಘಟನೆಯ ಮುಖಂಡರು, “ರಾಜ್ಯದಲ್ಲಿ ಮಹಿಳೆಯರು ಮತ್ತು ಬಾಲಕಿಯರು ಕಾಣೆಯಾಗುತ್ತಿದ್ದರೂ, ಸರ್ಕಾರ ಎಚ್ಚೆತ್ತುಕೊಳ್ಳದೇ ಇರುವುದು ಅಕ್ಷಮ್ಯ. ರಾಜ್ಯ ಸರ್ಕಾರವು ಆದ್ಯತೆಯ ಮೇರೆಗೆ ವಿಶೇಷ ತನಿಖಾ ತಂಡದ ಮುಖಾಂತರ ಸಮಗ್ರ ತನಿಖೆ ನಡೆಸಬೇಕು. ಮಹಿಳಾ ಭದ್ರತೆಯ ಬಗ್ಗೆ ವಿಶೇಷ ಕಾರ್ಯಯೋಜನೆಗಳನ್ನು ರೂಪಿಸಬೇಕು” ಎಂದು ಒತ್ತಾಯಿಸಿದರು.
“ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ಮತ ಪಡೆದು ಅಧಿಕಾರಕ್ಕೆ ಬಂದಿರುವ ಸರ್ಕಾರ ಈ ವರ್ಗಗಳನ್ನು ಕಡೆಗಣಿಸುತ್ತಿದೆ. ಈ ಸಮುದಾಯಗಳ ಮೇಲಾಗುತ್ತಿರುವ ದೌರ್ಜನ್ಯ, ಅನ್ಯಾಯದ ಬಗ್ಗೆ ನಿರ್ಲಕ್ಷ ವಹಿಸಿರುವುದು ಖಂಡನಾರ್ಹ. ಹಿಜಾಬ್, 2ಬಿ ಮೀಸಲಾತಿ ಮರು ಸ್ಥಾಪಿಸುವ ಭರವಸೆ ನೀಡಿದ್ದ ಸರ್ಕಾರ ಈಗ ಜಾಣ ಮೌನ ತಾಳಿದೆ. ಬಜೆಟ್ನಲ್ಲೂ ಅಲ್ಪಸಂಖ್ಯಾತರನ್ನು ಕಡೆಗೆಣಿಸಲಾಗಿದೆ. ಇಂತಹ ನಿರ್ಲಕ್ಷತನವನ್ನು ಕೈ ಬಿಟ್ಟು ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆ ರೂಪಿಸಬೇಕು” ಎಂದು ಸಂಘಟನೆಯ ಮುಖಂಡರು ಆಗ್ರಹಿಸಿದರು.
ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯೆ ಮೇರಿ ವೇಗಸ್ ಮಹಿಳಾ ಸಂಘಟನೆ ಅನಿವಾರ್ಯತೆಯ ಬಗ್ಗೆ ಮಾತಾಡಿದರು,ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಸ್ವಾಗತಿಸಿದ ಈ ಸಭೆಯಲ್ಲಿ ರಾಜ್ಯ ಪದಾಧಿಕಾರಿಗಳು, ರಾಜ್ಯ ಸಮಿತಿ ಸದಸ್ಯೆಯರು, ಎಲ್ಲಾ ಜಿಲ್ಲೆಗಳ ಅಧ್ಯಕ್ಷೆ-ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.