ಆರ್‌ಟಿಐ ಕಾರ್ಯಕರ್ತರೆಂದು ಗಂಗರಾಜು ಮತ್ತು ಸ್ನೇಹಮಹಿ ಕೃಷ್ಣರವರು ಮುಡಾ ಹಗರಣ ಕುರಿತು ಸಿಎಂ ಸಿದ್ದರಾಮಯ್ಯನವರ ಮೇಲೆ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ ಎಂದು ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಬಿ ಜೆ ವಿಜಯಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ನಗರ ಪೊಲೀಸ್ ಕಮೀಷನರ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಿರುವ ಅವರು, “ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಈಗಾಗಲೇ ನ್ಯಾಯಾಂಗ ತನಿಖೆಗೆ ವಹಿಸಿದೆ. ಪಾರ್ವತಮ್ಮ ಸಿದ್ದರಾಮಯ್ಯನವರಿಗೆ ಕೆಸರೆ ಗ್ರಾಮದ ಸರ್ವೆ ನಂ.464ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಯಾವುದೇ ಅಧಿಸೂಚನೆ ಹೊರಡಿಸದೆ ಜಮೀನನ್ನು ವಶಪಡಿಸಿಕೊಂಡು ಕಾನೂನುಬಾಹಿರವಾಗಿ ಇವರ ಜಮೀನಿನಲ್ಲಿ ನಿವೇಶನಗಳನ್ನು ಮಾಡಿ ಜನರಿಗೆ ಹಂಚಿದೆ” ಎಂದು ಆರೋಪಿಸಿದ್ದಾರೆ.

“ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಡಿರುವ ತಪ್ಪನ್ನು ಒಪ್ಪಿಕೊಂಡು ಕಾನೂನಿನ ಅಡಿಯಲ್ಲಿ 50:50 ಅನುಪಾತದಂತೆ ಪಾರ್ವತಮ್ಮನವರಿಗೆ ಪರ್ಯಾಯವಾಗಿ ಪರಿಹಾರ ರೂಪದಲ್ಲಿ ನಿವೇಶನಗಳನ್ನು ನೀಡಿರುವುದರ ಬಗ್ಗೆ ಮಾಧ್ಯಮಗಳ ಮುಂದೆ ಸುಳ್ಳು ದಾಖಲೆಗಳನ್ನು ಪ್ರದರ್ಶಿಸಿ, ಗಂಗರಾಜು ಮತ್ತು ಸ್ನೇಹಮಯಿ ಕೃಷ್ಣರವರು ಕಳೆದ 20 ದಿನಗಳಿಂದ ಸಾಮಾಜಿಕ ಅಂತರ್ಜಾಲದಲ್ಲೂ ನಿರಂತರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಪಾರ್ವತಮ್ಮನವರ ಜಮೀನು ಅವರಿಗೆ ಸೇರಿದ್ದಲ್ಲ. ಇವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಈ ಜಮೀನನ್ನು ತೆಗೆದುಕೊಂಡಿದ್ದಾರೆ. ದೊಡ್ಡಮಟ್ಟದ ಹಗರಣವನ್ನ ಮಾನ್ಯ ಮುಖ್ಯಮಂತ್ರಿಗಳೇ ಮಾಡಿದ್ದಾರೆಂದು, ಅಲ್ಲದೇ ಈ ಜಮೀನು ದಲಿತರಿಗೆ ಸೇರಿದ್ದು ಹಾಗೂ ಗ್ರಾಂಟೆಡ್ ಲ್ಯಾಂಡ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ” ಎಂದರು.

“ಜಮೀನು ದಲಿತರಿಗೆ ಸೇರಿದ್ದು ಹಾಗೂ ಗ್ರಾಂಟೆಡ್ ಲ್ಯಾಂಡ್ ಎಂಬುದಾಗಿ ಇವರಲ್ಲಿ ಏನಾದರೂ ದಾಖಲೆಗಳಿದ್ದರೆ, ಅವುಗಳನ್ನು ನ್ಯಾಯಾಂಗ ತನಿಖೆಗೆ ನೇಮಕಗೊಂಡಿರುವ ನಿವೃತ್ತ ನ್ಯಾಯಧೀಶ ದೇಸಾಯಿ ಅವರಿಗೆ ನೀಡಬೇಕು. ಅದನ್ನು ಬಿಟ್ಟು ಬಿಜೆಪಿ ಮತ್ತು ಜೆಡಿಎಸ್ ಮುಖಂಡರೊಡನೆ ಶಾಮೀಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರನ್ನು ನಿರಂತರವಾಗಿ ನಿಂದಿಸುತ್ತಿದ್ದಾರೆ. ಅಲ್ಲದೆ ಸುಳ್ಳು ಆರೋಪಗಳ ಮೂಲಕ ಅಪಪ್ರಚಾರ ಮಾಡಿ ನಾಡಿನ ಮುಖ್ಯಮಂತ್ರಿಯವರ ಘನತೆಗೆ ಧಕ್ಕೆ ತರುತ್ತಿದ್ದಾರೆ. ಅಲ್ಲದೆ ಕುಟುಂಬವನ್ನು ಕೆಟ್ಟದಾಗಿ ಬಿಂಬಿಸುತ್ತಿರುವುದರಿಂದ ಕೂಡಲೇ ಇವರುಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನ್ಯಾಯಮೂರ್ತಿಗಳನ್ನೇ ಕೇಂದ್ರ ಸರ್ಕಾರ ಬೆದರಿಸುತ್ತಿದೆ; ಪ್ರಶಾಂತ್ ಭೂಷಣ್ ಆರೋಪ
“ಇವರುಗಳ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ, ನಾಡಿನ ಜನರಲ್ಲಿ ಕಿಚ್ಚು ಹತ್ತಿಸುವ ಪ್ರಯತ್ನವನ್ನು ಮಾಡುತ್ತಿದ್ದು, ಜನಸಾಮಾನ್ಯರು ಮತ್ತು ಕಾರ್ಯಕರ್ತರು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾರ್ಯಕರ್ತರ ಸಹನೆ ಮೀರುತ್ತಿದ್ದು, ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ಕ್ರಮವಹಿಸದಿದ್ದರೆ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ, ಇವರುಗಳ ರಹಸ್ಯ ಅಜೆಂಡಾವನ್ನು ಗಲಾಟೆಗಳ ಮೂಲಕ ಈಡೇರಿಸಿಕೊಳ್ಳುವ ಪ್ರಯತ್ನಕ್ಕೆ ಉತ್ತೇಜನ ಕೊಟ್ಟಾಂತಾಗುತ್ತದೆ. ಆದ್ದರಿಂದ ಕೂಡಲೇ ಇವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
