ಮುಂಗಾರು ಸಮರ್ಪಕವಾಗಿ ಆಗದ ಕಾರಣ ದ್ವಿದಳ ಧಾನ್ಯ, ರಾಗಿ, ಭತ್ತ ಹಾಗೂ ಮುಸುಕಿನ ಜೋಳ ಮೊದಲಾದ ಪ್ರಮುಖ ಬೆಳೆಗಳು ಕೈಗೆ ಬಾರದೆ ರೈತರು ಕಂಗಾಲಾಗಿದ್ದಾರೆ. ಸರ್ಕಾರವು ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಘೋಷಿಸಿದೆ. ಆದರೆ, ಅಧಿಕಾರಿಗಳು ಹೊಲಗಳಿಗೆ ಭೇಟಿಯನ್ನೇ ಕೊಟ್ಟಿಲ್ಲ. ರೈತರ ಸಂಕಷ್ಟವನ್ನು ಆಲಿಸುವಲ್ಲಿ ಮೈಸೂರು ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದರು.
“ಕೃಷಿ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಹೀಗಾಗಿ, ಅಲ್ಪಸ್ವಲ್ಪ ಫಸಲು ಉಳಿಸಿಕೊಳ್ಳುವುದಕ್ಕೂ ಪರದಾಡುತ್ತಿದ್ದೇವೆ. ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿರುವುದರಿಂದ ಫಸಲು ಕಣ್ಣಿಗೆ ಕಂಡರೂ ಕೈ ಸೇರದಂತಾಗಿದೆ. ಬಂಡವಾಳವೂ ಇಲ್ಲವಾಗಿದೆ” ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಎರಡು ಎಕರೆ ಪ್ರದೇಶದಲ್ಲಿ ರಾಗಿ ಹಾಕಿದ್ದೆ. ಮಳೆ ಕೈಕೊಟ್ಟಿದ್ದರಿಂದ ಬೆಳವಣಿಗೆ ಕುಂಠಿತವಾಗಿದೆ ಕೊಳವೆ ಬಾವಿ ಹೊಂದಿದ್ದರೂ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಮರ್ಪಕವಾಗಿ ನೀರು ನೀಡಲು ಸಾಧ್ಯವಾಗುತ್ತಿಲ್ಲ” ಎಂದು ರೈತರೊಬ್ಬರು ಅವಲತ್ತುಕೊಂಡಿದ್ದಾರೆ.
“ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಮನಬಂದಂತೆ ವಿದ್ಯುತ್ ನೀಡುತ್ತಿದ್ದಾರೆ. ಇದರಿಂದ ನಮಗೆ ರಾತ್ರಿ ನಿದ್ರಿಸುವುದಕ್ಕೂ ಆಗುತ್ತಿಲ್ಲ. ಬೆಳೆ ಉಳಿಸಿಕೊಳ್ಳಲು ತೊಂದರೆ ಅನುಭವಿಸುತ್ತಿದ್ದೇವೆ. ಬರ ಪ್ರದೇಶವೆಂದು ಘೋಷಿಸಿದ್ದರೂ ಹುಣಸೂರು ತಾಲೂಕು ಅಧಿಕಾರಿಗಳು ಹೊಲ–ಗದ್ದೆಗಳಿಗೆ ಭೇಟಿ ನೀಡಿ ನಿಖರ ಮಾಹಿತಿ ಪಡೆದಿಲ್ಲ.ಸರ್ಕಾರಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ ಅರಿಯದೇ ಸರ್ಕಾರಕ್ಕೆ ಕಾಟಾಚಾರಕ್ಕೆ ವರದಿ ಸಲ್ಲಿಸಿದ್ದಾರೆ” ಎಂದು ರೈತರು ಆರೋಪಿಸಿದ್ದಾರೆ.
“ತಾಲೂಕಿನಲ್ಲಿ ಗೋಶಾಲೆ ತೆರೆಯುವ ಪರಿಸ್ಥಿತಿ ಎದುರಾಗಿಲ್ಲ. ಹಿಂಗಾರು ಮಳೆ ಉತ್ತಮವಾಗಿ ಬೀಳುತ್ತಿದ್ದು ಮುಂದಿನ ಮಾರ್ಚ್‌ವರೆಗೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಲಾರದು” ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಬಸಪ್ಪ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಕ್ರಮವಾಗಿ ಮಣ್ಣು ತೆರವು; ಸೂಕ್ತ ಕ್ರಮಕ್ಕೆ ತಹಶೀಲ್ದಾರ್ ಭರವಸೆ
“ತಾಲೂಕಿನಲ್ಲಿ 2019ರ ಗಣತಿ ಅಂಕಿ–ಅಂಶದಂತೆ 74,510 ಜಾನುವಾರುಗಳಿವೆ. ಅವುಗಳಿಗೆ ಕನಿಷ್ಠ 28 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು ಒದಗಿಸುವ ದೃಷ್ಟಿಯಿಂದ ಕೊಳವೆ ಬಾವಿ ಹೊಂದಿರುವ ರೈತರಿಗೆ 5 ಕೆ ಜಿ ಯ ಎರಡು ಬ್ಯಾಗ್ ಮುಸುಕಿನ ಜೋಳ ಬಿತ್ತನೆ ಬೀಜದ ಕಿಟ್ ವಿತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಹುಣಸೂರು ತಾಲೂಕಿನಲ್ಲಿ ವಾಡಿಕೆಯಂತೆ 719 ಮಿ ಮೀ ಮಳೆಯಾಗಬೇಕಿತ್ತು. ಈವರೆಗೆ 550 ಮಿ ಮೀ ಮಳೆಯಾಗಿದೆ. 81,565 ಎಕರೆ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇದರಲ್ಲಿ 77,659 ಎಕರೆ ಬಿತ್ತನೆಯಾಗಿದೆ. ಹಿಂಗಾರು ಉತ್ತಮವಾಗಿರುವುದರಿಂದ ದ್ವಿದಳ ಧಾನ್ಯ ಮತ್ತು ರಾಗಿ ಬೆಳೆಗೆ ಸಹಕಾರಿಯಾಗಿದೆ” ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಪ್ಪ ತಿಳಿಸಿದರು.