ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿದ ಮೈಸೂರಿನ ಕಲ್ಲಿಗಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ದಂಡ ವಿಧಿಸಿದೆ ಎಂದು ಹಲವಾರು ವದಂತಿಗಳು ಹರಿದಾಡುತ್ತಿವೆ. ಈ ಬಗ್ಗೆ ದಂಡಕ್ಕೆ ಗುರಿಯಾಗಿದ್ದ ಗುತ್ತಿಗೆದಾರ ಶ್ರಿನಿವಾಸ್ ನಟರಾಜ್ ಸ್ಪಷ್ಟನೆ ನೀಡಿದ್ದು, ದಂಡ ವಿಧಿಸಿರುವುದು ಹಳೆಯ ಪ್ರಕರಣ. ಅದಕ್ಕೂ, ರಾಮ ವಿಗ್ರಹಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ಹಾರೋಹಳ್ಳಿ ಗುಜೇಗೌಡನಪುರ ಗ್ರಾಮದ ರಾಮದಾಸ್ ಎಂಬವರ ಜಮೀನಿನಲ್ಲಿ ದೊರೆತ ಕಲ್ಲಿನಿಂದ ಅಯೋಧ್ಯೆ ರಾಮಮಂದಿರಕ್ಕೆ ಬಾಲರಾಮ (ರಾಮಲಲ್ಲಾ) ವಿಗ್ರಹ ಕೆತ್ತಲಾಗಿದೆ. ಆ ಕಲ್ಲನ್ನು ಭೂಮಿಯಿಂದ ಹೊರತೆಗೆದಿದ್ದಕ್ಕೆ, ಗುತ್ತಿಗೆದಾರ ಶ್ರೀನಿವಾಸ್ ನಟರಾಜ್‌ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ 80,000 ರೂ. ದಂಡ ವಿಧಿಸಿದೆ ಎಂದು ಆರೋಪಿಸಲಾಗಿತ್ತು.
ಆರೋಪಗಳ ಸಂಬಂಧ ಸ್ಪಷ್ಟನೆ ನೀಡಿರುವ ಗುತ್ತಿಗೆದಾರ ಶ್ರೀನಿವಾಸ್, “ರಾಮ ಮೂರ್ತಿಗೆ ಕಲ್ಲು ಆಯ್ಕೆಯಾಗಿದ್ದು ಆರು ತಿಂಗಳ ಹಿಂದೆಯಷ್ಟೇ. ಆದ್ರೆ, ನಾನು ದಂಡ ಪಾವತಿಸಿದ್ದು, 2022ರ ಜುಲೈ ತಿಂಗಳಿನಲ್ಲಿ. ಅನುಮತಿ ಪಡೆಯದೆ ಗಣಿಗಾರಿಕೆ ನಡೆಸಿದ್ದಕ್ಕಾಗಿ ಇಲಾಖೆ ನನಗೆ ದಂಡ ವಿಧಿಸಿತ್ತು. ರಾಮ ಮೂರ್ತಿಗೆ ಕಲ್ಲು ತೆಗೆದಿದ್ದಕ್ಕಾಗಿ ಅಲ್ಲ. ಯಾರೂ ಸುಳ್ಳು ಸುದ್ದಿ ಹರಡಬಾರದು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಶೆಟ್ಟರ್ ನಡೆಯಿಂದ ಬೆಳಗಾವಿಯಲ್ಲಿ ಅಂಗಡಿ ಕುಟುಂಬದ ಟಿಕೆಟ್ ಭದ್ರ?
2022ರಲ್ಲಿ ರಾಮದಾಸ್ ಅವರ ಜಮೀನಿನಲ್ಲಿ ನೆಲವನ್ನು ಸಮತಟ್ಟು ಮಾಡಲು ಶ್ರೀನಿವಾಸ್ ಅವರು ಗುತ್ತಿಗೆ ಪಡೆದಿದ್ದರು. ಈ ವೇಳೆ, ಕೆಲಸ ನಡೆಸುತ್ತಿದ್ದ ವೇಳೆ, ಜಮೀನಿನಲ್ಲಿ ಶಿಲ್ಪಗಳ ಕೆತ್ತನೆಗೆ ಯೋಗ್ಯವಾಗುವ ಕೃಷ್ಣಶಿಲೆ ದೊರೆತಿತ್ತು. ಸುಮಾರು 10 ಅಡಿ ಆಳದಲ್ಲಿ ಸಿಕ್ಕ ಭಾರೀ ಗಾತ್ರದ ಕಲ್ಲನ್ನು ಒಡೆದು ಹೊರ ತೆಗೆಯಲಾಗಿತ್ತು. ಭಾರೀ ಗಾತ್ರದ ಕಲ್ಲನ್ನು ಹೊರತೆಗೆಯಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಪಡೆಯಬೇಕು. ಆದರೆ, ಅವರು ಅನಮತಿ ಪಡೆಯದ ಕಾರಣ, ಅನಧಿಕೃತ ಗಣಿಗಾರಿಕೆ ನಡೆಯುತ್ತಿದೆ ಎಂದು ಇಲಾಖೆ ಗುತ್ತಿಗೆದಾರ ಶ್ರೀನಿವಾಸ್‌ಗೆ ದಂಡ ವಿಧಿಸಿತ್ತು. ಅವರು 2022ರಲ್ಲಿಯೇ ದಂಡ ಪಾವತಿಸಿದ್ದರು. ಈ ನಡುವೆ, ಆ ಕಲ್ಲನ್ನು ಇತ್ತೀಚೆಗೆ, ರಾಮಲಲ್ಲಾ ಮೂರ್ತಿ ಕೆತ್ತನೆಗೆ ಆಯ್ಕೆ ಮಾಡಲಾಗಿತ್ತು.