ಮೈಸೂರು | ಮಾಡದ ಅಪರಾಧಕ್ಕೆ 2 ವರ್ಷ ಜೈಲು: ಆದಿವಾಸಿಗಳ ಬದುಕಿನಲ್ಲಿ ಪೊಲೀಸರ ‘ಚೆಲ್ಲಾಟ’

Date:

Advertisements

2020ರಲ್ಲಿ ಮಹಿಳೆಯೊಬ್ಬರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಕೊಲೆಯ ಆಯಾಮ ಕೊಟ್ಟು ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದರು. ತಪ್ಪೊಪ್ಪಿಗೆಯನ್ನೂ ಬರೆಸಿಕೊಂಡಿದ್ದರು. ಅಪರಾಧವೇ ನಡೆಯದ ಪ್ರಕರಣದಲ್ಲಿ ಅಮಾಯಕ ವ್ಯಕ್ತಿ 2022ರಿಂದ ಜೈಲು ವಾಸ ಅನುಭವಿಸುತ್ತಿದ್ದರು. ಇದೀಗ, ಕಾಣೆಯಾಗಿದ್ದ ಮಹಿಳೆ ಪತ್ತೆಯಾಗಿದ್ದಾರೆ. ಜೈಲು ಸೇರಿದ್ದ ಅಮಾಯಕ ಜೈಲಿನಿಂದ ಹೊರಬಂದಿದ್ದಾರೆ- ಇದು ಮೈಸೂರು ಜಿಲ್ಲೆಯ ಕುಶಾಲನಗರ ತಾಲೂಕಿನ ಆದಿವಾಸಿ ಸಮುದಾಯದ ಸುರೇಶ್‌ ಅವರ ಕತೆ.

ಸುರೇಶ್‌ ಅವರು ತನ್ನ ಪತ್ನಿ ಮಲ್ಲಿಗೆ ಅವರನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿ 2022ರಲ್ಲಿ ಪೊಲೀಸರು ಬಂಧಿಸಿದ್ದರು. ಇದೀಗ, ತಮ್ಮ ಪ್ರಿಯಕರನೊಂದಿಗೆ ಊರು ತೊರೆದಿದ್ದ ಮಲ್ಲಿಗೆ ಅವರು ಪತ್ತೆಯಾಗಿದ್ದಾರೆ. ಈಗ, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಸುರೇಶ್‌ ನಿರಪರಾಧಿ ಎಂಬುದು ಸ್ಪಷ್ಟವಾಗಿದೆ. ಅಲ್ಲದೆ, ಮಲ್ಲಿಗೆ ಅವರದ್ದು ಎಂದು ಅಂತ್ಯಸಂಸ್ಕಾರ ಮಾಡಲಾದ ಮೃತದೇಹ ಯಾರದ್ದು ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ. ಮಾತ್ರವಲ್ಲ, ಬುಡಕಟ್ಟು ಸಮುದಾಯದ ವ್ಯಕ್ತಿ ಮತ್ತು ಆತನ ಕುಟುಂಬದ ಜೀವನದಲ್ಲಿ ಪೊಲೀಸರು ‘ಚೆಲ್ಲಾಟ’ ಆಡಿದ್ದಾರೆಂದು ಆಕ್ರೋಶವೂ ವ್ಯಕ್ತವಾಗಿದೆ.

ಆದಿವಾಸಿ ‘ಜೇನು ಕುರುಬ’ ಸಮುದಾಯದ ಸುರೇಶ್‌ ಅವರು 2020ರ ನವೆಂಬರ್‌ನಲ್ಲಿ ತಮ್ಮ ಪತ್ನಿ ಕಾಣೆಯಾಗಿದ್ದಾರೆ ಎಂದು ಕುಶಾಲನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದೇ ಸಂದರ್ಭದಲ್ಲಿ, 2020ರ ನವೆಂಬರ್ 12ರಂದು ಕುಶಾಲನಗರ ಬಳಿಯ ಬೆಟ್ಟದಪುರದಲ್ಲಿ ಅಪರಿಚಿತ ಮಹಿಳೆಯ ಮೃತದೇಹವೂ ಪತ್ತೆಯಾಗಿತ್ತು. ಆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ‘ಬಲವಾದ ಪೆಟ್ಟು ಬಿದ್ದು, ಆಕೆ ಮೃತಪಟ್ಟಿದ್ದಾರೆ’ ಎಂದು ಹೇಳಲಾಗಿದೆ.

Advertisements

ಆ ಮರಣೋತ್ತರ ವರದಿಯನ್ನು ಇಟ್ಟುಕೊಂಡು, ಪತ್ತೆಯಾದ ಮೃತದೇಹವು ನಾಪತ್ತೆಯಾಗಿದ್ದ ಮಲ್ಲಿಗೆ ಅವರದ್ದೇ ಎಂದು ಬೆಟ್ಟದಪುರ ಪೊಲೀಸರು ವರದಿ ಸಿದ್ದಪಡಿಸಿದರು. ಜೊತೆಗೆ, ಮಲ್ಲಿಗೆ ಅವರ ತಾಯಿ ಕೂಡ ‘ತಮ್ಮ ಮಗಳು ಕೊಲೆಯಾಗಿದ್ದಾಳೆ’ ಎಂದು ದೂರು ನೀಡಿದರು. ಅವರ ದೂರಿನ ಆಧಾರದ ಮೇಲೆ ದಾಖಲಿಸಲಾದ ಎಫ್‌ಐಆರ್‌ನಲ್ಲಿ ಅಪರಿಚಿತ ಆರೋಪಿ ಎಂದು ಉಲ್ಲೇಖಿಸಲಾಗಿತ್ತೇ ಹೊರತು, ಸುರೇಶ್‌ ಹೆಸರು ಇರಲಿಲ್ಲ.

ಈ ವರದಿ ಓದಿದ್ದೀರಾ?: ಗಚ್ಚಿಬೌಲಿ ಅರಣ್ಯದಲ್ಲಿ ಐಟಿ ಪಾರ್ಕ್‌: ವಿದ್ಯಾರ್ಥಿಗಳ ಹೋರಾಟಕ್ಕೆ ಬಿಆರ್‌ಎಸ್ ಬೆಂಬಲ; ರಾಹುಲ್ ಗಾಂಧಿ ಮೌನ

ಆದಾಗ್ಯೂ, ಮಲ್ಲಿಗೆ ಅವರನ್ನು ಸುರೇಶ್‌ ಅವರೇ ಕೊಲೆ ಮಾಡಿದ್ದಾರೆ ಎಂದು ಚಾರ್ಜ್‌ಶೀಟ್‌ ಸಿದ್ದಪಡಿಸಿದ ಪೊಲೀಸರು, ಸುರೇಶ್ ಅವರನ್ನು ಬಂಧಿಸಿದ್ದರು. ಅಲ್ಲದೆ, 2022ರ ಮೇ 22ರಂದು ಸುರೇಶ್‌ ಅವರಿಂದ ಪೊಲೀಸರು ಸ್ವ-ಇಚ್ಛಾ ಹೇಳಿಕೆಯನ್ನೂ ಬರೆಸಿಕೊಂಡಿದ್ದರು. ಅದರಲ್ಲಿ, “ನನ್ನ ಹೆಂಡತಿ ಮನೆ ಬಿಟ್ಟು ಹೋದ ಮೇಲೆ, ಆಕೆಯ ಮೇಲೆ ನಾನು ದ್ವೇಷದಿಂದ ಇದ್ದೆ. ಆಕೆ ಮನೆಗೆ ಬಂದ ಬಳಿಕ ಪುಸಲಾಯಿಸಿ ಕುಶಾಲನಗರದ ಬಾರ್‌ಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಇಬ್ಬರೂ ಮದ್ಯ ಸೇವಿಸಿ ನಂತರ ಶ್ಯಾನುಭೋಗನಹಳ್ಳಿಗೆ ಕರೆದೊಯ್ದು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದೆ” ಎಂಬುದಾಗಿ ಬರೆಸಿಕೊಂಡಿದ್ದರು ಎಂದು ಪ್ರಜಾವಾಣಿ ವರದಿ ಮಾಡಿದೆ.

ಸದ್ಯ, ಈಗ ಮಲ್ಲಿಗೆ ಪತ್ತೆಯಾಗಿದ್ದಾರೆ. ಪೊಲೀಸರು ಎಸಗಿದ ಕರ್ತವ್ಯಲೋಪ ಕೃತ್ಯ ಬಯಲಾಗಿದೆ. ಅಪರಾಧವೇ ಮಾಡದ ವ್ಯಕ್ತಿಯಿಂದ ಪೊಲೀಸರು ಹೇಗೆ ಸ್ವ-ಇಚ್ಛಾ ಹೇಳಿಕೆ ಬರೆಸಿಕೊಂಡರು? ಸುರೇಶ್‌ಗೆ ಪೊಲೀಸರು ಚಿತ್ರಹಿಂಸೆ ಕೊಟ್ಟು, ತಪ್ಪೊಪ್ಪಿಗೆ ಬರೆಸಿಕೊಂಡಿದ್ದರೇ? ಎಂಬ ಶಂಕೆ ವ್ಯಕ್ತವಾಗಿದೆ. ಮಾತ್ರವಲ್ಲ, 2020ರಲ್ಲಿ ಪತ್ತೆಯಾಗಿದ್ದ ಮಹಿಳೆಯ ಮೃತದೇಹ ಯಾರದ್ದು? ಆ ಮೃತದೇಹದ ಹಿಂದಿನ ಕತೆಯೇನು? ಅದು ಕೊಲೆಯೇ? ಆ ಕೊಲೆಯನ್ನು ಮುಚ್ಚಿಹಾಕಲು ಪೊಲೀಸರು ಸುರೇಶ್‌ ಮತ್ತು ಮಲ್ಲಿಗೆ ಅವರನ್ನು ಬಳಸಿಕೊಂಡರೇ? ಎಂಬ ಹಲವಾರು ಅನುಮಾನಗಳು ವ್ಯಕ್ತವಾಗಿವೆ. ಸುರೇಶ್‌ ಅವರನ್ನು ಅಪರಾಧಿಯನ್ನಾಗಿ ಪ್ರಕರಣದಲ್ಲಿ ತನಿಖಾಧಿಕಾರಿಗಳ ಕೈವಾಡವಿದೆಯೇ ಎಂಬ ಅನುಮಾನವೂ ಮುನ್ನೆಲೆ ಬಂದಿದೆ.

ಮಲ್ಲಿಗೆ ಅವರು ಪತ್ತೆಯಾದ ಬಳಿಕ, ಸುರೇಶ್‌ ಪರವಾಗಿ ವಕೀಲ ಪಾಂಡು ಪೂಜಾರಿ ಅವರು ನ್ಯಾಯಾಲಯಕ್ಕೆ ವಿಶೇಷ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ಮೈಸೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು, ಮಲ್ಲಿಗೆ, ಎಸ್‌ಪಿ ವಿಷ್ಣುವರ್ಧನ್‌ ಹಾಗೂ ತನಿಖಾಧಿಕಾರಿ ಪ್ರಕಾಶ್‌ ಅವರನ್ನು ವಿಚಾರಣೆಗೆ ಒಳಪಡಿಸಿದೆ. ತನಿಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಪ್ರಕರಣದ ಬಗ್ಗೆ ವಿವರಣೆ ನೀಡುವಂತೆ ಎಸ್‌ಪಿ ವಿಷ್ಣುವರ್ಧನ್ ಅವರಿಗೆ ಸೂಚನೆ ನೀಡಿದೆ.

ಸದ್ಯ, ಪೊಲೀಸರ ತಪ್ಪಿನಿಂದ ಜೈಲು ಸೇರಿದ್ದ ಸುರೇಶ್‌ ಅವರಿಗೆ ಜಾಮೀನು ನೀಡಲಾಗಿದ್ದು, ಈಗ ಅವರು ಜೈಲಿನಿಂದ ಹೊರಬಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಬೀದರ್‌ | ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ : ಎರಡು ದಿನ ರಾಷ್ಟ್ರೀಯ ವಿಚಾರ ಸಂಕಿರಣ

ಭಾಲ್ಕಿ ಹಿರೇಮಠ ಸಂಸ್ಥಾನದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ...

ಶಿರಸಿ | NWKRTC ವತಿಯಿಂದ ಅಪ್ರೆಂಟಿಸ್ ಹುದ್ದೆಗಳಿಗೆ WALK-IN-INTERVIEW

ಕರ್ನಾಟಕ ರಾಜ್ಯ ವಾಯುವ್ಯ ಸಾರಿಗೆ ಸಂಸ್ಥೆ, ಶಿರಸಿ ವಿಭಾಗದಲ್ಲಿ ವಿವಿಧ ಅಪ್ರೆಂಟಿಸ್...

Download Eedina App Android / iOS

X