ಮೈಸೂರು ಪುರಭವನದ ಆವರಣದಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಬಳಿ ಸಮಾಜ ಕಲ್ಯಾಣ ಇಲಾಖೆಯಿಂದ ಶಿಲಾ ಫಲಕದಲ್ಲಿ ‘ಸಂವಿಧಾನ ಪೀಠಿಕೆ’ ಕೆತ್ತಿಸಲಾಗಿದೆ.
ಈಗಿನ ಸರ್ಕಾರ 2023ರಲ್ಲಿ ಶಾಲಾ ಕಾಲೇಜುಗಳಲ್ಲಿ ‘ಸಂವಿಧಾನ ಪೀಠಿಕೆ’ ಓದುವುದನ್ನು ಕಡ್ಡಾಯಗೊಳಿಸಿ ಆದೇಶ ಮಾಡಿತ್ತು. ಅದರಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಲಾಫಲಕ ಮೇಲೆ ಸಂವಿಧಾನ ಪೀಠಿಕೆ ಕೆತ್ತಿಸಿ ಅನಾವರಣ ಮಾಡುವಂತೆ ಸೂಚಿಸಿತ್ತು. ಅಂತೆಯೇ ಮೈಸೂರಿನಲ್ಲಿಯೂ ನಿರ್ಮಿಸುವಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ತಿಳಿಸಿದ್ದರು.
ಈ ಹಿಂದೆ ಜಸ್ಟೀಸ್ ನಾಗಮೋಹನ್ ದಾಸ್ ಅವರೂ ಕೂಡಾ ‘ಸಂವಿಧಾನ ಪೀಠಿಕೆ’ ಸರಳವಾಗಿ ಅರ್ಥವಾಗುವಂತೆ ಪುಸ್ತಕ ಬರೆದು ಹಲವಾರು ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸಿ, ಸಂವಿಧಾನ ಪೀಠಿಕೆ ಪುಸ್ತಕ ಹಂಚಿಕೆ ಮಾಡಿದ್ದರು.

ಮೈಸೂರಿನ ಹೃದಯ ಭಾಗವಾದ ಪುರಭವನ, ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆ, ಚಾಮರಾಜ ಒಡೆಯರ್ ಪ್ರತಿಮೆ, ಗಾಂಧಿ ಪ್ರತಿಮೆ ಇರುವ ಸಮೀಪದಲ್ಲಿಯೇ ಈಗಾಗಲೇ ಅನಾವರಣಕ್ಕೆ ಶಿಲಾಫಲಕ ಸಿದ್ಧವಾಗಿದೆ. ಸರ್ಕಾರ ₹25 ಲಕ್ಷ ಅನುದಾನ ಒದಗಿಸಿದ್ದು, ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ₹15 ಲಕ್ಷ ಸಂದಾಯವಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಮಾಹಿತಿ ಒದಗಿಸಿದೆ.

‘ಸಂವಿಧಾನ ಪೀಠಿಕೆ’ ಶಿಲಾಫಲಕ 10 ಅಡಿ ಎತ್ತರ, 6 ಅಡಿ ಅಗಲ, ಒಂದೂಕಾಲು ಅಡಿ ದಪ್ಪವುಳ್ಳ ಶಿಲೆಯಲ್ಲಿ ನಿರ್ಮಿಸಲಾಗಿದೆ. ಪೀಠಿಕೆ ಕನ್ನಡದಲ್ಲಿದ್ದು, ಕೆಳಗಿನ ಪೀಠದಲ್ಲಿ ಇಂಗ್ಲಿಷ್ ಬರಹಗಳಿವೆ. ಜನರನ್ನು ಆಕರ್ಷಿಸುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಸಧ್ಯದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ. ಮೈಸೂರಿನಲ್ಲಿ ಹಲವು ಮಹನೀಯರ ಪ್ರತಿಮೆಗಳಿದ್ದು, ಈಗ ‘ಸಂವಿಧಾನ ಪೀಠಿಕೆ ಶಿಲಾ ಫಲಕ’ ಸೇರ್ಪಡೆಯಾಗಿರುವುದು ಮೈಸೂರಿಗೆ ಮೆರಗು ತಂದಿದ್ದು, ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.

ಈ ದಿನ.ಕಾಮ್ ಜತೆಗೆ ನೆಲೆ ಹಿನ್ನಲೆಯ ಕೆ ಆರ್ ಗೋಪಾಲ ಕೃಷ್ಣ ಮಾತನಾಡಿ, “ಭಾರತ ದೇಶದಲ್ಲಿ ಸಂವಿಧಾನದ ಬಗ್ಗೆ ಹೆಚ್ಚು ಜನರಿಗೆ ಅರಿವಿಲ್ಲ, ಕರ್ನಾಟಕ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಸಂವಿಧಾನ ಪರಿಚಯ ಮಾಡುವ ನಿಟ್ಟಿನಲ್ಲಿ ಹಾಗೂ ಜನ ಸಾಮಾನ್ಯರಿಗೆ, ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನದ ಅರ್ಥ, ಆಶಯಗಳ ಬಗ್ಗೆ ಸರಳವಾಗಿ ಅರ್ಥವಾಗುವಂತೆ ಮಾಡುವ ಪ್ರಯತ್ನ ಮಾಡಿದೆ. ಇದು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಮಹತ್ವದ ಹೆಜ್ಜೆಯಾಗಿದೆ” ಎಂದು ಶ್ಲಾಘಿಸಿದರು.

“ಮೈಸೂರಿನ ಪುರಭವನದ ಮುಂದೆ ‘ಸಂವಿಧಾನ ಪೀಠಿಕೆ’ಯನ್ನು ಕಲ್ಲಿನಲ್ಲಿ ಕೆತ್ತನೆ ಮಾಡಿಸಿರುವುದನ್ನು ಗಮನಿಸಿದರೆ, ಇತಿಹಾಸದಲ್ಲಿ ಅಶೋಕ ತನ್ನ ಕಾಲಘಟ್ಟದಲ್ಲಿ ಬೌದ್ಧ ಧರ್ಮ ಪ್ರಚಾರ ಮಾಡುವ ವೇಳೆ ಬುದ್ದನ ಸ್ತೂಪದಲ್ಲಿ ಕೆತ್ತನೆ ಮಾಡಿಸುತ್ತ ಅರಿವು ಮೂಡಿಸಿದ್ದು ಕಂಡುಬರುತ್ತದೆ. ಹಾಗೇ, ಸಂವಿಧಾನದ ಆಶಯವೂ ಅಷ್ಟೇ, ಬೌದ್ಧ ಧರ್ಮದ ರೀತಿಯಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇರಬೇಕು, ಬ್ರಾತೃತ್ವದಿಂದ ಬಾಳಬೇಕು ಅನ್ನುವುದು ಹಾಗೆ ಸಂವಿಧಾನದ ಪೀಠಿಕೆ ಪ್ರಸ್ತಾವನೆ ಕಲ್ಲಿನಲ್ಲಿ ಕೆತ್ತನೆ ಮಾಡಿಸಿರುವುದು ಪ್ರಶಂಸನೀಯ” ಎಂದರು.

ಮಾಜಿ ನಗರಸಭಾ ಸದಸ್ಯ, ನೂರ್ ಮರ್ಚೆಂಟ್ ಮಾತನಾಡಿ “ಬಾಬಾ ಸಾಹೇಬರ ಪ್ರತಿಮೆ ಬಳಿ ‘ಸಂವಿಧಾನ ಪೀಠಿಕೆ’ ಶಿಲಾ ಫಲಕ’ ಅನಾವರಣ ಆಗುತ್ತಿರುವುದು ಸಮಂಜಸವಾದದ್ದು, ಅರ್ಥ ಪೂರ್ಣವಾದದ್ದು. ಯಾಕೆಂದರೆ ಅಲ್ಲಿ ಬರುವವರಿಗೆ ಅರಿವು ಮೂಡುತ್ತದೆ, ಅರಿವು ಮೂಡಿಸುವ ಕೆಲಸವೇ ಅತಿ ಮುಖ್ಯವಾಗಿ ಆಗಬೇಕಿರುವಂತದ್ದು. ಮುಂಚೆಗಿಂತ ಈಗ ಪರ್ವಾಗಿಲ್ಲ ಸಂವಿಧಾನ ಅಂದ್ರೆ ಏನು, ಎಂಬುದರ ಮಹತ್ವದ ಬಗ್ಗೆ ತಿಳುವಳಿಕೆ ಬಂದಿದೆ. ಇದಿಷ್ಟೇ ಸಾಲದು ಇನ್ನೂ ಹೆಚ್ಚು ತಿಳಿಯುವಂಥ, ತಿಳಿಸುವಂಥ ಕೆಲಸವಾಗಬೇಕು. ಈಗ ಶಿಲಾ ಫಲಕ ಅನಾವರಣ ಆಗುತ್ತಿರುವುದು ಸೂಕ್ತವಾದ ಕೆಲಸ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಕಾವೇರಿ ಕುಡಿಯುವ ನೀರು ಸರಬರಾಜು ಮಾಡುವಂತೆ ದಸಂಸ ಮನವಿ
ಮನುಜಮತ ನಾಗರಾಜು ಮಾತನಾಡಿ “ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಬಳಿ ‘ಸಂವಿಧಾನ ಪೀಠಿಕೆ’ ಶಿಲಾಫಲಕ ಅನಾವರಣ ಆಗುತ್ತಿರುವುದು ಸ್ಮರಣೀಯ ಕೆಲಸ. ಬಾಬಾ ಸಾಹೇಬರು ಹಾಗೂ ಸಂವಿಧಾನ ಪೀಠಿಕೆಯ ಅವಿನಾಭಾವ ಸಂಬಂಧ ಬೆಸೆದಂತಾಗಿದೆ. ಇದು ಸಾಮಾಜಿಕ ಅರಿವಿನ ಬದ್ಧತೆಯನ್ನು ಹೆಚ್ಚಿಸಿದಂತಿದೆ” ಎಂದರು.
