ಮೈಸೂರು ಜಿಲ್ಲೆ ಹುಣಸೂರಿನಲ್ಲಿ ಇಂದು ಡಾ ಬಿ ಆರ್ ಅಂಬೇಡ್ಕರ್ ಹೋರಾಟ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಖಂಡಿಸಿ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನೆ ನಡೆಯಿತು.
ಸಂಸತ್ತಿನಲ್ಲಿ ಸಚಿವ ಅಮಿತ್ ಶಾ, “ಅಂಬೇಡ್ಕರ್ ಅಂಬೇಡ್ಕರ್.. ಎನ್ನುವುದು ಫ್ಯಾಷನ್ ಆಗಿದೆ. ಅಂಬೇಡ್ಕರ್ ಹೆಸರು ಹೇಳುವಷ್ಟು ಬಾರಿ ದೇವರ ಹೆಸರು ಹೇಳಿದ್ದರೆ ಸ್ವರ್ಗ ಪ್ರಾಪ್ತಿಯಾಗುತಿತ್ತು” ಎನ್ನುವ ಮೂಲಕ ಬಾಬಾ ಸಾಹೇಬರಿಗೆ ಅವಮಾನಿಸಿದ್ದರು. ಈ ವಿಚಾರವಾಗಿ ಹುಣಸೂರು ಪಟ್ಟಣದ ಸಂವಿಧಾನ ವೃತ್ತದಲ್ಲಿ ಜಿಲ್ಲೆಯ ಎಲ್ಲಾ ಪ್ರಗತಿಪರ ಸಂಘಟನೆಗಳು, ಎಲ್ಲಾ ಸಮುದಾಯ ಹಾಗೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ಜಮಾಯಿಸಿ ಅಮಿತ್ ಶಾ ಹೇಳಿಕೆ ಖಂಡಿಸಿ ಧಿಕ್ಕಾರ ಕೂಗಿದರು. ಕೂಡಲೇ ಅವರನ್ನು ಬಂಧಿಸುವಂತೆ ಆಗ್ರಹಿಸಿದರು.
ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಪುಟದಿಂದ ಸಚಿವ ಶಾ ಅವರನ್ನು ವಜಾ ಮಾಡಬೇಕು. ಸಂವಿಧಾನದಡಿ
ಅಧಿಕಾರಕ್ಕೆ ಬಂದು ಅದೇ ಸಂವಿಧಾನ ನಿರ್ಮಾತೃ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದು ಖಂಡನೀಯ. ಇಂತವರು ಅಧಿಕಾರದಲ್ಲಿರುವುದು ಶೋಭೆಯಲ್ಲ, ಸಂಪುಟದಿಂದ ವಜಾ ಮಾಡದೇ ಇದ್ದಲ್ಲಿ ದೇಶವ್ಯಾಪಿ ದೊಡ್ಡ ಹೋರಾಟದ ಮೂಲಕ ಬುದ್ಧಿ ಕಲಿಸಬೇಕಾಗುತ್ತದೆ” ಎನ್ನುವ ಸಂದೇಶ ರವಾನೆ ಮಾಡಿದರು.
“ಕೇಂದ್ರ ಸಚಿವ ಅಮಿತ್ ಶಾ ಮತ್ತು ಅವರ ಪಟಾಲಂಗಳು ದೇವರ ಹೆಸರು ಹೇಳಿ ಎಲ್ಲರೂ ಸ್ವರ್ಗಕ್ಕೆ ಹೋಗಲಿ. ಎಲ್ಲರಿಗೂ ಆದಷ್ಟು ಬೇಗ ಸ್ವರ್ಗ ಪ್ರಾಪ್ತಿಯಾಗಲಿ. ನಮಗೆ ನರಕ ಆದರೂ ಸರಿಯೇ ಡಾ ಬಾಬಾ ಸಾಹೇಬರ ಸಂವಿಧಾನದಡಿಯಲ್ಲಿ ಇಲ್ಲಿಯೇ ಬಾಳುತ್ತೇವೆ, ನಮಗೆ ನೆಮ್ಮದಿ ಇದೆ. ನಮಗೆ ಬದುಕು ಕೊಟ್ಟವರು ಅಂಬೇಡ್ಕರ್ ಅವರೇ ನಮ್ಮ ದೇವರು” ಎಂದು ಆಕ್ರೋಶ ಹೊರಹಾಕಿದರು.

ಸಮಾನತೆಯ ಸಮಾಜಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ, ಅವಹೇಳನಕಾರಿಯಾಗಿ ಮಾತಾಡುವುದನ್ನು ಎಂದಿಗೂ ಸಹಿಸುವುದಿಲ್ಲ. ಇದೇ ರೀತಿ ಮುಂದುವರಿದರೆ ತಕ್ಕ ಬುದ್ದಿ
ಕಲಿಸಬೇಕಾಗುತ್ತದೆ. ಈ ಕೂಡಲೇ ಅವರನ್ನು ಬಂಧಿಸಿ, ಸಂಪುಟದಿಂದ ವಜಾ ಮಾಡುವಂತೆ ತಾಲೂಕು ಉಪ ವಿಭಾಗಾಧಿಕಾರಿ ವಿಜಯ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಎಸಿಯವರು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದರು.
ಈ ಸುದ್ದಿ ಓದಿದ್ದೀರಾ?: ಮೈಸೂರು | ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ ಸಂಚಾರಿ ಕಣ್ಣಿನ ಘಟಕ
ಪ್ರತಿಭಟನೆಯಲ್ಲಿ ಹರಿಹರ ಆನಂದ ಸ್ವಾಮಿ, ಹೊಸೂರು ಕುಮಾರ್, ತಿಮ್ಮೆ ಗೌಡ್ರು, ರತ್ನಾಪುರಿ ಪುಟ್ಟಸ್ವಾಮಿ, ನಿಂಗರಾಜ್ ಮಲ್ಲಾಡಿ, ದೇವರಾಜ್ ಮಲ್ಲಾಡಿ, ಮಾಜಿ ಪೊಲೀಸ್ ಅಧಿಕಾರಿ ಸುಹೇಲ್ ಅಹಮದ್, ಬಸವಲಿಂಗಯ್ಯ, ದೇವರಾಜ್ ಒಡೆಯರ್, ವರದರಾಜು, ಜೆ ಮಹಾದೇವು, ಕಾಂತರಾಜು, ಅಪ್ಪಣ್ಣ, ನಿಲುವಾಗಿಲು ಪ್ರಭಾಕರ್, ಬಿಎಸ್‌ಪಿ ಪ್ರಸನ್ನ, ಬಿ ಕುಮಾರ್, ಬೆಂಕಿಪುರ ಚಿಕ್ಕಣ್ಣ, ದಶರಥ, ಅಗ್ರಹಾರ ರಾಮೇಗೌಡ, ವಕೀಲ ಪುಟ್ಟರಾಜು, ಕಿರಂಗೂರು ಸ್ವಾಮಿ, ದೇವರಾಜ ಹೈರಿಗೆ, ಗೋವಿಂದ ರಾಜು, ಶಿವರಾಜು, ಸಿದ್ದೇಶ್, ನಾರಾಯಣ, ರಾಜು ಚಿಕ್ಕ ಹುಣಸೂರು, ಅತ್ತಿಕುಪ್ಪೆ ರಾಮಕೃಷ್ಣ, ಗಿರೀಶ್, ಬಿಳಿಕೆರೆ ಸ್ವಾಮಿ, ಪುಟ್ಟರಾಜು, ಚೆಲುವರಾಜು, ನಾಗೇಶ್, ಅಭಿಲಾಶ್, ಪರಮೇಶ್, ರವೀಂದ್ರ, ಕೊಳಗಟ್ಟ ಕೃಷ್ಣ, ಹೊನ್ನಪ್ಪ, ಚಿಲ್ಕುಂದ ರವಿ, ಚೋರನ ಹಳ್ಳಿ ಶಿವಣ್ಣ, ಕೃಷ್ಣ, ಸಂತೋಷ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
