ಮೈಸೂರು ನಗರದ ಜೆಎಸ್ಎಸ್ ವಿದ್ಯಾಪೀಠ ವೃತ್ತದಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಕರ್ನಾಟಕ ಸಂಘಟನೆಯವರು ‘ಕನ್ನಡ ಬೆಳಗಲಿ – ಹಿಂದಿ ತೊಲಗಲಿ’ ಎಂದು ಘೋಷಣೆ ಕೂಗುತ್ತಾ, ಪ್ರತಿಭಟನೆ ನಡೆಸಿದರು.
ನವೆಂಬರ್ ತಿಂಗಳು ಕನ್ನಡ ರಾಜ್ಯೋತ್ಸವಕ್ಕೆ ಸೀಮಿತ ಮಾಡದೆ, ಒಂದು ತಿಂಗಳು ನಿರಂತರ ಸಂಭ್ರಮದ ಆಚರಣೆಯಾಗದೆ, ದೈನಂದಿನ ಬದುಕಾಗಿ, ಕನ್ನಡತನ ಮೆರೆಯುವ ಕೆಲಸ ಆಗಬೇಕಿದೆ. ಕನ್ನಡದ ಬಗ್ಗೆ ಜಾಗೃತಿ ಮೂಡಿಸಿ, ಅರಿವನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ಇತಿಹಾಸ ತಜ್ಞ ನಂಜರಾಜ ಅರಸ್ ಕರೆ ನೀಡಿದರು.
ಬ್ಯಾಂಕ್, ಪೋಸ್ಟ್ ಆಫೀಸ್, ರೈಲು ನಿಲ್ದಾಣ ಎಲ್ಲೆಲ್ಲೂ ಉತ್ತರ ಭಾರತೀಯರ ಹಾವಳಿ ಹೆಚ್ಚಿದ್ದು, ಕನ್ನಡ ಮರೆತಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡದ ಅರಿವನ್ನು ಮೂಡಿಸಬೇಕು. ಕನ್ನಡದಲ್ಲಿ ವ್ಯವಹರಿಸಬೇಕು. ಬೇರೆ ರಾಜ್ಯಗಳಿಂದ ಬಂದು ಇಲ್ಲಿ ನೆಲೆಸಿರುವವರಿಗೆ ನಮ್ಮ ನಾಡಿನ ಭಾಷೆಗೆ ಬೆಲೆ ಕೊಡುವುದನ್ನು ಕಲಿಸಬೇಕಿದೆ ಎಂದು ತಿಳಿಸಿದರು.
ಇಲ್ಲಿಯ ನೀರು, ಇಲ್ಲಿಯ ಅನ್ನ ಕನ್ನಡ ಮಾತ್ರ ಬೇಡ ಎನ್ನುವವರಿಗೆ ಕನ್ನಡದ ಮಹತ್ವ ಸಾರಬೇಕಿದೆ. ಬರೀ ಆಚರಣೆಗೆ ಸೀಮಿತವಾಗದೇ ಕನ್ನಡ ಅನುಸರಣೆ ದೈನಂದಿನ ಕರ್ತವ್ಯವಾಗಿ ಪಾಲನೆ ಮಾಡುವಂತೆ ಮಾಡಬೇಕು ಎಂದು ಕರೆ ನೀಡಿದರು.
ಇದನ್ನು ಓದಿದ್ದೀರಾ? ಮೈಸೂರು | ಪರಿಶಿಷ್ಟ ವಿದ್ಯಾರ್ಥಿಗಳಿಗೆ ಏಕಾಏಕಿ ಪರೀಕ್ಷಾ ಶುಲ್ಕ ಪಾವತಿಸಲು ಒತ್ತಾಯ: ಎಐಡಿಎಸ್ಓ ಪ್ರತಿಭಟನೆ
ಸಾಮಾಜಿಕ ಹೋರಾಟಗಾರ್ತಿ ಯಮುನಾ ಮಾತನಾಡಿ, ಕರ್ನಾಟಕದಲ್ಲಿ ಕನ್ನಡಿಗರು ಉದ್ಯೋಗ ವಂಚಿತರಾಗಿ, ಬೇರೆ ರಾಜ್ಯದವರಿಗೆ ಮಣೆ ಹಾಕುವಂತಹ ಕೆಲಸ ಆಗುತ್ತಿದೆ. ಇನ್ನಾದರೂ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು. ಹೊರ ರಾಜ್ಯದವರು ಕನ್ನಡ ಕಲಿತು ಕನ್ನಡದಲ್ಲಿ ವ್ಯವಹರಿಸಬೇಕು, ಕನ್ನಡವನ್ನು ಒಂದು ದಿನದ, ಒಂದು ತಿಂಗಳ ಆಚರಣೆ ಅನ್ನದೆ ದಿನನಿತ್ಯ ನಾವುಗಳು ಅನುಸರಿಸಿ, ಬೇರೆಯವರಿಗೂ ಅನುಸರಿಸುವಂತೆ ಮಾಡುವ ಹೊಣೆಗಾರಿಕೆ ನಮ್ಮದು ಎಂದರು.
ಪ್ರತಿಭಟನೆಯಲ್ಲಿ ಡಿಪಿಕೆ ಪರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
