ಮೈಸೂರು ಸಾಂಸ್ಕೃತಿಕ ನಗರಿ ಹಾಗೆಯೇ ವಿಶ್ವವಿಖ್ಯಾತ ನಗರ. ಕಲಾಸಕ್ತರಿಗೆ, ಕಲಾವಿದರಿಗೆ, ಸಾಹಿತಿಗಳಿಗೆ ತವರೂರಾಗಿದೆ. ಮೈಸೂರು ಪ್ರೇಕ್ಷಣೀಯ ಸ್ಥಳವನ್ನಷ್ಟೇ ಅಲ್ಲದೆ ಚಿತ್ರಮಂದಿರಗಳಿಂದಾಗಿಯೂ ಕಲಾ ರಸಿಕರನ್ನು ಸೆಳೆಯುವುದರಲ್ಲಿ ಮುಂದಿತ್ತು.
ಮೈಸೂರಿನಲ್ಲಿ ಖ್ಯಾತ ನಟರ ಚಿತ್ರಗಳು ಬಿಡುಗಡೆಯಾದರೆ ಜನವೋ ಜನ. ಚಿತ್ರ ಮಂದಿರದ ಮುಂದೆ ಬೃಹತ್ ಕಟೌಟ್, ಪಟಾಕಿ ಸಿಡಿಸುವುದು ಒಂಥರಾ ಹಬ್ಬದ ವಾತಾವರಣ. ಸಿನಿ ಆಸಕ್ತರು ಸಿನಿಮಾ ನೋಡಲು ಟಿಕೆಟ್ ಸಿಗಲಿಲ್ಲವೆಂದರೆ ಬ್ಲಾಕ್ ಟಿಕೆಟ್ ಪಡೆದಾದರೂ ಸಿನಿಮಾ ನೋಡಬೇಕು ಅನ್ನುವಷ್ಟರ ಮಟ್ಟಿಗಿದ್ದರು. ಬದಲಾದ ಬದುಕಿನ ಶೈಲಿಯಲ್ಲಿ ಸಿನಿಮಾ ಮಂದಿರಗಳನ್ನು ಮರೆತಂತಿದೆ.
ಸಧ್ಯದ ಪರಿಸ್ಥಿತಿಯಲ್ಲಿ ನಾ ಮುಂದು, ತಾ ಮುಂದು ಎನ್ನುವಂತೆ ಸದ್ದಿಲ್ಲದೆ ಒಂದೊಂದೇ ಚಿತ್ರ ಮಂದಿರಗಳು ಮುಚ್ಚುತ್ತಿವೆ.
ಒಂದು ಕಡೆ ವೀಕ್ಷಕರ ಕೊರತೆ, ಇನ್ನೊಂದು ಕಡೆ ಚಿತ್ರ ಮಂದಿರ ನಡೆಸಲಾರದ ಪರಿಸ್ಥಿತಿ.

ಕೋವಿಡ್ ಸಮಯದಲ್ಲಂತೂ ಚಿತ್ರ ಮಂದಿರದ ನಿರ್ವಹಣೆ ದುಬಾರಿಯಾಗಿ ಪರಿಣಮಿಸಿದೆ, ಚಿತ್ರ ಮಂದಿರಗಳ ಮೇಲಿನ ಹೆಚ್ಚಿನ ತೆರಿಗೆ. ಇದೆಲ್ಲವೂ ಕಾರಣವಾದರೆ ಇನ್ನೊಂದು ಕಡೆ ಮಾಲ್, ಮಲ್ಟಿಪ್ಲೆಕ್ಸ್‌ಗಳ ನಡುವೆ ಪೈಪೋಟಿ. ಓಟಿಟಿಯಲ್ಲಿ ಸಿನಿಮಾಗಳ ಬಿಡುಗಡೆ. ಪ್ರೇಕ್ಷಕರು ಮನೆಯಲ್ಲಿಯೇ ತಮ್ಮ ಮೊಬೈಲ್ ಬಳಸಿ ಕೂತಲ್ಲಿ ಸಿನಿಮಾ ನೋಡುವ ಸ್ಥಿತಿ ಬಂದಾಗಿನಿಂದ ಚಿತ್ರ ಮಂದಿರಗಳ ಮಾಲೀಕರು ಹೈರಾಣಾಗಿದ್ದಾರೆ.

ಚಿತ್ರಮಂದಿರಗಳು ಬಣಗುಡುತ್ತಿವೆ. ಆಗೊಮ್ಮೆ ಈಗೊಮ್ಮೆ ಅನ್ನುವಂತೆ ಒಂದೆರೆಡು ದಿನ, ಅಪರೂಪಕ್ಕೊಮ್ಮೆ ಚಿತ್ರ ಮಂದಿರಗಳು ಭರ್ತಿಯಾಗಬಹುದೇ ವಿನಃ ಪ್ರತಿ ದಿನ ಪ್ರೇಕ್ಷಕರಿಲ್ಲದೆ ನಿರ್ವಹಣೆ ಮಾಡಲು ಆಗದ ಪರಿಸ್ಥಿತಿ ಕಾಡ ಹೊರಟಿದೆ. ಇದರಿಂದ ನೊಂದ ಚಿತ್ರ ಮಂದಿರಗಳ ಮಾಲೀಕರು ಚಿತ್ರ ಮಂದಿರಗಳನ್ನು ಕೆಡವಿ ವಾಣಿಜ್ಯ ಕಟ್ಟಡಗಳ ಮೊರೆ ಹೋಗುತ್ತಿದ್ದಾರೆ. ಮೈಸೂರಿನಲ್ಲಿ ಈಗಾಗಲೇ ಸಾಕಷ್ಟು ಚಿತ್ರಮಂದಿರಗಳು ನೆಲಸಮವಾಗಿವೆ. ಅದರಲ್ಲಿ ಹೊಸ ಸೇರ್ಪಡೆ ಸರಸ್ವತಿ ಚಿತ್ರಮಂದಿರ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆಚ್ಚಿನ ಚಿತ್ರಮಂದಿರ ಕೆ ಜಿ ಕೊಪ್ಪಲಿನ ಸರಸ್ವತಿ ಚಿತ್ರಮಂದಿರ. ಆದರೆ ಇದೀಗ ಚಿತ್ರ ಪ್ರದರ್ಶನ ನಿಲ್ಲಿಸಿದೆ. ಮೈಸೂರಿನಲ್ಲಿ ಈವರೆಗೆ ಒಟ್ಟು 15 ಚಿತ್ರ ಮಂದಿರಗಳ ಬಾಗಿಲುಗಳು ಮುಚ್ಚಿವೆ.

- ಶ್ರೀ ನಾಗರಾಜ
- ಶಾಳುಮಾರ್
- ರಣಜಿತ್
- ಅಪೇರ
- ರತ್ನ
- ಶಾಂತಲಾ
- ಲಕ್ಷ್ಮಿ
- ಗಣೇಶ
- ಒಲಂಪಿಯಾ
- ಗೋಕುಲ
- ರಿಜೆನ್ಸಿ
- ಸ್ಟರ್ಲಿಂಗ್
- ವಿದ್ಯಾರಣ್ಯ
- ಚಾಮುಂಡೇಶ್ವರಿ
- ಉಮಾ
ಈಗ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಾಗಿ ಚಾಮರಾಜ ಜೋಡಿ ರಸ್ತೆಯ ಗಾಯತ್ರಿ, ಗಾಂಧಿ ವೃತ್ತದ ಪ್ರಭಾ, ಹಳ್ಳದ ಕೇರಿಯ ಸಂಗಮ್, ಬಿ ಎನ್ ರಸ್ತೆ ಉಡ್ ಲ್ಯಾಂಡ್, ಅಗ್ರಹಾರದ ಪದ್ಮ ಇವಿಷ್ಟು ಚಿತ್ರಮಂದಿರಗಳು ಮಾತ್ರ ನಮ್ಮ ಮುಂದಿವೆ.

ಸಿನಿ ರಸಿಕರು ಚಿತ್ರ ಮಂದಿರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಚಿತ್ರ ಮಂದಿರದಲ್ಲಿಯೇ ಸಿನಿಮಾ ನೋಡುವಂತಾಗಬೇಕು. ಕಲಾವಿದರನ್ನು ಪ್ರೋತ್ಸಾಹಿಸಿ, ಬೆಂಬಲಿಸಬೇಕು. ಮನರಂಜನೆಯ ತಾಣವಾದ ಚಿತ್ರ ಮಂದಿರಗಳು ಇತಿಹಾಸದ ಪುಟ ಸೇರುವಂತಾಗಬಾರದು. ಇನ್ನಾದರೂ ಸಿನಿ ರಸಿಕರು ಚಿತ್ರ ಮಂದಿರದ ಕಡೆಗೆ ಹೆಜ್ಜೆ ಇಡುವಂತಾಗಲಿ.
ಈ ಸುದ್ದಿ ಓದಿದ್ದೀರಾ? ಈ ದಿನ ಇಂಪ್ಯಾಕ್ಟ್ | ಶಿಕ್ಷಕನ ಎಡವಟ್ಟಿಂದ ವಿದ್ಯಾರ್ಥಿಯ ಎದೆ ಭಾಗದ ಮೂಳೆ ಮುರಿತ; ಬಿಇಒ ರಮೇಶ್ ಪೋಷಕರಿಗೆ ಪರಿಹಾರ ಕೊಡಿಸಿದ್ದಾದರೂ ಹೇಗೆ?
ಸ್ಥಳೀಯ ಕಾರ್ಪೊರೇಷನ್ ಚಿತ್ರ ಮಂದಿರಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಬೇಕು. ಹಾಗೆಯೇ ಚಿತ್ರ ಮಂದಿರಗಳ ಉಳಿವಿಗೆ ಮುಂದಾಗಬೇಕು.
