ಕೇಂದ್ರ ಸರ್ಕಾರದ ಯೋಜನೆಯಾದ ಭಾರತ್ ಬ್ರಾಂಡ್ ಅಕ್ಕಿಯ ವಿತರಣೆಗಾಗಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಏಕೆಂದರೆ ನಗರ ಮಾರುಕಟ್ಟೆಗಳಲ್ಲಿ ಕಡಿಮೆ ದರ್ಜೆಯ ಅಕ್ಕಿಯ ಬೆಲೆಗಳು ₹50 ಮಿತಿಯನ್ನು ಸಮೀಪಿಸುತ್ತಿವೆ. ಕೇಂದ್ರ ಸರ್ಕಾರದಿಂದ ₹29ಕ್ಕೆ ಮಾರಾಟವಾಗುವ ಭಾರತ್ ಬ್ರಾಂಡ್ ಅಕ್ಕಿ ಪ್ರಸ್ತುತ ಎಲ್ಲೆಡೆ ಲಭ್ಯವಿಲ್ಲ. ಇದರಿಂದ ಮೈಸೂರು ನಗರದ ನಿವಾಸಿಗಳ ಸಂಕಟ ಇನ್ನಷ್ಟು ಹದಗೆಡುತ್ತಿದೆ.
ಮುಕ್ತ ಮಾರುಕಟ್ಟೆಯಲ್ಲಿ, ಬರ ಮತ್ತು ಇತರ ಉತ್ಪಾದನೆಯ ಪೂರೈಕೆ ಸಮಸ್ಯೆಗಳಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಅಕ್ಕಿಯ ದರವು ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಬ್ಸಿಡಿ ಅಕ್ಕಿಗೆ ಬೇಡಿಕೆ ಹೆಚ್ಚಾಗಿದೆ.
“ಭಾರತ್ ಬ್ರಾಂಡ್ ಅಕ್ಕಿಯ ಮಾರಾಟ ಕೇಂದ್ರಗಳ ವಿವರಗಳು ನಗರ ಮತ್ತು ಜಿಲ್ಲೆಯಲ್ಲಿ ಲಭ್ಯವಿಲ್ಲ. ಪಟ್ಟಭದ್ರ ಹಿತಾಸಕ್ತಿಗಳಿಂದ ಇದರ ದುರುಪಯೋಗ ಆಗಬಹುದು. ಈ ಬ್ರಾಂಡ್ ಅಕ್ಕಿಯನ್ನು ಎಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಯಾರು ಖರೀದಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ತಿಳಿದಿಲ್ಲ. ಈ ಅಕ್ಕಿ ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಭಾವಿಸಿ ಬಹುತೇಕರು ಚಿಲ್ಲರೆ ಮಳಿಗೆಗಳಿಗೆ ಮುಗಿಬೀಳುತ್ತಿದ್ದಾರೆ” ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಭಾರತ್ ಬ್ರಾಂಡ್ ಅಕ್ಕಿಯ ಬಗ್ಗೆ ಎಲ್ಲಿಯೂ ಮಾಹಿತಿ ಲಭ್ಯವಿಲ್ಲ. ಅಂಗಡಿಗಳಲ್ಲಿ, ಸರಾಸರಿ ಗುಣಮಟ್ಟದ ಅಕ್ಕಿ ಈಗ ₹60ಕ್ಕಿಂತ ಹೆಚ್ಚಾಗಿದೆ. ಹಾಗಾಗಿ ಈ ಬ್ರಾಂಡ್ ಅಕ್ಕಿ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗುತ್ತದೆಂದು ಎಲ್ಲರೂ ನಿರೀಕ್ಷಿಸಿದ್ದರು. ದುರದೃಷ್ಟವಶಾತ್, ಅಕ್ಕಿಯ ಮಾರಾಟ ಕೇಂದ್ರಗಳನ್ನು ಎಲ್ಲಿ ಸ್ಥಾಪಿಸಲಾಗಿದೆ ಎಂಬುದರ ವಿವರಗಳನ್ನು ಯಾರೂ ಹಂಚಿಕೊಳ್ಳುತ್ತಿಲ್ಲ” ಎಂದು ಟಿ ಕೆ ಲೇಔಟ್ ನಿವಾಸಿಯೊಬ್ಬರು ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಬೇಸಿಗೆಗೂ ಮುನ್ನವೇ ಬಿಸಿಲಿನ ಧಗೆ, ಮಣ್ಣಿನ ಮಡಕೆಗಳತ್ತ ಜನರ ಚಿತ್ತ
“ಈ ಯೋಜನೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಲು, ಈ ಅಕ್ಕಿಯನ್ನು ಯಾವ ಪ್ರದೇಶಗಳಲ್ಲಿ ವಿತರಿಸಲಾಗುತ್ತಿದೆ. ಎಲ್ಲ ವಿವರಗಳನ್ನು ಸಾರ್ವಜನಿಕರು ಎಲ್ಲಿ ಪಡೆಯುತ್ತಾರೆಂದು ಸರ್ಕಾರಿ ಸಂಸ್ಥೆಗಳು ಖಚಿತಪಡಿಸಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಭಾರತ್ ಬ್ರಾಂಡ್ ಅಕ್ಕಿಯ ಬಗ್ಗೆ ಬಿಜೆಪಿ ನಾಯಕರಿಗೂ ಮಾಹಿತಿ ತಿಳಿದಿಲ್ಲ. ಈ ನಡುವೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಗಳು, “ಈ ಯೋಜನೆಯನ್ನು ಕೇಂದ್ರ ಏಜೆನ್ಸಿಗಳು ಜಾರಿಗೆ ತರುತ್ತಿವೆ. ಆದರೆ, ಅವುಗಳು ಯಾವುದೇ ಪಾತ್ರ ನಿರ್ವಹಿಸುವುದಿಲ್ಲ”ವೆಂದು ಗಮನಸೆಳೆದಿವೆ.
