ಮೈಸೂರು | ಗಾಂಜಾ ಮತ್ತಿನಲ್ಲಿ ಯುವಜನರ ಅಸಭ್ಯ ವರ್ತನೆ; ಎಸ್‌ಪಿ, ಅರಣ್ಯ ಇಲಾಖೆ ಅಲರ್ಟ್‌

Date:

Advertisements

ಕರ್ನಾಟಕ ಹಾಗೂ ಕೇರಳ ಗಡಿಭಾಗದಲ್ಲಿ ಗಾಂಜಾ ಸೇವಿಸಿ ಮಸ್ತಿ ಮಾಡುವ ಯುವ ಸಮುದಾಯದ ಪ್ರಕರಣಗಳು ಕಂಡು ಬರುತ್ತಿವೆ. ಅದರಲ್ಲೂ ಗಡಿಭಾಗದ ಕಬಿನಿ ಹಿನ್ನೀರು ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿರುವುದರಿಂದ ಪೊಲೀಸ್‌ ಹಾಗೂ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಕೆಲ ಯುವಕ ಯುವತಿಯರ ಗುಂಪು ಕೇರಳದಿಂದ ಆಗಮಿಸಿದ್ದು, ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ಈಗಾಗಲೇ ಗಸ್ತು ಪ್ರಮಾಣವನ್ನು ಹೆಚ್ಚಿಸಿದ್ದು, ಇಂತಹ ಪ್ರಕರಣ ಕಂಡು ಬಂದರೆ ಕೂಡಲೇ ನೇರವಾಗಿ ತಮಗೆ ಮಾಹಿತಿ ನೀಡಬೇಕೆಂದು ಸೂಚನೆ ನೀಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಯೂ ಇಂತಹ ಪ್ರಕರಣ ಕಂಡಾಗ ಮುನ್ನೆಚ್ಚರಿಕೆ ವಹಿಸುವ ಜತೆಗೆ ಸಿಬ್ಬಂದಿ ಸದಾ ಎಚ್ಚರವಾಗಿರುವಂತೆ ಸೂಚನೆ ನೀಡಿದ್ದಾರೆ.

Advertisements

ಕೇರಳದ ವಯನಾಡು ಜಿಲ್ಲೆಯ ಭಾಗದಿಂದ ಕರ್ನಾಟಕದ ಅರಣ್ಯ ಪ್ರದೇಶದ ಕಡೆಗೆ ಬರುವವರ ಸಂಖ್ಯೆ ಮೊದಲಿನಿಂದಲೂ ಇದೆ. ಅದರಲ್ಲೂ ಕೊಡಗು- ಮೈಸೂರು ಜಿಲ್ಲೆ ಸಂಪರ್ಕಿಸುವ ಡಿಬಿಕುಪ್ಪೆ, ಕುಟ್ಟ ,ಮಾಕುಟ್ಟ ಭಾಗದ ಕಡೆಯಿಂದ ಕೇರಳದವರು ಆಗಮಿಸುತ್ತಾರೆ. ಈ ಭಾಗದಲ್ಲಿ ಕಬಿನಿ ಹಿನ್ನೀರ ಪ್ರದೇಶವಿದೆ. ಅರಣ್ಯ ಪ್ರದೇಶವೂ ಚೆನ್ನಾಗಿರುವುದರಿಂದ ಗಡಿ ದಾಟಿಕೊಂಡು ಬರುತ್ತಾರೆ.

ಕೆಲವರು ಕುಟುಂಬ ಸಮೇತರಾಗಿ ಬಂದು ಇಲ್ಲಿ ಕಳೆದು ಹೋಗುವುದು ಇದೆ. ಆದರೆ ಕೆಲ ಯುವಕ ಯುವತಿಯರು, ವಿದ್ಯಾರ್ಥಿಗಳು ಮೋಜು ಮಸ್ತಿ ನೆಪದಲ್ಲಿ ಬರುತ್ತಾರೆ. ಕೆಲವರಂತೂ ಮದ್ಯಪಾನ ಮಾಡುವ ಸನ್ನಿವೇಶದಲ್ಲಿದ್ದರೆ, ಇನ್ನಷ್ಟು ಮಂದಿ ಗಾಂಜಾ ಸೇವಿಸಿ ಮಸ್ತಿಯಲ್ಲಿ ಕಳೆಯುವ ಚಿತ್ರಣಗಳೂ ಗಡಿ ಭಾಗದಲ್ಲಿ ಕಾಣ ಸಿಗುತ್ತವೆ. ಗಾಂಜಾ ಸೇವಿಸಿದಾಗ ಅಸಭ್ಯವಾಗಿ ವರ್ತಿಸಿ ಸ್ಥಳೀಯರ ಕೈಗೆ ಸಿಲುಕಿ ಏಟು ತಿಂದ ಪ್ರಕರಣಗಳೂ ಇವೆ. ಕೆಲವರನ್ನು ಸ್ಥಳೀಯ ಪೊಲೀಸರಿಗೆ ಅಥವಾ ಅರಣ್ಯ ಇಲಾಖೆ ಸಿಬ್ಬಂದಿ ಸುಪರ್ದಿಗೆ ನೀಡಿ ಬುದ್ದಿವಾದ ಹೇಳಿ ಕಳುಹಿಸುವ ಸನ್ನಿವೇಶಗಳೂ ಕಂಡುಬಂದಿವೆ.

ಕೇರಳದಿಂದ ಹರಿದು ಬರುವ ಕಬಿನಿ ನದಿಗೆ ಮೈಸೂರು ಜಿಲ್ಲೆಯ ಎಚ್‌ಡಿಕೋಟೆ ತಾಲೂಕಿನಲ್ಲಿ ಜಲಾಶಯ ನಿರ್ಮಿಸಿದ ನಂತರ ಕಬಿನಿ ಹಿನ್ನೀರು ಯಥೇಚ್ಛವಾಗಿದೆ. ನೀರಿನ ಜತೆಗೆ ವನ್ಯಜೀವಿಗಳ ಪ್ರಮಾಣವೂ ಇದೆ. ಈ ಕಾರಣದಿಂದ ಕೇರಳ ಭಾಗದಿಂದ ಹೆಚ್ಚು ಯುವಜನರು ಬೈಕ್‌, ಕಾರುಗಳಲ್ಲಿ ಡ್ರೈವ್‌ ಬರುತ್ತಾರೆ. ಈ ವೇಳೆ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಖಾಲಿ ಇರುವ ಭಾಗಕ್ಕೂ ತೆರಳುತ್ತಾರೆ. ಇಲ್ಲಿ ಮೋಜು ಮಸ್ತಿ ಮಾಡುವುದು ಸಾಮಾನ್ಯವಾಗಿದೆ. ಕೆಲವರು ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಾರೆಂಬ ಆರೋಪಗಳು ಕೇಳಿಬಂದಿವೆ.

“ವಯನಾಡು ಭಾಗದಿಂದ ಕಬಿನಿ ಹಿನ್ನೀರಿಗೆ ಹೋಗಲು ಹಲವು ಮಾರ್ಗಗಳಿವೆ. ಇವರೆಲ್ಲಾ ಪೊಲೀಸ್‌ ಹಾಗೂ ಅರಣ್ಯ ಇಲಾಖೆಯವರ ಕಣ್ಣು ತಪ್ಪಿಸಿ ಒಳನುಗ್ಗುತ್ತಾರೆ. ಬೀಚನಹಳ್ಳಿ ಹಾಗೂ ಅಂತರಸಂತೆ ಠಾಣೆಗಳು ದೂರ ಇವೆ. ಡಿಬಿಕುಪ್ಪೆಯಲ್ಲಿ ಹೊರ ಪೊಲೀಸ್‌ ಠಾಣೆ ಮಾತ್ರ ಇದೆ. ಏನಾದರೂ ನಿರ್ದಿಷ್ಟ ದೂರು ಬಂದಾಗ ಪೊಲೀಸರು ಅಥವಾ ಅರಣ್ಯ ಇಲಾಖೆಯವರು ಅನೈತಿಕ ಚಟುವಟಿಕೆಗಳಲ್ಲಿ ತೊಡಗುವವರನ್ನು ಕರೆದು ವಿಚಾರಿಸುತ್ತಾರೆ. ಗಮನಕ್ಕೆ ಬಾರದೇ ಇಲ್ಲವೇ ದೂರು ಇಲ್ಲದೇ ಇದ್ದಾಗ ಪೊಲೀಸರೂ ಕೂಡ ಸುಮ್ಮನಾಗಿಬಿಡುತ್ತಾರೆ” ಎಂದಿದ್ದಾರೆ.

“ಗಡಿಭಾಗದಲ್ಲಿ ನೂರಕ್ಕೂ ಹೆಚ್ಚು ಹೋಂಸ್ಟೇಗಳಿದ್ದು, ಇಲ್ಲಿಗೂ ಬಂದು ವಾಸ್ತವ್ಯ ಹೂಡಿ ದಿನ ಕಳೆದು ಹೋಗುವವರೂ ಇದ್ದಾರೆ. ಕೆಲವು ಹೋಂಸ್ಟೇಗಳಲ್ಲಿ ಎಲ್ಲ ಸೇವೆಗಳೂ ಸಿಗುವುದರಿಂದ ಅವುಗಳನ್ನು ಹುಡುಕಿಕೊಂಡು ಬರುವವರೂ ಇದ್ದಾರೆ. ಗಾಂಜಾ ಸೇರಿದಂತೆ ಮತ್ತೇರಿಸುವ ವಸ್ತುಗಳು ಗುಪ್ತವಾಗಿ ಮಾರಾಟವಾಗುವುದರಿಂದ ಗೊತ್ತಿದ್ದವರ ಮೂಲಕ ಪಡೆಯುವವರೂ ಇದ್ದಾರೆ. ಹೋಂಸ್ಟೇಗಳಲ್ಲಿ ಸಿಲುಕಿಕೊಳ್ಳಬಹುದು ಎನ್ನುವ ಭಯದಿಂದ ಕಬಿನಿ ಹಿನ್ನೀರು ಅಥವಾ ಮುಕ್ತ ಪ್ರದೇಶಕ್ಕೆ ಆಗಮಿಸುತ್ತಾರೆ. ಪೊಲೀಸ್‌ ಹಾಗೂ ಅರಣ್ಯ ಇಲಾಖೆಯವರಿಗೆ ಇದು ತಿಳಿದಿದ್ದರೂ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಯಾರಾದರೂ ದೂರು ನೀಡಿದರೆ ಮಾತ್ರ ಕ್ರಮ ಕೈಗೊಳ್ಳಬಹುದೆಂದು ಪೊಲೀಸರು ಹೇಳುತ್ತಾರೆ” ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಬಿನಿ ಹಿನ್ನೀರಿನಲ್ಲಿ ಡಿಸೆಂಬರ್‌ ನಂತರ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಫೆಬ್ರವರಿ ಮಾರ್ಚ್‌ ಏಪ್ರಿಲ್‌ ತಿಂಗಳಿನಲ್ಲಂತೂ ನೀರು ಸಂಪೂರ್ಣ ಕುಸಿತವಾಗುವುದರಿಂದ ಕಬಿನಿ ಹಿನ್ನೀರ ಪ್ರದೇಶವೂ ಮುಕ್ತವಾಗುತ್ತದೆ. ಈ ವೇಳೆ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಮೋಜು ಮಸ್ತಿಗೆ ಮುಂದಾಗುತ್ತಾರೆ. ಈ ಬಾರಿಯೂ ಫೆಬ್ರವರಿಯಲ್ಲಿ ಕೇರಳದಿಂದ ಬಂದ ಆರು ಜನ ಯುವಕ ಯುವತಿಯರ ತಂಡ ಮೋಜು ಮಸ್ತಿ ಮಾಡಿದೆ. ಈ ಪ್ರದೇಶ ಕೇರಳ ಹಾಗೂ ಕರ್ನಾಟಕ ಗಡಿ ಪ್ರದೇಶಕ್ಕೆ ಬರುತ್ತದೆ. ಕೇರಳದ ವಯನಾಡು ಜಿಲ್ಲೆಯ ಪುಲಪಳ್ಳಿ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿ ಪ್ರಕರಣ ದಾಖಲಾಗಿದೆ. ಈ ವಿಡಿಯೋ ಈಗ ವೈರಲ್‌ ಆಗಿದೆ.

“ಕರ್ನಾಟಕ ಕೇರಳ ಗಡಿಭಾಗದಲ್ಲಿ ಗಾಂಜಾ ಮತ್ತಿನಲ್ಲಿ ಯುವತಿಯರು ಎಂಬ ವಿಡಿಯೋಗೆ ಸಂಬಂಧಿಸಿದಂತೆ ಫೆಬ್ರವರಿ 05ರಲ್ಲಿ ಕೇರಳದ ವಯನಾಡು ಜಿಲ್ಲೆಯ ಪುಲಪಳ್ಳಿ ಪೊಲೀಸ್ ಠಾಣೆಯಲ್ಲಿ Cr no 79/2023 ರಲ್ಲಿ ಪ್ರಕರಣ ದಾಖಲಾಗಿದೆ .ಇದು ಹಳೆಯ ವಿಡಿಯೋವಾಗಿದೆ. ಈ ಘಟನೆ ನಡೆದಿರುವುದು ನಮ್ಮ ವ್ಯಾಪ್ತಿಯಲ್ಲಲ್ಲ. ಕೇರಳದ ಪ್ರದೇಶಕ್ಕೆ ಬರುವುದರಿಂದ ಅಲ್ಲಿ ಮೊಕದ್ದಮೆ ದಾಖಲಾಗಿದೆ. ಆದರೂ ನಮ್ಮ ಭಾಗಕ್ಕೂ ಹೀಗೆ ಬಂದು ಅಸಭ್ಯವಾಗಿ ವರ್ತಿಸುವ, ಮಾದಕ ವಸ್ತುಗಳನ್ನು ಬಳಸುವ ಪ್ರಕರಣಗಳೂ ವರದಿಯಾಗುತ್ತಲೇ ಇರುತ್ತವೆ. ಈ ಕುರಿತು ನಮ್ಮ ಪೊಲೀಸರಿಗೂ ಕಟ್ಟೆಚ್ಚರದಲ್ಲಿರುವಂತೆ ಸೂಚನೆ ನೀಡಲಾಗಿದೆ” ಎಂದು ಮೈಸೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್‌ ತಿಳಿಸಿದ್ದಾರೆ.

“ಮೈಸೂರು ಜಿಲ್ಲಾ ಪೊಲೀಸ್ ಘಟಕವು ಮಾದಕ ವಸ್ತುಗಳ ಸಾಗಾಟ ಮತ್ತು ಮಾರಾಟಗಳ ಮೇಲೆ ನಿಗಾ ವಹಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಯಾವುದೇ ಮಾಹಿತಿಗಳಿದ್ದಲ್ಲಿ ನಮಗೆ ನೇರವಾಗಿ ಸಂದೇಶ ಕಳುಹಿಸಬಹುದು” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕವಾಡಿಗರಹಟ್ಟಿಗೆ ಲೋಕಾಯುಕ್ತ ನ್ಯಾ. ಬಿ ಎಸ್‌ ಪಾಟೀಲ್‌ ದಿಢೀರ್‌ ಭೇಟಿ, ಅಧಿಕಾರಿಗಳಿಗೆ ತರಾಟೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿಬಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಗೆ ಬರುವ ಹಿನ್ನೀರಿನಲ್ಲಿ ಪ್ರವಾಸಿಗರು ಬರುವುದು ಸಾಕಷ್ಟಿದೆ. ಬಾವಲಿಯಲ್ಲಿ ಅರಣ್ಯ ಇಲಾಖೆ ಚೆಕ್‌ ಪೋಸ್ಟ್‌ ಇದೆ. ಆದರೆ ಈ ಮಾರ್ಗವಾಗಿ ಬಾರದೇ ಅಡ್ಡದಾರಿ ಹಿಡಿದು ಹೋಗುತ್ತಾರೆ. ಇದು ಅರಣ್ಯ ಇಲಾಖೆಯವರಿಗೂ ತಲೆನೋವು ತರಿಸಿದೆ.

“ಕಬಿನಿ ಹಿನ್ನೀರಿಗೆ ಹೊಂದಿಕೊಂಡ ಹಲವು ಕಡೆ ಆಗಾಗ ಹೀಗೆ ಮಾದಕವಸ್ತು ಬಳಸುವ ಇಲ್ಲವೇ ಮೋಜು ಮಸ್ತಿ ಮಾಡಿ ವನ್ಯಜೀವಿಗಳಿಗೆ ಕಿರಿಕಿರಿ ಮಾಡುವುದೂ ಇದೆ. ಅಂಥವರಿಗೆ ಎಚ್ಚರಿಕೆ ನೀಡಿದ್ದೇವೆ. ಮಾದಕ ವಸ್ತುಗಳೊಂದಿಗೆ ಸಿಕ್ಕಿಬಿದ್ದರೆ ಪ್ರಕರಣ ದಾಖಲಿಸುವಂತೆಯೂ ನಮ್ಮ ಸಿಬ್ಬಂದಿಗೆ ತಿಳಿಸಿದ್ದೇವೆ. ಜಲಸಂಪನ್ಮೂಲ ಇಲಾಖೆಯವರಿಗೂ ಇಂಥವರು ಕಂಡು ಬಂದರೆ ತಿಳಿಸುವ ಜತೆಗೆ ಅನಗತ್ಯ ಓಡಾಟಕ್ಕೆ ಅವಕಾಶ ಮಾಡಿಕೊಡದಂತೆಯೂ ಸೂಚಿಸಿದ್ದೇವೆ” ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಕುಮಾರ ಚಿಕ್ಕನರಗುಂದ ಸ್ಪಷ್ಟಪಡಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X