ಮೈಸೂರು ಗ್ರಾಮಾಂತರ ತಾಲೂಕು ಬಿಳಿಕೆರೆ ವ್ಯಾಪ್ತಿಯ ಪಿಟಿಸಿಎಲ್ ಪರಭಾರೆ ನಿಷೇಧಿತ ಭೂಮಿಯನ್ನು ಮಾರಾಟ ಮಾಡಿದ್ದು, ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹುಣಸೂರು ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಆರೋಪ ಮಾಡಿದ್ದಾರೆ.
“ಬೆಂಕಿಪುರ ಸರ್ವೇ ನಂ 60, 61, 47ರಲ್ಲಿ ಎಸ್‌ಸಿ/ಎಸ್‌ಟಿ ಜನಾಂಗದ ರೈತರಿಗೆ ದರಖಾಸ್ತು ಭೂಮಿ ಮಂಜೂರಾಗಿದ್ದು, ಬಿಳಿಕೆರೆ ಆರ್ ಐ ಮಂಜುನಾಥ್ ಯಾವುದೇ ಗ್ರಾಮ ವರದಿ ಹಾಗೂ ನಕಾಶೆಯಿಲ್ಲದೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಖಾತೆ ಮಾಡಿದ್ದಾರೆ” ಎಂದರು.
“ಬೆಂಕಿಪುರ ಸರ್ವೇ ನಂ 60, 61, 47ರಲ್ಲಿ ಸುಮಾರು 50ಕ್ಕೂ ಹೆಚ್ಚು ದರಖಾಸ್ತು ಭೂಮಿಯು ಎಸ್‌ಸಿ/ಎಸ್‌ಟಿ ಜನಾಂಗದ ರೈತರಿಗೆ ಸರ್ಕಾರದಿಂದ ಮಂಜೂರಾಗಿದ್ದು, ಕಚೇರಿಯ ದಾಖಲಾತಿಗಳು ಕಾಣೆಯಾಗಿವೆಯೆಂದು ಗೋಪಿನಾಥ್ ಎಂಬುವರು ನಕಲಿ ದಾಖಲೆಗಳನ್ನು ಮಾಡಿಸಿ ರೈತರಿಂದ ಕಡಿಮೆ ಬೆಲೆಗೆ ತೆಗೆದುಕೊಂಡು ಅಕ್ರಮವಾಗಿ ದುರಸ್ತಿ ಮಾಡಿಸಿಕೊಂಡಿರುದ್ದಾರೆ. ಇದರ ಜತೆಗೆ ಮೈಸೂರು ಮೂಲದ ಶ್ರೀಮಂತ ಉದ್ಯಮಿ ಶ್ರೀಕಾಂತ ದಾಸ್ ಇಎಸ್ಎಸ್ ಫ್ಯಾಕ್ಟರಿ ಮ್ಯಾನೇಜರ್‌ಗೆ ಗ್ರಾಮ ಲೆಕ್ಕಾಧಿಕಾರಿ ವರದಿ ಹಾಗೂ ಜಮೀನು ನಕಾಶೆಯಿಲ್ಲದೆ ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಬಿಳಿಕೆರೆ ಆರ್ ಐ ಮಂಜುನಾಥ್ ಖಾತೆ ಮಾಡಿದ್ದಾರೆ” ಎಂದು ಬೆಂಕಿಪುರ ಚಿಕ್ಕಣ್ಣ ಆರೋಪಿಸಿದರು.

ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, “ಮುಖ್ಯಮಂತ್ರಿಯವರಿಗೆ ಮನವಿ ಮೂಲಕ ದೂರು ಕೊಟ್ಟಿದ್ದು, ಅವರು ಹುಣಸೂರಿನ ಉಪ ವಿಭಾಗಾಧಿಕಾರಿಯವರಿಗೆ ತುರ್ತಾಗಿ ಕ್ರಮವಹಿಸಲು ಪತ್ರದ ಮೂಲಕ ತಿಳಿಸಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ತಾಲೂಕು ರೈತ ಸಂಘದ ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಹಾಗೂ ಪದಾಧಿಕಾರಿಗಳು ವಿಚಾರಿಸಲು ಹೋದಾಗ ಹಗುರವಾಗಿ ಬಾಯಿಗೆ ಬಂದಂತೆ ಮಾತನಾಡಿ, ಅವಾಚ್ಯ ಶಬ್ದದಿಂದ ನಿಂದಿಸಿ, ಗೂಂಡಾಗಿರಿ ವರ್ತನೆ ತೋರಿ ಪ್ರಾಣ ಬೆದರಿಕೆ ಹಾಕಿದ್ದಾರೆ” ಎಂದರು.
“ಅಕ್ರಮ ಖಾತೆ ಮಾಡಿರುವ ವಿರುದ್ಧ ಕಾನೂನು ಶಿಸ್ತು ಕ್ರಮ ಜರುಗಿಸಿ ಸೇವೆಯಿಂದ ಅಮಾನತು ಮಾಡಿ ರೈತರ ಭೂಮಿ ಕೊಡಿಸಿ, ಅನುಕೂಲ ಮಾಡಿಕೊಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹಾಸನ l 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿ ಮಾಡಬೇಕು: ರೈತ ಧರ್ಮರಾಜ್
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ ಮಾತನಾಡಿ, “ಬಿಳಿಕೆರೆ ಹೋಬಳಿ ವ್ಯಾಪ್ತಿಯ ಕಂದಾಯ ನಿರೀಕ್ಷಕ ಮಂಜುನಾಥ್ ಕೇಂದ್ರಸ್ಥಾನದಲ್ಲಿ ಕರ್ತವ್ಯ ನಿರ್ವಹಣೆ ಮಾಡದೆ ಇರುವುದು, ದೂರು ನೀಡಿದರೂ ಈವರೆಗೆ ಯಾವುದೇ ಕಾನೂನು ರೀತಿಯ ಕ್ರಮ ವಹಿಸದೆ ಇರುವುದು, ಬೆಂಕಿಪುರ ಚಿಕ್ಕಣ್ಣನವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಒಡ್ಡಿರುವುದು ಸೇರಿದಂತೆ ಹಲವು ಅನ್ಯಾಯಗಳನ್ನು ಖಂಡಿಸಿ ನವೆಂಬರ್ 28ರಂದು ಹುಣಸೂರಿನ ತಾಲೂಕು ಕಚೇರಿ ಎದುರು ಧರಣಿ ನಡೆಸಲಾಗುವುದು” ಎಂದರು.
“ಎಸ್‌ಸಿ/ಎಸ್‌ಟಿ ಭೂಮಿ ಪಿಟಿಸಿಯಲ್ ಪರಭಾರೆ ನಿಷಿದ್ದವಿದ್ದು, ಮಾರಾಟ ಮಾಡಲು, ಕೊಳ್ಳಲು ಅವಕಾಶವಿರುವುದಿಲ್ಲ. ಹೀಗಿರುವಾಗ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿ ಖಾಸಗಿಯವರಿಗೆ ಖಾತೆ ಮಾಡಿದ್ದಾರೆ. ಇವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು. ಇದೆ ಸರ್ವೇ ನಂಬರ್ ಭೂಮಿಗಳು ಹುಣಸೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪಿಸಿಆರ್
40/2024 ದಾವೆ ಇರುವಾಗ ಇದನ್ನೆಲ್ಲ ಅಧಿಕಾರಿಗಳು ಪರಿಶೀಲಿಸದೆ, ನ್ಯಾಯಾಲಯದ ಆದೇಶ ಬರುವುದಕ್ಕೂ ಮುನ್ನ ಬೇರೆಯವರಿಗೆ ಖಾತೆ ಮಾಡಿರುವುದು ಅಕ್ಷಮ್ಯ” ಎಂದರು.