ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ಶಾಖೆ ಹಾಗೂ ಸೀರತ್ ಸಮಾವೇಶ ಸ್ವಾಗತ ಸಮಿತಿಯಿಂದ ಅಕ್ಟೋಬರ್ 20ರಂದು ಕಲಾ ಮಂದಿರದಲ್ಲಿ ಬೆಳಿಗ್ಗೆ 10-30ಕ್ಕೆ ʼಸೀರತ್ ಅಭಿಯಾನʼದ ಸರ್ವಧರ್ಮ ಸಮಾವೇಶ ಹಾಗೂ ಪ್ರವಾದಿ ಮುಹಮ್ಮದ್(ಸ) ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ ಎಂದು ವಲಯ ಸಂಚಾಲಕ ಅಬ್ದುಲ್ ಸಲಾಂ ಯು ಮಾಹಿತಿ ನೀಡಿದರು.
ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಜಗತ್ತಿಗೆ ಆಗತರಾದ ಎಲ್ಲ ಪ್ರವಾದಿಗಳು ಹಾಗೂ ಮಹಾ ಪುರುಷರು ಆಯಾ ಕಾಲಕ್ಕೆ ಮತ್ತು ಆಯಾ ಧರ್ಮಗಳಿಗೆ ಮಾತ್ರ ಸೀಮಿತರಾದವರಲ್ಲ. ಅವರು ಇಡೀ ಪ್ರಪಂಚದ ಸಂಪತ್ತು. ಅವರು ಪ್ರತಿಪಾದಿಸಿರುವ ತತ್ವ ಬೋಧನೆಗಳು ಸರ್ವರಿಗೂ ಅನ್ವಯವಾಗುವಂತಹವು. ಈ ನಿಟ್ಟಿನಲ್ಲಿ ಮುಹಮ್ಮದ್(ಸ) ಪೈಗಂಬರರೂ ಕೂಡ ಇಡೀ ಜಗತ್ತಿಗೆ ಮಾರ್ಗದರ್ಶಕರಾಗಿ ಬಂದವರು” ಎಂದು ತಿಳಿಸಿದರು.
“ಪ್ರಪಂಚದ ಸೃಷ್ಟಿಕರ್ತನಾದ ದೇವನು ಪೈಗಂಬರರಿಗೆ ಅವತೀರ್ಣಗೊಳಿಸಿದ ಪವಿತ್ರ ಕುರಾನ್‌ನಲ್ಲಿ ಅವರನ್ನು ಸಮಸ್ತ ಲೋಕಕ್ಕೆ ಕಾರುಣ್ಯಭೂತರಾಗಿ ಕಳುಹಿಸಲಾಗಿದೆಯೆಂದು ಉಲ್ಲೇಖೀಸಲಾಗಿದೆ. ಅದೇ ರೀತಿ ಅವರನ್ನು ಅತ್ಯುನ್ನತ ಮಟ್ಟದ ಚಾರಿತ್ರ್ಯವಂತ ವ್ಯಕ್ತಿಯೆಂದು ಪರಿಚಯಿಸಲಾಗಿದೆ” ಎಂದರು.
“ಪ್ರವಾದಿಯವರು ಜಗತ್ತಿಗೆ ತೋರಿಸಿಕೊಟ್ಟ ಬದುಕಿನ ಚಿತ್ರಣಕ್ಕೆ ಸೀರತ್ ಎನ್ನಲಾಗುತ್ತದೆ. ಅರೇಬಿಕ್ ಕ್ಯಾಲೆಂಡರಿನ ಪ್ರಕಾರ 3ನೇ ತಿಂಗಳಾದ ರಬೀವುಲ್ ಅವ್ವಲ್ ತಿಂಗಳಲ್ಲಿ ಮುಹಮ್ಮದ್ ಪೈಗಂಬರರು ಅರಬ್ ನಾಡಿನ ಮೆಕ್ಕಾದಲ್ಲಿ ಜನಿಸಿರುತ್ತಾರೆ. ಪ್ರಸ್ತುತ ತಿಂಗಳಲ್ಲಿ ಪ್ರತಿವರ್ಷ ಕರ್ನಾಟಕ ರಾಜ್ಯಾದ್ಯಂತ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಮುಹಮ್ಮದ್ ಪೈಗಂಬರರು ಜಗತ್ತಿಗೆ ಸಾರಿದ ಅತ್ಯುನ್ನತವಾದ ಮಾನವೀಯ ಮೌಲ್ಯಗಳನ್ನು ಕನ್ನಡ ನಾಡಿನ ಜನತೆಗೆ ಪರಿಚಯಿಸುವ ಸಲುವಾಗಿ ಸೀರತ್ ಅಭಿಯಾನ ಆಚರಿಸಿಕೊಂಡು ಬರುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಪರಾಧ ಪ್ರಕರಣಗಳ ವಿಮರ್ಶನ ಸಭೆ; ಅಧಿಕಾರಿಗಳಿಗೆ ಎಸ್‌ಪಿ ಖಡಕ್ ಸೂಚನೆ
“ಆದಿಚುಂಚನಗಿರಿ ಮೈಸೂರು ಮಠದ ಮಠಾಧೀಶ ಸೋಮನಾಥೇಶ್ವರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರೆ. ಫಾ ಸ್ಟ್ಯಾನಿ ಡಿ ಅಡಾ ಧರ್ಮಗುರುಗಳು ಸೆಂಟ್ ಫಿಲೋಮಿನಸ್ ಚರ್ಚ್, ಮೈಸೂರು ಜನಾಬ್ ಮೌಲನಾ ಮುಹಮ್ಮದ್ ಉಸ್ಮಾನ್ ಷರೀಫ್ ಸಖಾಝಿ, ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಹಾಗೂ ಚಿಂತಕರಾದ ಡಾ ಬಂಜಗೆರೆ ಜಯಪ್ರಕಾಶ್, ಮುಹಮ್ಮದ್ ಕುಂಞ, ಶಾಸಕ ತನ್ವೀರ್ ಸೇಠ್, ಹರೀಶ್‌ಗೌಡ, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಆಶಾದುರ್ ರಹಮಾನ್ ಶರೀಫ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್ ಸೇರಿದಂತೆ ಪ್ರಮುಖರು ಉಪಸ್ಥಿತರಿರುತ್ತಾರೆ” ಎಂದು ಮಾಹಿತಿ ಕೊಟ್ಟರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ದೀಪಕ್, ಅಹಿಂದ ಶಿವರಾಂ, ಅಬ್ದುಲ್ ಖಾದರ್, ಮುಹಮ್ಮದ್ ಅಸ್ಲಾಂ, ಮೊಹಮ್ಮದ್ ಫಾರೂಕ್, ನೂರ್ ಮಹಮ್ಮದ್ ಮರ್ಚೆಂಟ್, ಕಲೀಮ್ ಅಹಮ್ಮದ್, ಅಸಾದುಲ್ಲಾ ಇದ್ದರು.
