ಕರ್ನಾಟಕ ರಾಜ್ಯ ರೈತ ಸಂಘ ಗುರುವಾರ ಮೈಸೂರು ತಾಲೂಕು ಕಚೇರಿ ಮುಂದೆ ನಿವೇಶನಕ್ಕಾಗಿ ನೀಡಿರುವ ಜಮೀನನ್ನು ನಿವೇಶನಕ್ಕಾಗಿಯೇ ಮೀಸಲಿಡುವಂತೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದರು.
ಮೈಸೂರು ತಾಲೂಕಿನ ಕೆಂಚಲಗೂಡು ಗ್ರಾಮದ ಸರ್ವೆ ನಂ: 14ರ 27 ಎಕರೆ 26 ಗುಂಟೆ ಪ್ರದೇಶದಲ್ಲಿ ಸುಮಾರು 70 ಕುಟುಂಬಗಳು ಬಗರ್ ಹುಕುಂ ಸಾಗುವಳಿಯನ್ನು ಸುಮಾರು 70 ವರ್ಷಗಳ ಹಿಂದಿನಿಂದಲೂ ಅನುಭವಿಸುತ್ತಿದ್ದಾರೆ. ದರಖಾಸ್ತು ಮಂಜೂರಾಗಿ ಫಾರಂ ನಂ: 50ರ ನಮೂನೆ ಅರ್ಜಿಯನ್ನು ಕೂಡ ಸಲ್ಲಿಸಿದ್ದರು. ಮುನ್ಸಿಪಲ್ ವ್ಯಾಪ್ತಿಯಿಂದ ಕಡಿಮೆ ಅಂತರದಲ್ಲಿದೆ ಎಂದು ಸಾಗುವಳಿ ಮಂಜೂರು ಮಾಡಲು ಸಾಧ್ಯವಿಲ್ಲ ಎಂದಿದೆ ಎಂದು ದೂರಿದರು.

ಸಂಬಂಧಪಟ್ಟ ಸಮಿತಿಯು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಸಾಗುವಳಿ ಮಾಡುತ್ತಿದ್ದ ರೈತರ ಕುಟುಂಬಕ್ಕೆ ನಿವೇಶನವನ್ನಾದರು ಸದರಿ ಸರ್ವೆ ನಂಬರ್‌ನಲ್ಲಿ ನೀಡಬೇಕೆಂಬ ಉದ್ದೇಶದಿಂದ ಜಿಲ್ಲಾಡಳಿತ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ 5 ಎಕರೆ 20 ಗುಂಟೆ ಪ್ರದೇಶವನ್ನು ನಿವೇಶನಕ್ಕಾಗಿ ಮೀಸಲಿಡಲು ಸರ್ಕಾರಕ್ಕೆ ಶಿಫಾರಸ್ಸನ್ನು ಸಹ ಕಳುಹಿಸಲಾಗಿದ್ದು, ಮುಂದಿನ ಕ್ರಮಗಳ ಹಂತದಲ್ಲಿದೆ. ಈ ನಡುವೆ ನಿವೇಶನಕ್ಕಾಗಿ ಕಾಯ್ದಿರಿಸಿರುವ ಸ್ಥಳದಲ್ಲಿಯೇ ಒಂದು ಎಕರೆ ಪ್ರದೇಶವನ್ನು ಸ್ಮಶಾನಕ್ಕಾಗಿ ಕಾಯ್ದಿರಿಸಿ ಆದೇಶ ಹೊರಡಿಸಲಾಗಿದೆ. ಇದನ್ನ ವಿರೋಧಿಸಿ ಈಗಿರುವ ಭೂಮಿಯನ್ನು ನಿವೇಶನಕ್ಕೆ ಮೀಸಲಿಡಬೇಕು, ಸ್ಮಶಾನಕ್ಕೆ ಬೇರೆ ಪರ್ಯಾಯ ಜಾಗದಲ್ಲಿ ಒಂದು ಎಕರೆ ವ್ಯವಸ್ಥೆ ಕಲ್ಪಿಸಬೇಕು ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಮೈಸೂರು | ನ.15 ರಿಂದ 25ರವರೆಗೆ ರೈತ, ಕಾರ್ಮಿಕ ವಿರೋಧಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಬಡಗಲಪುರ ನಾಗೇಂದ್ರ
ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡ ಪಿ ಮರಂಕಯ್ಯ, ಬಸಪ್ಪ ನಾಯಕ, ರಾಜ್ಯ ಸಮಿತಿ ಸದಸ್ಯ ನಾಗನಹಳ್ಳಿ ವಿಜೇಂದ್ರ, ತಾಲೂಕು ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ತಾಲೂಕು ಅಧ್ಯಕ್ಷ ಅನಂದೂರು ಪ್ರಭಾಕರ ಸೇರಿದಂತೆ ರೈತ ಸಂಘಟನೆಯ ಕಾರ್ಯಕರ್ತರು ಇದ್ದರು.
