ಸಂತ ಫಿಲೋಮಿನಾ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಂಬಿಎ ಮತ್ತು ಎಂಸಿಎ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿದೆ. ಸುಸಜ್ಜಿತ ಕಟ್ಟಡ ಅಗತ್ಯವಾದ ಲ್ಯಾಬ್ ಇದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗ ಮಾಡಿಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್ ಕೆ ಲೋಕನಾಥ್ ತಿಳಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾದ ಮೈಸೂರು ನಗರದ ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಿಸಿರುವ ಎಂಸಿಎ ಮತ್ತು ಎಂಬಿಎ ಸ್ನಾತಕೋತ್ತರ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಉಪ ಪ್ರಾಂಶುಪಾಲ ರೋನಾಲ್ಡ್ ಪ್ರಕಾಶ್ ಕುಟಿನೋ ಪ್ರಸ್ತಾವಿಕವಾಗಿ ಮಾತನಾಡಿ, “ಸಂತ ಫಿಲೋಮಿನಾ ಕಾಲೇಜು ಮಹಾವಿದ್ಯಾಲಯವು “ಪ್ರೀತಿಯ ಮುಖೇನ ಜ್ಞಾನ” ಎಂಬ ಧ್ಯೇಯದೊಂದಿಗೆ 1946ರಲ್ಲಿ ಮೈಸೂರು ಮಹಾ ಸಂಸ್ಥಾನದಲ್ಲಿ ಮೊಟ್ಟ ಮೊದಲ ಖಾಸಗಿ ವಿಜ್ಞಾನ ಕಾಲೇಜಾಗಿ ಸ್ಥಾಪನೆಗೊಂಡಿತು. ನಂತರದ ವರ್ಷಗಳಲ್ಲಿ ಶೈಕ್ಷಣಿಕ ಘನತೆಯನ್ನು ಸಾಕ್ಷೀಕರಿಸುವತ್ತ ನಿರಂತರವಾಗಿ ಸಾಗುತ್ತಾ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಗಣನೀಯ ಸಾಧನೆ ಮತ್ತು ಹಲವು ವಿಕ್ರಮಗಳನ್ನು ಸಾಧಿಸಿದೆ. ಇದಕ್ಕೆ ಪೂರಕವಾಗಿ, ಈ ಶೈಕ್ಷಣಿಕ ಸಾಲಿನಲ್ಲಿ ಎಂಬಿಎ ಮತ್ತು ಎಂಸಿಎ ಸ್ನಾತಕೋತ್ತರ ಪದವಿಗಳನ್ನು ಪ್ರಾರಂಭಿಸಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ರೈತರು, ಕೃಷಿ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ರೈತ ಸಂಘ ಆಗ್ರಹ
ನಗರದ ಸಂತ ಫಿಲೋಮಿನಾ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಎಂಬಿಎ ಮತ್ತು ಎಂಸಿಎ ಕಾರ್ಯಕ್ರಮಗಳ ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಧರ್ಮ ಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ. ಬರ್ನಾರ್ಡ್ ಮೊರಾಸ್ ಅವರಿಂದ ವಿವಿಧ ಧಾರ್ಮಿಕ ಕಾರ್ಯ ನೆರವೇರಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಕ್ಸ್‌ಐಎಂಇ ಅಧ್ಯಕ್ಷ ಪ್ರೊ. ಜೆ ಫಿಲಿಪ್, ಯುಜಿಸಿ ಶೈಕ್ಷಣಿಕ ಅಧಿಕಾರಿ ಡಾ. ಕೆ ಸಿ ಲತಾ ಸೇರಿದಂತೆ ಇತರರು ಇದ್ದರು.