ಬೇಸಿಗೆಯ ತಾಪಮಾನ ಹೆಚ್ಚಳವಾಗುತ್ತಿರುವ ಪರಿಣಾಮ ನೀರಿನ ಸೆಲೆಗಳು ಬತ್ತಲಾರಂಭಿಸಿವೆ. ಹೀಗಾಗಿ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಮೈಸೂರು ನಗರದ ಕಡಕೋಳದಲ್ಲಿರುವ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು, ಹಾಗೆಯೇ ರೋಟರಿ ಕ್ಲಬ್ ಶ್ರೀರಂಗಪಟ್ಟಣ ಮತ್ತು ಅಚೀವರ್ಸ್ ಅಕಾಡೆಮಿಯಿಂದ ಜಾಗೃತಿ ಜಾಥಾ ಅಭಿಯಾನ ಆಯೋಜನೆ ಮಾಡಿದ್ದರು.
ಈ ಅಭಿಯಾನಕ್ಕೆ ಶ್ರೀರಂಗನಾಯಕಿ ಸಮಾಜದ ಮುಖ್ಯಸ್ಥ ಆಶಲತಾ ಪುಟ್ಟೇಗೌಡ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಎನ್‌ಎಸ್‌ಎಸ್ ಅಧಿಕಾರಿ ಡಾ. ರಾಘವೇಂದ್ರ ಮಾತನಾಡಿ, “ಮನುಷ್ಯನಾದರೆ, ನನಗೆ ಹಸಿವಾಗಿದೆ, ದಾಹವಾಗಿದೆಯೆಂದು ಕೇಳುವುದರ ಮೂಲಕ ತನ್ನ ಹಸಿವೆಯನ್ನು ನೀಗಿಸಿಕೊಳ್ಳುತ್ತಾನೆ. ಆದರೆ ಮೂಕಪ್ರಾಣಿ ಪಕ್ಷಿಗಳು ಅದರಲ್ಲೂ ಪಕ್ಷಿಗಳು ತಮ್ಮ ಹಸಿವನ್ನೇ ಹೇಳಿಕೊಳ್ಳಲಾಗದೆ ಸಂಕಟಪಡುತ್ತಿರುತ್ತವೆ. ಆದ್ದರಿಂದ ದಯಮಾಡಿ ಸಾರ್ವಜನಿಕರು ಸುತ್ತಲಿನ ಪರಿಸರದಲ್ಲಿ ಹಾಗೂ ಮನೆಯ ಮೇಲೆ ನೀರು ಮತ್ತು ಆಹಾರವನ್ನು ಇಟ್ಟು ಪಕ್ಷಿಗಳ ದಾಹವನ್ನು ನೀಗಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ರಂಝಾನ್ ಮುಸ್ಲಿಮರ ಆಧ್ಯಾತ್ಮಿಕ ಬೆಳವಣಿಗೆಗೆ ಅವಕಾಶ ಒದಗಿಸುತ್ತದೆ: ಲಾಲಹುಸೇನ ಕಂದಗಲ್ಲ
ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಬೀದಿಗಳಿಗೆ ತೆರಳಿ ಘೋಷವಾಕ್ಯವನ್ನು ಕೂಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಈ ಅಭಿಯಾನಕ್ಕೆ ಶ್ರೀರಂಗಪಟ್ಟಣ ರೋಟರಿ ಸಂಸ್ಥೆಯ ಅಧ್ಯಕ್ಷ ಮಂಜು ರಾಮ ಪುಟ್ಟೇಗೌಡ, ನಿರ್ದೇಶಕ ನಾಗೇಂದ್ರ, ಶ್ರೀನಿವಾಸ, ಕಾಂತರಾಜ್, ವಿದ್ಯಾರ್ಥಿಗಳಾದ ಹರ್ಷ ಹೃದಯ್, ಶಾಂಭವಿ, ವಿಹಾನ್ ಮುರಳಿ ದಿವಿತ್, ಪರಶುರಾಮ್ ಸೇರಿದಂತೆ ಇತರರು ಈ ಅಭಿಯಾನಕ್ಕೆ ಸಾತ್ ನೀಡಿದರು.