ಕೊಡಗಿನಲ್ಲಿ ಹುಟ್ಟಿ ಮೈಸೂರು, ಮಂಡ್ಯ ಜಿಲ್ಲೆಯಲ್ಲಿ ಹರಿಯುವ ಜೀವನದಿ ಕಾವೇರಿ. ಬೇಸಿಗೆಯಲ್ಲಿ ಸಹಜವಾಗಿ ನೀರಿನ ಹರಿವು ಕಡಿಮೆಯಾಗುವುದು. ನೀರಿನ ಕೊರತೆ ಸಹಜ. ಆದರೆ ಈ ಭಾರಿ ಕುಡಿಯಲು ಕಾವೇರಿ ನೀರು ಸಿಗುತ್ತಿಲ್ಲ. ಕಾವೇರಿ ನದಿಯನ್ನೇ ಅವಲಂಬಿತವಾದ ಪಟ್ಟಣಗಳಿಗೆ ಬಿಸಿ ಮುಟ್ಟಿದೆ.
ಈಗಾಗಲೇ ಪಿರಿಯಾಪಟ್ಟಣ ಪಟ್ಟಣದಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಿದ್ದು, ಪುರಸಭೆಯ ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಿ ಇಲ್ಲ. ಟ್ಯಾಂಕರ್ ಮೂಲಕ ಮನೆ ಮನೆಗಳಿಗೆ ಯಾವಾಗಲೋ ಒಮ್ಮೆ ಅನ್ನುವಂತೆ ಒಂದು ಟ್ಯಾಂಕರ್ ನೀರನ್ನ ಮೂರು ಮನೆಗಳಿಗೆ ನೀಡುವ ವ್ಯವಸ್ಥೆ ಆಗುತ್ತಿದೆ. ಎಲ್ಲಿ ನೋಡಿದರೂ ದೈನಂದಿನ ಬಳಕೆಗೆ, ಕುಡಿಯುವ ನೀರಿಗೆ ಖಾಸಗಿಯವರಿಂದ ದುಬಾರಿ ಹಣ ಕೊಟ್ಟು ನೀರನ್ನು ತರಿಸಿಕೊಳ್ಳುವಂತಾಗಿದೆ. ಸಂಬಂದಪಟ್ಟ ಅಧಿಕಾರಿಗಳನ್ನು ಕೇಳಿದರೆ ನೀರಿನ ಅಭವಾವಿದ್ದು 2 ದಿನಕ್ಕೆ ಒಮ್ಮೆ ಟ್ಯಾಂಕರ್ ಮೂಲಕ ಹಾಗೆ ವಾರದಲ್ಲಿ ಎರಡು ಬಾರಿ ನೀರು ಬಿಡುವ ಕೆಲಸ ಆಗುತ್ತಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
“ಹಳ್ಳಿಯ ಪರಿಸ್ಥಿತಿ ತೀರಾ ತೊಂದರೆಗೀಡಾಗಿದೆ. ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ನೀರಿಲ್ಲ, ಮೇವಿನ ಸಮಸ್ಯೆ ತಲೆದೂರಿದೆ. ಮೇವಿಗಾಗಿ ಪರದಾಟ, ಹುಲ್ಲಿನ ಕಂತೆ ಕೊಳ್ಳಲು ಆಗ್ತಾ ಇಲ್ಲ, ಹಸಿರು ಮೇಯಲು ಏನೂ ಇಲ್ಲ. ಕುಡಿಯಲು ಕೆರೆಕಟ್ಟೆ ಬತ್ತಿವೆ. ನೀರಿನ ವ್ಯವಸ್ಥೆ ಇರದೆ ಈ ಭಾಗದ ಹಲವು ಗ್ರಾಮಗಳ ಪರಿಸ್ಥಿತಿ ಕಂಗಾಲಾಗಿದೆ” ಎನ್ನುತ್ತಾರೆ.
ಜವರಪ್ಪ ದೊಡ್ಡ ಹನಸೋಗೆ ಈ ದಿನ.ಕಾಮ್ ಜತೆಗೆ ಮಾತನಾಡಿ, “ಹಿಂದೆಲ್ಲೂ ಕಾಣದ ಇಂತಹ ಉರಿಬಿಸಿಲನ್ನು ಇದೇ ಮೊದಲು ಕಾಣುತ್ತಿದ್ದೇವೆ. ಬೇಸಿಗೆ ಆರಂಭವಿರುವಾಗಲೇ ಬಿಸಿಲ ಜಳ ತಡೆಯಲು ಆಗುತ್ತಿಲ್ಲ. ಕೆರೆಕಟ್ಟೆ ಒಣಗಿ ಜಾನುವಾರುಗಳಿಗೆ, ಆಡುಕುರಿಗೆ ನೀರುಣಿಸಲು ಆಗುತ್ತಿಲ್ಲ. ನಾನೇ ಕಳೆದ ವಾರ ಎರಡು ಹಸು, ನಾಲ್ಕು ಕುರಿಗಳನ್ನು ಮಾರಿದ್ದೇನೆ. ಜಾನುವಾರುಗಳಿಗೆ ಮೇವು ತರಲು ಶಕ್ತಿ ಇಲ್ಲ. ಮೇವು ಹೊಂದಿಸಲು ಆಗುತ್ತಿಲ್ಲ” ಎಂದು ಅಳಲು ತೋಡಿಕೊಂಡರು.
ಹೊಸೂರು ಗೌರಮ್ಮ ಮಾತನಾಡಿ, “ನಾನು ಮದುವೆ ಆಗಿ ಬಂದಾಗಿನಿಂದ ಈವರೆಗೆ ಕಾವೇರಿ ಬತ್ತಿದ್ದನ್ನೇ ಕಂಡಿಲ್ಲ. ನದಿಯಲ್ಲಿ ನೀರಿಲ್ಲ. ಆಡು ಕುರಿಗಳಿಗೆ ನೀರು ಕುಡಿಸಲು ಬೋರ್‌ವೆಲ್ ಹುಡುಕಬೇಕು. ಅದರಲ್ಲೂ ಜಲ ಇಲ್ಲ ನೀರೆ ಇಲ್ಲ. ಇದ್ದೋರು ಕೊಡಲ್ಲ ಹಿಂಗಾದ್ರೆ ಮುಂದೆ ಪರದಾಟ ತಪ್ಪಿದ್ದಲ್ಲ” ಎನ್ನುತ್ತಾರೆ.
ತಿಪ್ಪೂರ ರಮೇಶ್ ಮಾತನಾಡಿ, “48 ವರ್ಷದಲ್ಲಿ ಇದೆ ಮೊದಲ ಸಲ ಕಾವೇರಿ ಬತ್ತಿದ್ದು, ಬೇಸಿಗೆಯಲ್ಲಿ ನೀರು ಕಡಿಮೆ ಇರುತ್ತಿತ್ತು. ಮೋಟ್ರು ಹಾಕಂಡು ಸೊಪ್ಪು ಬೆಳಿಯಕೆ, ಹೊಗೆಪಟಕೆ ನೀರು ಹುಯ್ಯಕೆ, ದನಕರುಗಳಿಗೆ, ಆಡು ಕುರಿಗೆ ನೀರು ಆಯ್ತಾ ಇತ್ತು. ಈ ಸಲ ಯಾವದಕ್ಕೂ ನೀರಿಲ್ಲ. ಬರ್ದಾಗೈತೆ. ಮರಳು ಹೊಡೆದಿರೋ ಜಾಗದಲ್ಲಿ ವಸಿ ನೀರ್ ಅದೆ. ಆ ನೀರನ್ನು ಸಿಂಡ್ ಬಂದದೆ ಅಂತ ದನಕರ ಕುಡಿಯಲ್ಲ. ಹುಲ್ಲು ಕಂತೆ ರೇಟು ಗಗನಕ್ಕೆ ಹೋಗದೆ. ಒಂದ್ ಗಾಡಿ ಹುಲ್ಲು ತರಕೆ ಆಯ್ತಿಲ್ಲ. ಜೋಳದ ಕಡ್ಡಿ ಹಾಕೋಣ ಅಂದ್ರೆ ನೀರಿಲ್ಲ. ದಿಕ್ಕೇ ತೋಚ್ತಾ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕುಡಿಯುವ ನೀರಿಗೆ ಹಾಹಾಕಾರ; ಚುನಾವಣಾ ಪ್ರಚಾರದಲ್ಲಿ ಮಗ್ನರಾದ ಜನಪ್ರತಿನಿಧಿಗಳು
ಚುಂಚನ ಕಟ್ಟೆ ರಾಮಯ್ಯ ಮಾತನಾಡಿ, “ಬೇಸಿಗೆ ಆರಂಭದಲ್ಲೇ ನೀರಿಲ್ಲ. ಕಟ್ಟೆಲಿ ಮುಂದೆ ಬಿಸಿಲು ಜಳ ಹೆಚ್ಚಾಗತ್ತೆ. ನೀರಿಗೆ ಏನು ಮಾಡುವುದೆಂಬುದೇ ಗೊತ್ತಾಗುತ್ತಿಲ್ಲ. ಪಂಪ್ ಸೆಟ್ ಇರೋರಿಗೆ ಹೆಂಗೋ ಆಯ್ತದೆ. ನಮಗೆ ರಾಸುಗಳಿಗೆ ನೀರು ಉಣಿಸಕೆ ಆಯ್ತಿಲ್ಲಾ. ಮಳೆ ಬೀಳಂಗದೆ, ಮೋಡ ಅಯ್ತೇ. ಆದ್ರೆ ಮಳೆ ಆಗ್ತಿಲ್ಲ. ಹೊಸ ಮಳೆ ಹುಟ್ಟಕೆ ಇನ್ನೂ ಸಮಯ ಆದೆ. ಆದ್ರೂ ಅಡ್ಡಮಳೆ ಆದ್ರೂ ಹುಯ್ದಿದ್ದರೆ ಭೂಮಿ ಕಾವು ಕಡಿಮೆ ಆಗ್ತಿತ್ತು. ಈ ಸಲ ಬಿಸಿಲು ಜಳ ತಡಿಯಕೆ ಆಯ್ತಾ ಇಲ್ಲ. ಆಡು-ಕುರಿ ನೀರಿಲ್ದೆ ಸೊರಗಿವೆ. ಹಿಂಗೆ ಆದ್ರೆ ಹಟ್ಟಿಲಿರವ ಮಾರಾಕ್ತಿನಿ” ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದ ಜಲಾಶಯಗಳ ನೀರೆಲ್ಲಾ ಬೇಸಿಗೆ ಕಾಲದಲ್ಲಿ ಮತ್ತು ಬಲಗಾಲಗಳಲ್ಲೂ ಹೊರರಾಜ್ಯಗಳಿಗೇ ಹರಿದರಿದು ಹೋದರೆ ನಮಗೆ ಕನ್ನಡಿಗರಿಗೆ ಕುಡಿಯುವ ನೀರು ಹಾಗೂ ಅಂತರ್ಜಲ ಇಂಗಿಹೋಗುವ ತತ್ವಾರ ಬರುವ ದುರ್ಬರ ಸನ್ನಿವೇಶದಲ್ಲಿ ನಾವು ನಾವೆಲ್ಲರೂ ಒದ್ದಾಡುವ ಹೀನಾಯ ಸ್ಥಿತಿಗೆ ತಲುಪುತ್ತಾ ಇರುವುದು ದುರಂತವೇ ಸರಿ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com
Pakkada rajya tamilunadige kaddu muchi neeru bitta Congress sarkaravannu kithogedu pradeshika paksha jds bembalisi naadu nudi jala baashe ulisi