ದಾವಣಗೆರೆ | ಕುಡಿಯುವ ನೀರಿಗೆ ಹಾಹಾಕಾರ; ಚುನಾವಣಾ ಪ್ರಚಾರದಲ್ಲಿ ಮಗ್ನರಾದ ಜನಪ್ರತಿನಿಧಿಗಳು

Date:

ದಾವಣಗೆರೆಯಲ್ಲಿ ಲೋಕಸಭಾ ಚುನಾವಣೆಯ ಕಾವು ಏರುತ್ತಿರುವಂತೆ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಬಿಸಿಲು ಕೂಡ ಹೆಚ್ಚಾಗತೊಡಗಿದೆ. ಇದರಿಂದ ನೀರಿನ ಮಟ್ಟ ಇಳಿಕೆಯಾಗಿದ್ದು, ದಾವಣಗೆರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ದಾವಣಗೆರೆಗೆ ಪ್ರಮುಖ ನೀರಿನ ಮೂಲ ತುಂಗಭದ್ರಾ ನದಿ. ಹರಿಹರದ ಬಳಿ ಹರಿವ ತುಂಗಭದ್ರಾ ನದಿ ಮತ್ತು ಅಲ್ಲಿಗೆ ಸೇರುವ ಇನ್ನಿತರ ಸಣ್ಣ ಹಳ್ಳಗಳು, ಪಿಕ್‌ಅಪ್‌ಗಳನ್ನು ಗುರುತಿಸಿ ದಾವಣಗೆರೆಗೆ ಪ್ರತಿ ವರ್ಷ ನೀರು ಸಂಗ್ರಹಿಸಿ ಪೂರೈಕೆ ಮಾಡಲಾಗುತ್ತದೆ. ಹಾಗೆ ನೀರನ್ನು ಕನಿಷ್ಟ ಒಂದೂವರೆ ಎರಡು ತಿಂಗಳ ಕಾಲ ಸಂಗ್ರಹಿಸಿ ಇಡಲು ದಾವಣಗೆರೆಯ ಆಸುಪಾಸಿನ ಕುಂದವಾಡಕೆರೆ ಮತ್ತು ಟಿವಿ ಸ್ಟೇಷನ್ ಕೆರೆಗಳನ್ನು ನಿಗದಿಪಡಿಸಿ ಅವುಗಳಲ್ಲಿ ಸಂಗ್ರಹಿಸಿ ಅಲ್ಲಿಂದ ದಾವಣಗೆರೆ ನೀರನ್ನು ಪೂರೈಸಲಾಗುತ್ತದೆ.

ಹೀಗೆ ಸುಮಾರು ಎರಡು ಮೂರು ತಿಂಗಳಿಗೆ ಹಿಂದೆಯೇ ಪ್ರತಿಪಕ್ಷಗಳು, ಸಾರ್ವಜನಿಕರು ಮತ್ತು ಮಾಧ್ಯಮಗಳು ನೀರಿನ ಅಲಭ್ಯತೆಯ ಬಗ್ಗೆ ಜಿಲ್ಲಾಡಳಿತಕ್ಕೆ ಮತ್ತು ಆಡಳಿತ ವರ್ಗದ ಜನಪ್ರತಿನಿಧಿಗಳಿಗೆ ಎಚ್ಚರಿಸಿ, ಮಳೆಗಾಲದ ಪ್ರಮಾಣ ಕಡಿಮೆಯಾದ ಕಾರಣ ಈ ಬಾರಿ ಅಂತರ್ಜಲ ಮಟ್ಟ ಕುಸಿದಿದ್ದು, ದಾವಣಗೆರೆಯಲ್ಲಿ ನೀರಿನ ಅಲಭ್ಯತೆ ಹೆಚ್ಚಾಗುವ ಸೂಚನೆಯನ್ನು, ನೀರನ್ನು ಮುಂಗಡವಾಗಿ ಸಂಗ್ರಹಿಸಲು ಮತ್ತು ಸಾರ್ವಜನಿಕರಿಗೆ ಅದರ ಬಳಕೆಯ ಬಗ್ಗೆ ಮಾಹಿತಿ ನೀಡಲು ಒತ್ತಾಯಿಸಿದ್ದವು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ ನೀರು ಸರಬರಾಜು ಇಲಾಖೆ ನಗರಾಡಳಿತ ಜಿಲ್ಲಾಡಳಿತ ಮತ್ತು ರಾಜಕೀಯ ಪ್ರತಿನಿಧಿಗಳು ಚುನಾವಣೆಯ ಬಿಸಿಯಲ್ಲಿ ನೀರಿನ ಬಗ್ಗೆ ಯೋಚಿಸುವುದನ್ನೇ ಮರೆತಿದ್ದರು. ಚುನಾವಣೆ ಕಾವು ಏರುತ್ತಿರುವಂತೆಯೇ ಬಿಸಿಲು ಕೂಡ ಹೆಚ್ಚಾಗಿದ್ದು, ನೀರಿನ ಮಟ್ಟ ಮಾತ್ರ ಕಮ್ಮಿಯಾಗಿ ದಾವಣಗೆರೆಯಲ್ಲಿ ಬಹುತೇಕ ವಾರ್ಡ್‌ಗಳಲ್ಲಿ ಟ್ಯಾಂಕರ್‌ಗಳಿಂದ ನೀರನ್ನು ಸರಬರಾಜು ಮಾಡುವ ಸ್ಥಿತಿ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರ ಬಗ್ಗೆ ನಗರಸಭೆಯ ಪ್ರತಿಪಕ್ಷದ ಸದಸ್ಯರು ಕೂಡ ಇತ್ತೀಚಿಗೆ ಪತ್ರಿಕಾಗೋಷ್ಟಿ ಮಾಡಿ ಸಮರ್ಪಕ ನೀರು ಪೂರೈಕೆಗೆ ಒತ್ತಾಯಿಸಿದ್ದನ್ನು
ಈ ದಿನ.ಕಾಮ್‌ ವರದಿ ಮಾಡಿತ್ತು.

ಯಾವಾಗಲೂ ತುಂಬಿ ತುಳುಕುತ್ತಿದ್ದ ಕುಂದವಾಡ ಕೆರೆ ಮತ್ತು ಟಿವಿ ಸ್ಟೇಷನ್ ಕೆರೆಗಳ ನೀರಿನ ಮಟ್ಟ ಅತಿ ಕನಿಷ್ಟ ಮಟ್ಟ ಅಂದರೆ ನಾಲ್ಕು ಅಡಿ ಇನ್ನು ಕೇವಲ ಒಂದು ವಾರಗಳಿಗಾಗುವಷ್ಟು ಮಾತ್ರವೇ ನೀರು ಲಭ್ಯವಿರುವುದಾಗಿ ಮಾಹಿತಿ ದೊರೆತಿದೆ.

ನೀರಿನ ಅಲಭ್ಯತೆಯ ಬಗ್ಗೆ ಮೈಮರೆತಿದ್ದ ಅಧಿಕಾರಿಗಳು ಈಗ ಎಚ್ಚೆತ್ತುಕೊಂಡಿದ್ದು, ನೀರು ಪೂರೈಕೆ ಮಾಡಲು ಈಗ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಆದರೆ ಭದ್ರಾ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ನಿಂತು ಹೋಗಿದ್ದು, ಈಗ ಭದ್ರಾ ಜಲಾಶಯದಿಂದ ನೀರನ್ನು ಹರಿಸಿದರೆ ಮಾತ್ರ ದಾವಣಗೆರೆ ಮತ್ತು ಸುತ್ತಮುತ್ತಲ ಹಳ್ಳಿಗಳ ಸಣ್ಣ ಪಟ್ಟಣಗಳ ಜನಗಳ ನೀರಿನ ಬವಣೆ ನೀಗಲಿದೆ.

ಜೊತೆಯಲ್ಲಿ ನದಿ ಪಾತ್ರದ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ತೋಟಗಳಿಗೆ ನೀರನ್ನು ಹಾಯಿಸಲು ಕೂಡ ನೀರು ಬೇಕೆಂದು ಪಟ್ಟು ಹಿಡಿದಿದ್ದು ಅಕ್ರಮ ಪಂಪ್‌ಸೆಟ್‌ಗಳ ಹಾವಳಿಯಿಂದ ಅವರಿಗೂ ಕೂಡ ನೀರು ಹರಿಸುವುದು ಕಷ್ಟ ಸಾಧ್ಯವಾಗಿದೆ. ಇದನ್ನು ಗಮನಿಸಿ ಮುಂಚೆಯೇ ಎಚ್ಚೆತ್ತುಕೊಳ್ಳಬೇಕಾಗಿದ್ದ ಆಡಳಿತ ವರ್ಗ ಚುನಾವಣಾ ತಯಾರಿಯಲ್ಲಿ ಮೈಮರೆತಿದ್ದು ವಿಪರ್ಯಾಸ. ಆದರೆ ಇದರ ಪರಿಣಾಮವನ್ನು ದಾವಣಗೆರೆಯ ಸಾಮಾನ್ಯಜನ, ನಗರವಾಸಿಗಳು ಅನುಭವಿಸುವಂತಾಗಿದೆ.

ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪಾಲಿಕೆ ಆಯುಕ್ತರು ನೀರುಸರಬರಾಜು ವಿಭಾಗದ ಎಂಜಿನಿಯರ್‌ಗಳು ಟಿವಿ ಸ್ಟೇಷನ್ ಕೆರೆ ಮತ್ತು ಕುಂಡವಾಡ ಕೆರೆಯಲ್ಲಿ ಪರಿಶೀಲಿಸಿ ಕೇವಲ 4 ಅಡಿ ಇದ್ದು, ನೀರು ಪೂರೈಕೆಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಈಗ ಅಧಿಕಾರಿಗಳು ತುಂಗಭದ್ರಾ ನದಿಯಿಂದ ಅಥವಾ ಭದ್ರಾ ಜಲಾಶಯದಿಂದ ಕೆರೆಗಳಿಗೆ ನೀರನ್ನು ತುಂಬಿಸಲು ಪೂರೈಸಿಕೊಳ್ಳಲು ಕ್ರಮ ಕೈಗೊಳ್ಳುತ್ತಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಭದ್ರಾ ಜಲಾಶಯದಿಂದ ಅಥವಾ ತುಂಗಭದ್ರಾ ನದಿಯಿಂದ ನೀರು ಪೂರೈಕೆಯಾಗದಿದ್ದರೆ ನೀರಿನ ಕ್ಷಾಮ ತಲೆದೋರಿ ದಾವಣಗೆರೆ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರು ಮತ್ತು ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸಬೇಕಾದ ಸ್ಥಿತಿ ಏರ್ಪಡಲಿದೆ.

ಎಸ್‌ವಿಎಸ್ ನಗರದ ಗೃಹಿಣಿ ಮಂಜಮ್ಮ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಮ್ಮ ಏರಿಯಾದಲ್ಲಿ ನೀರಿನ ಅಭಾವ ಉಂಟಾಗಿದ್ದು, ನಮಗೆ ಮೂರು ದಿನಗಳಿಗೊಮ್ಮೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಸುತ್ತಿದ್ದಾರೆ. ಒಂದು ಟ್ಯಾಂಕರ್‌ಗೆ ಒಂದು ಮನೆಗೆ ಐದು ಕೊಡ ನೀರು ನೀಡುತ್ತಿದ್ದಾರೆ. ಆರು ಮಂದಿ ಇರುವ ನಮ್ಮ ಮನೆಯಲ್ಲಿ ಯಾವುದಕ್ಕೂ ಸಾಲುತ್ತಿಲ್ಲ, ಇಲ್ಲಿಯ ಬೋರ್‌ವೆಲ್‌ಗಳಲ್ಲಿ ಕೂಡ ನೀರು ಬರುತ್ತಿಲ್ಲ. ಎಲ್ಲರೂ ಚುನಾವಣೆ ಕಡೆ ಗಮನ ಹರಿಸಿದ್ದು, ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಯಾರೂ ಕೂಡಾ ನಮ್ಮ ಸಮಸ್ಯೆ ಕೇಳುವರೇ ಇಲ್ಲವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾಲಿ ನಗರದ ಮತ್ತೊಬ್ಬ ನಿವಾಸಿ ರಹಮತ್ ಉಲ್ಲಾ ಮಾತನಾಡಿ, “ಮಳೆಗಾಲ ಚೆನ್ನಾಗಿದ್ದು ಸಮಸ್ಯೆ ಇಲ್ಲದಿರುವಾಗಲೇ 3-4 ದಿನಕ್ಕೊಮ್ಮೆ ನೀರು ಬಿಡುತ್ತಿದ್ದರು. ಈಗ ನೀರಿನ ಸಮಸ್ಯೆ ಇರುವಾಗ ವಾರಕ್ಕೊಮ್ಮೆಯಾದರೂ ನೀರನ್ನು ಸರಿಯಾಗಿ ಪೂರೈಸುತ್ತಿಲ್ಲ. ಸುತ್ತಮುತ್ತಲಿನ ಚಾನೆಲ್‌ಗಳು ನದಿಗಳು, ಕೆರೆಕಟ್ಟೆ ಬತ್ತಿ ಹೋಗಿವೆ. ಹೀಗೆ ಆದರೆ ಸಾಮಾನ್ಯ ಜನ ನಾವು ನೀರಿಗೆ ಯಾರನ್ನು ಆಶ್ರಯಿಸುವುದು ಮೂರು ದಿನಕ್ಕೊಮ್ಮೆ ಐದು ಕೊಡ ನೀರನ್ನು ಕೊಟ್ಟರೆ ಬದುಕುವುದಾದರೂ ಹೇಗೆ” ಎಂದರು.

ಈ ಬಗ್ಗೆ ದಾವಣಗೆರೆ ಮಹಾನಗರಪಾಲಿಕೆಯ ಆಯುಕ್ತೆ ರೇಣುಕ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ, ಪ್ರತಿಕ್ರಿಯೆ ನೀಡಿದ್ದು, “ನಗರದ ಕೆಲವು ವಾರ್ಡ್‌ಗಳಲ್ಲಿ ನೀರಿನ ವ್ಯತ್ಯಯ ಉಂಟಾಗಿದೆ. 1000ಕ್ಕೂ ಹೆಚ್ಚು ಪಾಲಿಕೆಯ ಬೋರ್‌ವೆಲ್‌ಗಳಿಂದ ಅಲ್ಲಲ್ಲಿ ಸ್ಥಳೀಯವಾಗಿ ನೀರು ಪೂರೈಸುತ್ತಿದ್ದೇವೆ. ಇವುಗಳಲ್ಲಿ 10-12 ಬೋರ್‌ವೆಲ್‌ಗಳು ಕೆಟ್ಟು ನಿಂತಿದ್ದು, ರಿಪೇರಿ ಗೊಳಿಸಲಾಗುತ್ತಿದೆ. ಪಾಲಿಕೆಯ ಆರು ಟ್ಯಾಂಕರ್‌ಗಳು ಸೇರಿದಂತೆ ಇತರ 10 ಟ್ಯಾಂಕರ್‌ಗಳನ್ನು ಪಡೆದು ಯಾವ್ಯಾವ ವಾರ್ಡ್‌ಗಳಲ್ಲಿ ಸಮಸ್ಯೆ ಇದೆಯೋ ಅಲ್ಲಿ ನೀರನ್ನು ಪೂರೈಸಲಾಗುತ್ತಿದೆ” ಎಂದರು.

“ರಾಜನಹಳ್ಳಿ ಪಿಕಪ್ ನೀರು ಸರಬರಾಜು ಕೇಂದ್ರದಿಂದ ನಗರಕ್ಕೆ ನೀರು ಬರುವುದು ನಿಂತು ಹೋಗಿದ್ದು, ಅದರಿಂದ ಸಮಸ್ಯೆಯಾಗಿದೆ. ನಗರ ವ್ಯಾಪ್ತಿಯಲ್ಲಿ ಟಿವಿ ಸ್ಟೇಷನ್ ಕೆರೆ ಮತ್ತು ಹಳೇ ಕುಂದವಾಡ ಕೆರೆಯಲ್ಲಿ ನೀರಿನ ಸಂಗ್ರಹವಿದ್ದು, ಟಿವಿ ಸ್ಟೇಷನ್ ಕೆರೆಯಲ್ಲಿ ಒಂದು ತಿಂಗಳಿಗೆ ಆಗುವಷ್ಟು ಸಾಮರ್ಥ್ಯದ ನೀರು ಮತ್ತು ಕುಂದವಾಡ ಕೆರೆಯಲ್ಲಿ 15 ದಿನಗಳಿಗಾಗಿ ಬಳಕೆಯ ಸಾಮರ್ಥ್ಯದ ನೀರು ಲಭ್ಯವಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಸ್ವಚ್ಚತೆ ಕಾಣದೆ ತುಂಬಿ ಹರಿಯುತ್ತಿವೆ ಚರಂಡಿ; ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ

ಈ ಕೆರೆಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಜಿಲ್ಲಾಧಿಕಾರಿಯವರ ಆದೇಶದಂತೆ ಭದ್ರಾ ಜಲಾಶಯದಿಂದ ಕುಡಿಯುವ ನೀರು ಪಡೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು” ಎಂದು ಪ್ರತಿಕ್ರಿಯಿಸಿದರು.

“ದಾವಣಗೆರೆಯಲ್ಲಿ ಮುಂದಿನ ದಿನಗಳಲ್ಲಿ ಬಿಸಿಲು ಇನ್ನೂ ಹೆಚ್ಚಾಗುವ ಸೂಚನೆಯಿದೆ. ಹಾಗಾಗಿ ಪಾಲಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಆಸಕ್ತಿ ವಹಿಸಿ ನೀರಿನ ಸಮಸ್ಯೆ ಉಂಟಾಗದಂತೆ ಶೀಘ್ರವೇ ಕ್ರಮ ಮತ್ತು ಪರಿಹಾರ ಕೈಗೊಳ್ಳಬೇಕು” ಎಂದು ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

ವಿನಾಯಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ಕೋಮುವಾದದ ಮಾತುಗಳನ್ನಾಡುವ ಪ್ರಧಾನಿ ದೇಶಕ್ಕೆ ಬೇಕೆ?: ಸಚಿವ ಎಂ ಸಿ ಸುಧಾಕರ್

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿಯುತ್ತಾರೆ, ದೇಶದ ಸಂಪತ್ತು ಹೆಚ್ಚು ಮಕ್ಕಳನ್ನು...

ಶಿವಮೊಗ್ಗ | ಕ್ಷೇತ್ರದ ರಕ್ಷಣೆಗೆ, ಅಭಿವೃದ್ಧಿಗೆ ಆದ್ಯತೆ: ಗೀತಾ ಶಿವರಾಜ್‌ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ಅಧಿಕಾರವು ರಾಜಕಾರಣಿಗಳ ಬಳಿಯಿದೆ. ಸಮಸ್ಯೆಗಳು ಸಾಕಷ್ಟಿವೆ. ಆದರೂ, ಕೆಲವು...

ಯಾದಗಿರಿ | ಅಂಗಡಿ, ಸಂತೆ ಪ್ರದೇಶದಲ್ಲಿ ಎಸ್‌ಯುಸಿಐ ಚುನಾವಣಾ ಪ್ರಚಾರ

ಯಾದಗಿರಿಯಲ್ಲಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷ ಚುನಾವಣಾ ಪ್ರಚಾರದ ಅಂಗವಾಗಿ ಇಂದು ನಗರದ...

ಉಡುಪಿ‌ | ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಅಪಾಯ: ಮಂಜುನಾಥ್ ಗಿಳಿಯಾರ್ 

ಬಿಜೆಪಿ ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನ ವಿರೋಧಿಯಾಗಿದೆ. ದೇಶದಲ್ಲಿ ಮೀಸಲಾತಿ...