ಮೈಸೂರು | ರಷ್ಯಾದ ಮಹಾ ಕ್ರಾಂತಿಗೆ 106 ವರ್ಷ

Date:

Advertisements

ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಮಾನವನಿಂದ ಮಾನವನ ಶೋಷಣೆಯನ್ನು ಸಂಪೂರ್ಣವಾಗಿ ಕೊನೆಗಾಣಿಸಿ ಭೂಮಿಯ ಮೇಲೆ ಮನುಕುಲದ ಹೊಸ ಬದುಕಿನ ಬೀಜಗಳನ್ನು ಬಿತ್ತಿದ ರಷ್ಯಾದಲ್ಲಿ 1917ರ ನವೆಂಬರ್‌ನಲ್ಲಿ ಜರಗಿದ ಮಹಾನ್ ಸಂಕ್ರಮಣಕ್ಕೆ ಈಗ 106 ವರ್ಷಗಳು ತುಂಬಿವೆ ಎಂದು ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಮೈಸೂರು ಜಿಲ್ಲಾ ಕಾರ್ಯದರ್ಶಿ ಬಿ ರವಿ ಅವರು ಸ್ಮರಿಸಿದರು.

ರಷ್ಯಾದ ನವೆಂಬರ್ ಮಹಾ ಕ್ರಾಂತಿಗೆ 106 ವರ್ಷ ಆಗಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡಿದ್ದ ʼಮತ್ತೆ ಬಂದಿದೆ ನವೆಂಬರ್ ತಿಂಗಳುʼ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಜಗತ್ತಿನಾದ್ಯಂತ ದುಡಿಯುವ ಎಲ್ಲ ಜನ, ಮಧ್ಯಮವರ್ಗದವರು, ಮಹಿಳೆಯರು ಹಾಗೂ ವಿದ್ಯಾರ್ಥಿ-ಯುವಜನರು ಹೆಮ್ಮೆಯಿಂದ ಹಾಗೂ ಭರವಸೆಯ ಕಣ್ಣುಗಳಿಂದ ಇತಿಹಾಸವನ್ನು ಮೆಲುಕು ಹಾಕುವ ಭರವಸೆಯ ತಿಂಗಳು ಈ ನವೆಂಬರ್. ಅದರಲ್ಲೂ ನವೆಂಬರ್ 7ರಿಂದ 17ರ ಆ ಹತ್ತು ದಿನಗಳು, ಮೈ ಮನದಲ್ಲಿ ರೋಮಾಂಚನ ಉಂಟುಮಾಡುವಂತಹ ದಿನಗಳು” ಎಂದು ಹೇಳಿದರು.

Advertisements

“ದೂರದ ರಷ್ಯಾದಲ್ಲಿ ಘಟಿಸಿದ ಕ್ರಾಂತಿಯನ್ನು ನಾವೇಕೆ ನೆನೆಯಬೇಕು ಮತ್ತು ಜಗತ್ತಿನ ಜನರೇಕೆ ಅದನ್ನು ಮೆಲುಕು ಹಾಕಬೇಕು? ಎಂಬ ಪ್ರಶ್ನೆಗಳು ಮನುಕುಲದ ಇತಿಹಾಸ ಹಾಗೂ ನಮ್ಮ ದೇಶದ ಮಹಾನ್ ಕ್ರಾಂತಿಕಾರಿ ಪರಂಪರೆಯ ಬೇರುಗಳನ್ನು ಕಳೆದುಕೊಂಡಿರುವ ನಮ್ಮ ಮನಸ್ಸಿನಲ್ಲಿ ಸಹಜವಾಗಿ ಮೂಡುತ್ತವೆ” ಎಂದರು.

“ರಷ್ಯಾದ ಸಮಾಜವಾದಿ ಕ್ರಾಂತಿಯು ಆ ದೇಶದ ದುಡಿಯುವ ಜನರಿಗಷ್ಟೇ ಅಲ್ಲದೆ, ಜಗತ್ತಿನ ಎಲ್ಲ ಶೋಷಿತ ಜನರ ಕಗ್ಗತ್ತಲಿನ ಬದುಕಿನಲ್ಲಿ ಭರವಸೆಯ ಕಿರಣಗಳನ್ನು ಮೂಡಿಸಿತು. ಜಗತ್ತಿನ ಕಾರ್ಮಿಕ ವರ್ಗದ ಮಹಾನ್ ನಾಯಕ ಲೆನಿನ್ನರ ನೇತೃತ್ವದಲ್ಲಿ ಜರುಗಿದ ಕ್ರಾಂತಿಯು, ಮನುಕುಲವು ಹಿಂದೆಂದೂ ಕಂಡಿರದಂತಹ ಎತ್ತರಕ್ಕೆ ಅಲ್ಲಿನ ನಾಗರಿಕತೆಯನ್ನು ಕೊಂಡೊಯ್ದಿತ್ತು. ಮೊಟ್ಟಮೊದಲನೆಯದಾಗಿ ಹಸಿವನ್ನು ನಿವಾರಿಸಿತು. ಎಲ್ಲರಿಗೂ ಉದ್ಯೋಗಗಳನ್ನು ಕಲ್ಪಿಸಿ ಬದುಕಿಗೆ ಭದ್ರತೆ ದೊರಕಿಸಿತು. ಹುಟ್ಟುವ ಪ್ರತಿಯೊಂದು ಮಗುವಿನ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡು ಶಿಕ್ಷಣ‌, ಆರೋಗ್ಯ, ಉದ್ಯೋಗ ಎಲ್ಲದರ ಭದ್ರತೆಯನ್ನು ನೀಡಿ ಘನತೆಯ ಬದುಕಿಗೆ ಅವಕಾಶ ಕಲ್ಪಿಸಿತು” ಎಂದು ಹೇಳಿದರು.

“ಕ್ರಾಂತಿಗೂ ಮುಂಚೆ ಯೂರೋಪಿನಲ್ಲೇ ಅತ್ಯಂತ ರೋಗಿಷ್ಟ ರಾಷ್ಟ್ರವಾಗಿದ್ದ, ಕೃಷಿ ಪ್ರಧಾನ ರಷ್ಯಾದಲ್ಲಿ ವಿಜ್ಞಾನ-ತಂತ್ರಜ್ಞಾನಗಳು ಮುಕ್ತವಾಗಿ ಬೆಳೆದು ಬೃಹತ್ ಕೈಗಾರಿಕೆಗಳು ಹಾಗೂ ಅಂತರಿಕ್ಷಯಾನದವರೆಗೂ ದಾಪುಗಾಲಿಡಲಾಯಿತು. ಜನರ ಶ್ರಮವನ್ನು ಕನಿಷ್ಠಗೊಳಿಸುವ ಹಲವು ಉಪಕರಣಗಳನ್ನು ಅಲ್ಲಿನ ವಿಜ್ಞಾನಿಗಳು ಅಭಿವೃದ್ಧಿಪಡಿಸಿದರು. ಹಾಗೆಯೇ ಬಹುತೇಕ ರೋಗಗಳಿಗೆ ಅಲ್ಲಿನ ವೈದ್ಯರು ಲಸಿಕೆ, ಚುಚ್ಚುಮದ್ದುಗಳನ್ನು ಕಂಡುಹಿಡಿದರು” ಎಂದು ತಿಳಿಸಿದರು.

“ಜಗತ್ತಿನ ಎಲ್ಲೆಡೆ ಆಳ್ವಿಕರ ಬಂಧನಕ್ಕೆ ಸಿಲುಕಿ ನರಳುತ್ತಿದ್ದ ಜನಸಮೂಹಕ್ಕೆ ರಷ್ಯಾದ ನವೆಂಬರ್ ಮಹಾನ್ ಕ್ರಾಂತಿಯು ಸ್ಪೂರ್ತಿಯ ಚಿಲುಮೆಯಾಯಿತು. ಭೂಮಿಯ ಯಾವುದೇ ಮೂಲೆಯಲ್ಲಿ ಬದಲಾವಣೆಯನ್ನು ಬಯಸುವ ಮನಸುಗಳಿಗೆ ಲೆನಿನ್ ಆದರ್ಶವಾದರು. ಸಹಜವಾಗಿಯೇ ಸಮಾಜವಾದದ ಈ ಗಾಳಿಯು ಭಾರತದ ಮೇಲೆಯೂ ತನ್ನ ಪ್ರಭಾವವನ್ನು ಬೀರಿತು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿದ್ದ ಇಲ್ಲಿನ ಹೋರಾಟಗಾರರು, ಅದರಲ್ಲೂ ಕ್ರಾಂತಿಕಾರಿಗಳು ಸಮಾಜವಾದದ ಬಗ್ಗೆ ಆಕರ್ಷಿತರಾದರು” ಎಂದರು.

“ಸ್ವಾತಂತ್ರ್ಯ ಸಂಗ್ರಾಮದ ಧೀರ, ಹುತಾತ್ಮ ಭಗತ್ ಸಿಂಗ್, ʼಸಮಾಜವಾದಿ ಕ್ರಾಂತಿಯೊಂದೇ ನಿಜವಾದ ಸ್ವಾತಂತ್ರ್ಯವನ್ನು ಕಲ್ಪಿಸಲು ಸಾಧ್ಯʼ ಎಂದು ಸಾರಿ ಹೇಳಿದ್ದರು. ಗಲ್ಲಿಗೇರುವ ಕೆಲವೇ ನಿಮಿಷಗಳ ಮುಂಚೆ, ತಮ್ಮ ಬದುಕಿನ ಕೊನೆಯ ಕ್ಷಣಗಳಲ್ಲಿ ಭಗತ್ ಸಿಂಗ್ ಮಹಾನ್ ಲೆನಿನ್ನರ ಕುರಿತು ಓದುತ್ತಿದ್ದರು. ಸ್ವಾತಂತ್ರ್ಯ ಸಂಗ್ರಾಮದ ರಾಜಿರಹಿತ ಪಂಥದ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್‌ರಂತೂ ಸಮಾಜವಾದದ ಸ್ಥಾಪನೆಯೇ ನಮ್ಮ ಸ್ವಾತಂತ್ರ್ಯ ಗಳಿಕೆಯ ಗುರಿ ಎಂದು ಹೇಳಿದ್ದರು” ಎಂದರು.

“ಎರಡನೇ ಜಾಗತಿಕ ಮಹಾಯುದ್ಧದಲ್ಲಿ, ಕ್ರೂರಿ ಹಿಟ್ಲರ್‌ನಿಂದ ಮಾನವ ಜನಾಂಗವನ್ನು ರಕ್ಷಿಸಿದ್ದು ಮಹಾನ್ ಸ್ಟಾಲಿನ್ನರ ನೇತೃತ್ವದಲ್ಲಿದ್ದ ರಷ್ಯಾದ ಕೆಂಪು ಸೈನ್ಯ. ಮಾನವ ಜನಾಂಗದ ಇತಿಹಾಸವನ್ನೇ ಬದಲಿಸಿ ರಕ್ತಪಿಪಾಸು ಹಿಟ್ಲರ್‌ನ ಫ್ಯಾಸಿಸಂ ಆಕ್ರಮಣವನ್ನು ಸೋಲಿಸಿ ಜಗತ್ತಿನಾದ್ಯಂತ ಸ್ವಾತಂತ್ರ್ಯ ಯುಗಕ್ಕೆ ನಾಂದಿ ಹಾಡಿದ ರಷ್ಯಾದ ತ್ಯಾಗ ಅಷ್ಟಿಷ್ಟಲ್ಲ. ಈ ಯುದ್ಧದಲ್ಲಿ ಜಗತ್ತಿನಾದ್ಯಂತ ಸುಮಾರು 5 ಕೋಟಿ ಜನರು ಸಾವನ್ನಪ್ಪಿದ್ದರೆ, ರಷ್ಯನ್ನರ ಸಂಖ್ಯೆ 2 ಕೋಟಿಗೂ ಹೆಚ್ಚಾಗಿತ್ತು” ಎಂದರು.

“ಪ್ರತಿಯೊಂದು ಕುಟುಂಬದಲ್ಲಿ ಕನಿಷ್ಟ ಒಬ್ಬರನ್ನಾದರೂ ಯುದ್ಧಕ್ಕೆ ಬಲಿ ನೀಡಿರುವ ಸೋವಿಯತ್ ನಾಡಿನ ಜನರ ತ್ಯಾಗದ ಕುರಿತು ಜಗತ್ತಿನ ಶ್ರೇಷ್ಠ ಕವಿ ಪ್ಯಾಬ್ಲೋ ನರೋಡಾ ಹೇಳಿದ್ದು, “ಮಹಾನ್ ಸೋವಿಯತ್ ನೆಲವೇ, ನಿನ್ನ ಮಕ್ಕಳು ಹರಿಸಿದ ರಕ್ತವನ್ನು ಒಂದು ಕಡೆ ಕೂಡಿಡಲು ಸಾಧ್ಯವಾಗಿದ್ದರೆ ಭೂಮಿಯ ಮೇಲೆ ಇನ್ನೊಂದು ಸಾಗರವೇ ಸೃಷ್ಟಿಯಾಗುತ್ತಿತ್ತು. ಇದೇ ಯುದ್ಧದ ಸಂದರ್ಭದಲ್ಲಿ, ಮರಣಶಯ್ಯೆಯಲ್ಲಿದ್ದರೂ ಕೂಡಾ ಮಹಾಕವಿ ರವೀಂದ್ರನಾಥ್ ಟಾಗೋರ್ ಅವರು ರಷ್ಯಾ ಹೇಗಿದೆ? ಸ್ಟಾಲಿನ್ ಹೇಗಿದ್ದಾರೆ? ಎಂದು ಪ್ರತಿದಿನವೂ ತಪ್ಪದೇ ವಿಚಾರಿಸುತ್ತಿದ್ದರು” ಎಂದು ಸ್ಮರಿಸಿದರು.

“ನಮ್ಮ ದೇಶದ ಮಹಾನ್ ಸಾಹಿತಿಗಳಾದ ಶರತ್ ಚಂದ್ರ ಚಟ್ಟೋಪಾಧ್ಯಾಯ, ಕುವೆಂಪು, ಸುಬ್ರಹ್ಮಣ್ಯ ಭಾರತಿ ಮುಂತಾದ ಮಹಾನ್ ವ್ಯಕ್ತಿಗಳು ರಷ್ಯಾದ ಸಮಾಜವಾದದ ಬಗ್ಗೆ ಅಪಾರ ಭರವಸೆಯನ್ನು ಹೊಂದಿದ್ದರು. ಎರಡನೇ ಮಹಾಯುದ್ಧದ ನಂತರ ಯುರೋಪ್ ಹಾಗೂ ಜಗತ್ತಿನ ಹಲವು ರಾಷ್ಟ್ರಗಳ ಸ್ವಾತಂತ್ರ್ಯ ಚಳವಳಿಗಳಿಗೆ ರಷ್ಯಾ ಸ್ಪೂರ್ತಿ ನೀಡಿತು. ಅಮೆರಿಕಾ ಹಾಗೂ ಜಪಾನ್‌ನಂತಹ ಸಾಮ್ರಾಜ್ಯಶಾಹಿಗಳ ದಬ್ಬಾಳಿಕೆಯಿಂದ ಹಿಂದುಳಿದ ರಾಷ್ಟ್ರಗಳನ್ನು ರಕ್ಷಿಸಿ, ಹಲವು ರೀತಿಯಲ್ಲಿ ರಷ್ಯಾ ಸಹಾಯ ಮಾಡಿತು. ಅಮೆರಿಕ, ಇಂಗ್ಲೆಂಡ್ ದೇಶವನ್ನು ಒಳಗೊಂಡಂತೆ ಜಗತ್ತಿನಾದ್ಯಂತ ರಷ್ಯಾದ ಸಾಧನೆಗಳ ಕುರಿತು ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದಾಗ, ಅಲ್ಲಿನ ಶ್ರೇಷ್ಠ ಸಾಹಿತಿಗಳು ಹಾಗೂ ಪತ್ರಕರ್ತರು ರಷ್ಯಾಕ್ಕೆ ಭೇಟಿ ನೀಡಿ ಭೂಲೋಕದ ಮೇಲಿನ ಸ್ವರ್ಗವೇ ಅಲ್ಲಿ ಸೃಷ್ಟಿಯಾಗುತ್ತಿರುವುದರ ಕುರಿತು ಹೊರಜಗತ್ತಿಗೆ ತೋರಿಸಿದರು” ಎಂದರು.

“ಮಹಾನ್ ವಿಜ್ಞಾನಿ ಐನ್‍ಸ್ಟೈನ್ ಸೇರಿದಂತೆ ರೊಮರೋಲಾ, ಬರ್ಟ್ರಾಂಡ್ ರಸೆಲ್, ಎಚ್.ಜಿ.ವೇಲ್ಸ್ ರಂತಹ 20ನೇ ಶತಮಾನದ ಎಲ್ಲ ಗಣ್ಯವ್ಯಕ್ತಿಗಳು ಸಮಾಜವಾದಿ ರಷ್ಯಾವನ್ನು ಹಾಗೂ ಅದರ ಸಾಧನೆಗಳನ್ನು ಹಾಡಿಹೊಗಳಿದ್ದಾರೆ” ಎಂದರು.

“ಪ್ರಸ್ತುತ ನಮ್ಮ ದೇಶದಲ್ಲಿ ದಿನದಿಂದ ದಿನಕ್ಕೆ ರಾಕೆಟ್ ವೇಗದಲ್ಲಿ ಉದ್ಯೋಗಳು ನಾಶವಾಗುತ್ತಿರುವಾಗ, ದೇಶದ ಬಹುಪಾಲು ಜನಸಮೂಹವನ್ನು ಹಸಿವು ಕ್ಷಣಕ್ಷಣವೂ ಬಾಧಿಸುತಿರುವಾಗ, ಶಿಕ್ಷಣವು ಕೆಲವೇ ಕೆಲವು ಧನವಂತರ ಸ್ವತ್ತಾಗಿರುವಾಗ, ಉದ್ಯೋಗವಿಲ್ಲದೆ ಭವಿಷ್ಯದಲ್ಲಿ ಭರವಸೆ ಕಳೆದುಕೊಂಡಿರುವ ಯುವಜನರು ಹಾಗೂ ಬದುಕಿನ ಭಾರ ಹೊರಲಾಗದ ರೈತರು ಆತ್ಮಹತ್ಯೆಗೆ ಬಲಿಯಾಗುತ್ತಿರುವಾಗ, ಮಹಿಳೆಯರು ಮತ್ತು ಮಕ್ಕಳ ಮಾನ ಬೀದಿಯಲ್ಲಿ ಹರಾಜಾಗುತ್ತಿರುವಾಗ ಈ ಎಲ್ಲ ಸಮಸ್ಯೆಗಳಿಗೆ ನೂರು ವರ್ಷದ ಹಿಂದೆಯೇ ಉತ್ತರ ನೀಡಿದ ಮಹಾನ್ ನವಂಬರ್ ಕ್ರಾಂತಿಯನ್ನು ನಾವು ನೆನೆಯಬೇಕಲ್ಲವೇ?” ಎಂದರು.

ಈ ಸುದ್ದಿ ಓದಿದ್ದೀರಾ? ಇಸ್ರೇಲ್-ಹಮಾಸ್ ಕದನ ವಿರಾಮ ನಿರ್ಣಯದ ಪರ ಭಾರತ ಮತ ಹಾಕದಿರುವುದು ಖಂಡನೀಯ: ನ್ಯಾಯ, ಶಾಂತಿ ಒಕ್ಕೂಟ

ಇಂದು ರಷ್ಯಾದಲ್ಲಿ ಸಮಾಜವಾದ ಪತನಗೊಂಡಿರುವುದನ್ನೇ ಗುರಿಯಾಗಿಸಿಕೊಂಡು ಮಾರ್ಕ್ಸ್ ವಾದವೇ ಪತನವಾಯಿತೆಂದು ಬೊಬ್ಬೆಯಿಡುವವರಿಗೆ, ‘ಗಣಿತದ ಲೆಕ್ಕವನ್ನು ಬಿಡಿಸಲು ಅಥವಾ ವಿಜ್ಞಾನದ ಯಾವುದೋ ಸಮಸ್ಯೆಯನ್ನು ಪರಿಹರಿಸಲು ಯಾರೋ ಒಬ್ಬರು ವಿಫಲರಾದಾಗ, ಇಡಿಯ ಗಣಿತ ಅಥವಾ ವಿಜ್ಞಾನವೇ ವಿಫಲವಾದಂತಲ್ಲ’ ಎಂಬ ಸಾಮಾನ್ಯ ತಿಳುವಳಿಕೆಯನ್ನು ನೆನಪಿಸುವ ಅಗತ್ಯವಿದೆ” ಎಂದು ಕೇಳಿದರು.

“ರಷ್ಯಾದ ಮಹಾನ್ ನವಂಬರ್ ಸಮಾಜವಾದಿ ಕ್ರಾಂತಿಯ 106ನೇ ವರ್ಷದ ಸಂದರ್ಭದಲ್ಲಿ, ಅಲ್ಲಿನ ಸಮಾಜವಾದದ ಸಾಧನೆಗಳು, ಕ್ರಾಂತಿಯ ಕುರಿತು ಹಾಗೂ ಸಮಾಜವಾದಿ ರಷ್ಯಾದ ಕುರಿತು ಜಗತ್ತಿನ ಮಹಾನ್ ವ್ಯಕ್ತಿಗಳ ಅಭಿಪ್ರಾಯಗಳು, ಈ ಕುರಿತು ಕಥೆ-ಕವನ, ಮುಂತಾದವುಗಳನ್ನು ಹಂಚಿಕೊಳ್ಳುವ ಪ್ರಯತ್ನವನ್ನು ನಾವು ಸದಾ ಮಾಡುತ್ತೇವೆ. ಸಮಾಜವಾದದ ಕುರಿತು ಸಾಗರದಷ್ಟಿರುವ ವಿಷಯಗಳಲ್ಲಿ ಬೊಗಸೆಯಷ್ಟಾದರೂ ಮೊಗೆದು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ. ಸಮಾಜದಲ್ಲಿನ ಅನ್ಯಾಯ, ಅಸತ್ಯ, ದಬ್ಬಾಳಿಕೆಯ ವಿರುದ್ಧದ ಹೋರಾಟಗಳಿಗೆ ನಮ್ಮ ಈ ಪ್ರಯತ್ನವು ಸಹಕಾರಿಯಾಗಲಿ” ಎಂದು ಆಶಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X