ಮೈಸೂರಿನಲ್ಲಿ ಅಕ್ಟೋಬರ್ 13ರಂದು ಮಹಿಷ ದಸರಾ ಆಚರಿಸಲು ಅನುಮತಿ ನಿರಾಕಸಿದ್ದ ಪೊಲೀಸರು, ಇದೀಗ ಸಮ್ಮತಿ ನೀಡಿದ್ದಾರೆ. ಅನುಮತಿಯಲ್ಲಿ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ.
ಮಹಿಷ ದಸರಾ ನಡೆಸಲು ಅನುಮತಿ ಕೋರಿ ಮಹಿಷ ದಸರಾ ಆಚರಣೆ ಸಮಿತಿಯ ಅಧ್ಯಕ್ಷ ಪುರುಷೋತ್ತಮ್ ಅವರು ಮನವಿ ಸಲ್ಲಿಸಿದ್ದರು. ಆದರೆ, ಆಚರಣೆ ಅವಕಾಶವಿಲ್ಲವೆಂದು ಪೊಲೀಸರು ಹೇಳಿದ್ದರು. ಈ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ನಡೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮೈಸೂರು ಚಲೋಗೆ ಕರೆ ಕೊಡಲಾಗಿತ್ತು. ಅಲ್ಲದೆ, ಮಹಿಷ ದಸರಾ ಆಚರಿಸಿಯೇ ಆಚರಿಸುತ್ತೇವೆ ಎಂದು ಪುರುಷೋತ್ತಮ್ ಅವರು ಹೇಳಿದ್ದರು.
ಇದೆಲ್ಲದರ ಬಳಿಕ, ಸಾರ್ವಜನಿಕ ಒತ್ತಡಕ್ಕೆ ಮಣಿದಿರುವ ಪೊಲೀಸರು ಮಹಿಷ ದಸರಾ ಆಚರಣೆಗೆ ಸಮ್ಮತಿ ನೀಡಿದ್ದಾರೆ. ಮೈಸೂರಿನ ಪುರಭವನದ ಬಳಿ ಮಹಿಷ ಉತ್ಸವ ಮತ್ತು ಧಮ್ಮ ದೀಕ್ಷಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಕೆಲವು ಷರತ್ತುಗಳನ್ನು ವಿಧಿಸಿರುವುದಾಗಿ ಹೇಳಿದ್ದಾರೆ.
ಪೊಲೀಸರು ವಿಧಿಸಿರುವ ಪ್ರಮುಖ ಷರತ್ತುಗಳು
- ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಂದರ್ಭಕ್ಕೆ ಅನುಸಾರವಾಗಿ ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು.
- ಮೈಸೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿರುವ ಕಾರಣ ಮೆರವಣಿಗೆ/ಪ್ರತಿಭಟನೆ ನಡೆಸದೆ, ನೇರವಾಗಿ ಕಾರ್ಯಕ್ರಮ ಸ್ಥಳಕ್ಕೆ ಬಂದು ಕಾರ್ಯಕ್ರಮ ನಡೆಸಬೇಕು.
- ಪರ-ವಿರೋಧ ಘೋಷಣೆಗಳನ್ನು ಕೂಗಬಾರದು. ಪಟಾಕಿ ಸಿಡಿಸಬಾರದು.
- ವೇದಿಕೆ ನಿರ್ಮಾಣಕ್ಕೆ ಪಾಲಿಕೆಯಿಂದ ಅನುಮತಿ ಪಡೆಯಬೇಕು. ಪಾಲಿಕೆ ನಿಯಮಗಳನ್ನು ಪಾಲಿಸಬೇಕು.
- ಜಾತಿ, ಮತ, ಧರ್ಮಗಳ ವಿಷಯವಾಗಿ ಪ್ರಯೋದನಾಕಾರಿ ಭಾಷಣ ಮಾಡಬಾರದು.