ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಹಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ ಬಿದರಗೋಡು ನೀರು ಸರಬರಾಜು ಕೇಂದ್ರ(ಪಂಪಿಂಗ್ ಸ್ಟೇಷನ್)ಕ್ಕೆ ಕೃಷ್ಣರಾಜ ಮತಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್ ಶ್ರೀವತ್ಸ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೈಸೂರು-ನಂಜನಗೂಡಿನ ಗಡಿ ಭಾಗದಿಂದ ಕಬಿನಿ ನೀರನ್ನು ಪಂಪ್ ಮಾಡಿ ನಗರದ ಕೆಲವು ಭಾಗಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಮುಖ್ಯವಾಗಿ ಕೃಷ್ಣರಾಜ ವಿಭಾಗದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುವ ಸರಬರಾಜು ಕೇಂದ್ರದಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಬಗ್ಗೆ ಶಾಸಕರು ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.
“ಪ್ರಸ್ತುತ ನೀರು ಸರಬರಾಜು ಕೇಂದ್ರದಿಂದ ಕೇವಲ 60 ಎಂಎಲ್‌ಡಿ (ಮಿಲಿಯನ್ ಲೀಟರ್ ಪರ್ ಡೇ) ನೀರನ್ನು ಪಂಪ್ ಮಾಡಿ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಮೈಸೂರು ನಗರಕ್ಕೆ ಹೆಚ್ಚುವರಿಯಾಗಿ 120 ಎಂಎಲ್‌ಡಿಯಷ್ಟು ಕಬಿನಿ ನೀರನ್ನು ಪೂರೈಕೆ ಮಾಡಲು ಬಿದರಗೋಡು ಕುಡಿಯುವ ನೀರಿನ ಯೋಜನೆಯ ಎರಡನೇ ಹಂತವನ್ನು ಜಾರಿಗೆ ತರುತ್ತಿದೆ. ಯೋಜನೆ ಪ್ರಗತಿಯಲ್ಲಿರುವುದರಿಂದ ಪೈಪ್ ಲೈನ್ ಹಾಕುವ ಕಾರ್ಯ ಪೂರ್ಣಗೊಂಡ ನಂತರ ನಗರಕ್ಕೆ ಕಬಿನಿ ಯೋಜನೆಯಿಂದ 180 ಎಂಎಲ್‌ಡಿಟಷ್ಟು ನೀರು ಲಭ್ಯವಾಗಲಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಈ ಯೋಜನೆಯು ನಗರದ ಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆಯ ಸುತ್ತಲೂ ಬರುವ ಹೊಸ ಲೇಔಟ್‌ಗಳಿಗೂ ಕುಡಿಯುವ ನೀರನ್ನು ಪೂರೈಸುವ ಗುರಿ ಹೊಂದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಲುಷಿತ ನೀರು ಸೇವನೆ; ಮತ್ತೊಂದು ಗ್ರಾಮದಲ್ಲಿ 8 ಮಂದಿ ಅಸ್ವಸ್ಥ
“ತಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕುಡಿಯುವ ನೀರು ಸರಬರಾಜು, ವಿತರಣಾ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಅಧ್ಯಯನ ಮಾಡಲು ಪಂಪಿಂಗ್ ಕೇಂದ್ರವನ್ನು ಪರಿಶೀಲಿಸಿದ್ದೇನೆ” ಎಂದು ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು.
“ಕಬಿನಿ ಮತ್ತು ಕೆಆರ್‌ಎಸ್ ಅಣೆಕಟ್ಟೆಗಳಿಂದ ತಮ್ಮ ಕ್ಷೇತ್ರದ ಯಾವ ವಾರ್ಡ್‌ಗಳಿಗೆ ನೀರು ಬರುತ್ತಿದೆ ಎಂಬ ವಿವರಗಳನ್ನು ಅಧ್ಯಯನ ಮಾಡಿ ಕುಡಿಯುವ ನೀರಿನ ಬಿಕ್ಕಟ್ಟನ್ನು ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದೇನೆ” ಎಂದು ಹೇಳಿದರು.
ಮೇಯರ್ ಶಿವಕುಮಾರ್, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಅಧೀಕ್ಷಕ ಎಂಜಿನಿಯರ್ ಎಸ್.ಮಹೇಶ್, ವಾಣಿ ವಿಲಾಸ ವಾಟರ್ ವರ್ಕ್ಸ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಸುವರ್ಣ ಸೇರಿದಂತೆ ಇತರರು ಇದ್ದರು.