ವಿಶ್ವ ಪರಿಸರ ದಿನದ ಅಂಗವಾಗಿ ‘ಪರಿಸರಕ್ಕಾಗಿ ನಾವು’ ಸಂಘಟನೆಯು ಆರ್‌ಎಲ್‌ಎಚ್‌ಪಿ ಹಾಗೂ ಯೂತ್ ಫಾರ್ ಸಸ್ಟೈನಬಿಲಿಟಿ ಸಂಸ್ಥೆಗಳ ಸಹಯೋಗದಲ್ಲಿ ವಿನೂತನ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು.
ನಗರದ ಜೆಸಿಇ ಕಾಲೇಜು ಮುಂಭಾಗದಲ್ಲಿ ಇಂದು ಬೆಳಿಗ್ಗೆ ನೂರಾರು ಪರಿಸರ ಕಾರ್ಯಕರ್ತರು, ಪರಿಸರ ಕಾಳಜಿಯುಳ್ಳ ನಾಗರಿಕರು ಹಾಗೂ ವಿದ್ಯಾರ್ಥಿಗಳು ಸೇರಿ ರಸ್ತೆಬದಿಯಲ್ಲಿರುವ 24 ಬೃಹತ್ ಮರಗಳ ಸುತ್ತಲೂ ಅಳವಡಿಸಲಾಗಿದ್ದ ಕಾಂಕ್ರೀಟ್ ಮತ್ತು ಇಂಟರ್ಲಾಕ್ ಟೈಲ್ಸ್‌ಗಳನ್ನು ತೆರವುಗೊಳಿಸುವ ಮೂಲಕ ಮರಗಳ ಸಂರಕ್ಷಣೆಯ ಅಗತ್ಯತೆಯನ್ನು ಒತ್ತಿ ಹೇಳಿದರು. ಅಲ್ಲದೆ ಮೈಸೂರು ನಗರದ ಸಾವಿರಾರು ಮರಗಳ ಸುತ್ತಲೂ ಹಾಕಲಾಗಿರುವ ಕಾಂಕ್ರೀಟ್, ಇಂಟರ್ಲಾಕ್ ಟೈಲ್ಸ್ ಹಾಗೂ ಡಾಂಬರನ್ನು ತೆರವುಗೊಳಿಸುವಂತೆ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯ ಗಮನ ಸೆಳೆದರು.
ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಗಲೀಕರಣ ಹಾಗೂ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗಳ ವೇಳೆ ರಸ್ತೆಬದಿಯ ಮರಗಳ ಸುತ್ತಲೂ ಕಾಂಕ್ರೀಟ್, ಟೈಲ್ಸ್ ಮತ್ತು ಡಾಂಬರು ಹಾಕಲಾಗುತ್ತಿದೆ. ಇದರಿಂದ ಮರಗಳ ಬೇರುಗಳಿಗೆ ನೀರು ಹಾಗೂ ಪೋಷಕಾಂಶಗಳು ಸಮರ್ಪಕವಾಗಿ ತಲುಪದೇ ಬೇರುಗಳು ದುರ್ಬಲಗೊಳ್ಳುತ್ತಿವೆ. ಪರಿಣಾಮವಾಗಿ ಮರಗಳ ಬೆಳವಣಿಗೆ ಕುಂಠಿತವಾಗುವುದರ ಜೊತೆಗೆ ಮಳೆಗಾಲದಲ್ಲಿ ಮರಗಳು ಬುಡಸಮೇತ ಉರುಳುವ ಅಪಾಯ ಹೆಚ್ಚುತ್ತಿದೆ ಎಂದು ಕಾರ್ಯಕರ್ತರು ತಿಳಿಸಿದರು.

ಮರಗಳ ಸಂರಕ್ಷಣೆಗಾಗಿ ಮರದ ಸುತ್ತ ಕನಿಷ್ಠ ಒಂದು ಮೀಟರ್ ವ್ಯಾಪ್ತಿಯಲ್ಲಿ ಕಾಂಕ್ರೀಟ್, ಟೈಲ್ಸ್ ಹಾಗೂ ಡಾಂಬರನ್ನು ಹಾಕಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನ ನೀಡಿದ್ದು, ಸರ್ಕಾರವೂ ಈ ನಿರ್ದೇಶನಗಳನ್ನು ಪಾಲಿಸುವಂತೆ ಆದೇಶ ಹೊರಡಿಸಿದೆ. ಪರಿಸರ ಸಂಘಟನೆಗಳು ಮತ್ತು ನಾಗರಿಕರ ಮನವಿಗೆ ಸ್ಪಂದಿಸಿ ಕೆಲವು ರಸ್ತೆಗಳಲ್ಲಿ ಮಾತ್ರ ತೆರವು ಕಾರ್ಯ ಕೈಗೊಳ್ಳಲಾಗಿದ್ದರೂ, ನಗರದ ಹಲವೆಡೆ ಸಾವಿರಾರು ಮರಗಳ ಸುತ್ತಲಿನ ಕಾಂಕ್ರೀಟ್ ಮತ್ತು ಟೈಲ್ಸ್ ಇನ್ನೂ ತೆರವುಗೊಳಿಸಿಲ್ಲ ಎಂದು ಆರೋಪಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪರಶುರಾಮೇಗೌಡ, ಎನ್‌ಜಿಟಿ ನಿರ್ದೇಶನಗಳು ಹಾಗೂ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮರಗಳ ಸುತ್ತಲೂ ಹಾಕಿರುವ ಕಾಂಕ್ರೀಟ್, ಟೈಲ್ಸ್ ಮತ್ತು ಡಾಂಬರನ್ನು ತಕ್ಷಣ ತೆರವುಗೊಳಿಸುವಂತೆ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಯನ್ನು ಆಗ್ರಹಿಸಿದರು. ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳು ಈಗಾಗಲೇ ಮಾನವ ಸೇರಿದಂತೆ ಸಕಲ ಜೀವಸಂಕುಲದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಮರಗಳನ್ನು ಉಳಿಸಿಕೊಳ್ಳಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಆರ್‌ಎಲ್‌ಎಚ್‌ಪಿ ಸಂಸ್ಥೆಯ ಸರಸ್ವತಿ ಮಾತನಾಡಿ, ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಯುವಜನರು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಸಮುದಾಯಗಳಲ್ಲಿ ನಿರಂತರ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಸ್ಥೆ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು ನಗರ ಹಸಿರೀಕರಣಕ್ಕೆ ಮಹಾನಗರ ಪಾಲಿಕೆ ಸಂಕಲ್ಪ: 13 ಸಾವಿರ ಗಿಡಗಳ ಪೋಷಣೆಗೆ ಯೋಜನೆ

ಕಾರ್ಯಕ್ರಮದಲ್ಲಿ ನಿವೃತ್ತ ಮೇಜರ್ ಜನರಲ್ ಒಂಬತ್ಕೆರೆ, ಜಾವೀದ್ ನಯೀಮ್, ಎನ್.ಎಸ್. ರಂಗರಾಜು, ಕಾಳಚನ್ನೇಗೌಡ, ಶ್ಯಾಮಲಾ, ನಬೀಜಾನ್, ರವಿ ಬಳೆ, ಲೋಲ ಕುಮಾರ್, ಕೃಷ್ಣ, ಬಾನು ಪ್ರಶಾಂತ್, ಗಂಟಯ್ಯ, ಕಾಮಾಕ್ಷಿ ಗೌಡ, ವಿಶ್ವನಾಥ್, ಲೀಲಾ ಶಿವಕುಮಾರ್, ಲೀಲಾ ವೆಂಕಟೇಶ್, ಅಂಜನಾ, ಮನ್ಸೂರ್ ಅಹ್ಮದ್, ನಸ್ರುಲ್ಲಾ, ಸುಧೀರ್, ಶಿವಶಂಕರ್, ಬಂಗಾರ ನಾಯಕ, ಚೇತನ್, ಪ್ರಭಾ, ಶೋಭಾ, ಭಾಗ್ಯ, ಶೈಲಜೇಶ್, ಗಣೇಶ್, ಇಂದಿರಾ, ಸುಶೀಲಾ, ಮಹದೇವಸ್ವಾಮಿ, ಸಾರಾ ಮಿಶ್ರ, ಜಯಲಕ್ಷ್ಮಿ, ಸ್ವಪ್ನ, ಸೃಷ್ಟಿ, ಪ್ರವೀಣ್, ಚರಣ್, ಪ್ರಭಾಕರ್ ಸೇರಿದಂತೆ ಅನೇಕ ಪರಿಸರ ಪ್ರೇಮಿಗಳು ಇದ್ದರು.





