ದೇಶದ ಆತ್ಮ ಇರುವುದು ದ್ವೇಷದಲ್ಲಲ್ಲ, ಬದಲಿಗೆ ಇಂತಹ ಸೌಹಾರ್ದತೆ ಮತ್ತು ತ್ಯಾಗದಲ್ಲಿ. ದೆಹಲಿ ಹೋಟೆಲ್ ಬೆಂಕಿ ದುರಂತದಲ್ಲಿ ಮುಸ್ಲಿಂ ಯುವಕರು ತೋರಿದ ಶೌರ್ಯ ಕೋಮು ಸೌಹಾರ್ದತೆಗೆ ಹಿಡಿದ ಕೈಗನ್ನಡಿ. ದೇಶದಲ್ಲಿ ಮುಸ್ಲಿಂ ದ್ವೇಷದ ಅಂಗಡಿ ತೆರೆದು, ಸೌಹಾರ್ದತೆಯನ್ನು ಗಿರವಿ ಪಡೆದು ಕೋಮುವಾದವನ್ನು ಹಂಚುವವರು ದೆಹಲಿ ದುರಂತದಲ್ಲಿ ಪ್ರಾಣಗಳ ಉಳಿಸಿದವರ ಹೆಸರುಗಳನ್ನೊಮ್ಮೆ ಓದಿ ನೋಡಲೇಬೇಕು!
ರಾಜಕೀಯದ ಲಾಭಕ್ಕಾಗಿ, ಧರ್ಮದ ಹೆಸರಿನಲ್ಲಿ ಗೋಡೆಗಳನ್ನು ಕಟ್ಟುವುದು ಇಂದು ಬಿಜೆಪಿಗೆ ಅತಿ ಸುಲಭದ ಕೆಲಸವಾಗಿಬಿಟ್ಟಿದೆ. ಹಿಂದೂ-ಮುಸ್ಲಿಮರ ನಡುವೆ ದ್ವೇಷದ ಅಂಗಡಿಯನ್ನು ಸಿಂಗರಿಸುವ ರಾಜಕಾರಣಿಗಳೇ ಈಗ ಹೆಚ್ಚು. ಜನರ ಭಾವನೆಗಳನ್ನು ಕೆರಳಿಸಿ ಮತಗಳನ್ನು ಲೂಟಿ ಹೊಡೆಯುವ ಈ ರಾಜಕಾರಣಿಗಳು ಮತ್ತು ಕೋಮು ಶಕ್ತಿಗಳು ಕಣ್ಣು ತೆರೆದು ನೋಡಬೇಕಾದ ಸೌಹಾರ್ದ ಸತ್ಯಗಳು ನಮ್ಮ ಇತಿಹಾಸ ಮತ್ತು ವರ್ತಮಾನದಲ್ಲಿ ಅಡಗಿವೆ. ದ್ವೇಷದ ಜ್ವಾಲೆಗಿಂತ ಪ್ರೀತಿ, ಕರುಣೆ ಮತ್ತು ಮಾನವೀಯತೆಯ ಬೆಳಕೇ ಅಧಿಕ ಶಕ್ತಿಶಾಲಿ ಎಂಬುದಕ್ಕೆ ದೆಹಲಿಯ ಹೋಟೆಲ್ ಬೆಂಕಿ ದುರಂತದಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯೇ ಸಾಕ್ಷಿ.
ಇನ್ನೊಬ್ಬರ ಪ್ರಾಣ ಅಪಾಯದಲ್ಲಿದೆ ಎಂದಾಗ ಅಲ್ಲಿ ಧರ್ಮದ ಗುರುತುಗಳು ಮಾಯವಾಗುವುದೇ ಮಾನವೀಯತೆ. ದೆಹಲಿ ಅಗ್ನಿ ದುರಂತದಲ್ಲಿ ನಡೆದಿದ್ದು ಅದುವೇ. ಅಲ್ಲಿ ರಕ್ಷಿಸಲು ಬಂದವರು ನಿಮ್ಮ ಧರ್ಮ ಯಾವುದು ಎಂದು ಕೇಳಲಿಲ್ಲ, ರಕ್ಷಿಸಲ್ಪಟ್ಟವರು ನೀವು ಯಾವ ಧರ್ಮ ಎಂದು ಕೇಳಿ ರಕ್ಷಣೆಗಾಗಿ ಕೈ ಚಾಚಲಿಲ್ಲ. ದೇಶದಲ್ಲಿ ಮುಸ್ಲಿಂ ದ್ವೇಷದ ಅಂಗಡಿ ತೆರೆದು, ಸೌಹಾರ್ದತೆಯನ್ನು ಗಿರವಿ ಪಡೆದು ಕೋಮುವಾದವನ್ನು ಹಂಚುವವರು ದೆಹಲಿ ದುರಂತದಲ್ಲಿ ಪ್ರಾಣಗಳ ಉಳಿಸಿದವರ ಹೆಸರುಗಳನ್ನೊಮ್ಮೆ ಓದಿ ನೋಡಲೇಬೇಕು!
ಇದನ್ನು ಓದಿದ್ದೀರಾ? ಸಿನೆಮಾಗಳು ‘ಮುಸ್ಲಿಂ ಭಯ ಮತ್ತು ದ್ವೇಷ’ ಬಿತ್ತಿದ್ದು ಹೇಗೆ?
ದೆಹಲಿ ಅಗ್ನಿ ದುರಂತದಲ್ಲಿ ನಡೆದಿದ್ದೇನು?
ದೆಹಲಿಯ ಕರೋಲ್ ಬಾಗ್ನ ಅರ್ಪಿತ್ ಪ್ಯಾಲೇಸ್ ಹೋಟೆಲ್ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನೇ ನಡುಗಿಸಿತು. ಇಡೀ ಕಟ್ಟಡವನ್ನು ಹೊಗೆ ಮತ್ತು ಬೆಂಕಿ ಆವರಿಸಿಕೊಂಡಿತ್ತು. ಒಳಗಿದ್ದ ನೂರಾರು ಪ್ರವಾಸಿಗರು ದಾರಿ ಕಾಣದೆ ಸಹಾಯಕ್ಕಾಗಿ ಮನವಿ ಮಾಡುತ್ತಿದ್ದರು. ಕಿಟಕಿಗಳ ಬಳಿ ಬಂದು ಜೀವ ಉಳಿಸುವಂತೆ ಚೀರಾಡುತ್ತಿದ್ದರು. ಅಂತಹ ಕರಾಳ ಕ್ಷಣದಲ್ಲಿ ದ್ವೇಷದ ರಾಜಕಾರಣ ಮಾಡುವವರು ಮನೆ ಸೇರಿಕೊಂಡಿದ್ದರೆ, ಸ್ಥಳೀಯ ಮುಸ್ಲಿಂ ಯುವಕರು ಮಾನವೀಯತೆಯ ರಕ್ಷಕರಾದರು.
ಒಂದೆಡೆ ಸ್ಥಳೀಯ ನಿವಾಸಿಗಳಾದ ಅಫ್ಜಲ್, ಮೊಹಮ್ಮದ್ ಶಾರುಖ್, ಮೊಹಮ್ಮದ್ ಅನೀಶ್, ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ವಸೀಮ್ ಅವರು ದಟ್ಟ ಹೊಗೆಯನ್ನು ಲೆಕ್ಕಿಸದೆ, ತಮ್ಮ ಪ್ರಾಣದ ಹಂಗು ತೊರೆದು ಹೋಟೆಲ್ ಒಳಗೆ ನುಗ್ಗಿ ಇತರರ ರಕ್ಷಣೆ ಮಾಡಿದ್ದರು. ಇನ್ನೊಂದೆಡೆ ತಮ್ಮ ಲಕ್ಷಾಂತರ ರೂಪಾಯಿಯ ವ್ಯಾಪಾರಕ್ಕೆ ನಷ್ಟವಾಗಬಹುದು ಎಂದು ಹಿಂಜರಿಯದೆ ರಸ್ತೆಯ ಮೇಲೆ ಹಾಸಿಗೆಗಳನ್ನು ಹಾಸಿದ ರಿಯಾಜುದ್ದೀನ್ ಮನ್ಸೂರಿ ಮತ್ತು ಅವರ ಮಗನನ್ನು ನೆನೆಯಲೇಬೇಕು.
ಪ್ರಾಣ ಉಳಿಸಿದ ಹೀರೊಗಳಿವರು
ಅಗ್ನಿ ದುರಂತ ಸಂಭವಿಸಿದ ಹೋಟೆಲ್ ಎದುರು ಹಾಸಿಗೆಯ ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದವರು 61 ವರ್ಷದ ವೃದ್ಧ ರಿಯಾಜುದ್ದೀನ್ ಮನ್ಸೂರಿ ಮತ್ತು ಅವರ ಮಗ ಅರ್ಮಾನ್ ಮನ್ಸೂರಿ. ಅಗ್ನಿ ದುರಂತ ಸಂಭವಿಸಿದಾಗ ಇಬ್ಬರೂ ತೋರಿದ ಸಮಯಪ್ರಜ್ಞೆ ಹಾಗೂ ಸಾಹಸ ಇಡೀ ದೇಶವೇ ಹೆಮ್ಮೆ ಪಡುವಂತದ್ದು. ರಾಜಕಾರಣಿಗಳು ಮತಗಳಿಗಾಗಿ ದ್ವೇಷದ ದುಕಾನು ಹೆಚ್ಚಿಸುತ್ತಿರುವಾಗ ಈ ತಂದೆ-ಮಗ ತಮ್ಮ ಬದುಕಿನ ಆಧಾರವಾಗಿದ್ದ ಹಾಸಿಗೆಯ ದುಕಾನನ್ನೇ ಜನರ ಜೀವ ಉಳಿಸುವ ರಕ್ಷಣಾ ಕವಚವನ್ನಾಗಿ ಮಾಡಿಕೊಂಡವರು.
ದುರಂತ ಸಂಭವಿಸಿದಾಗ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿ, ಕೆಲವರು ಮೂರನೇ ಮತ್ತು ನಾಲ್ಕನೇ ಮಹಡಿಯಿಂದ ಕೆಳಗೆ ಜಿಗಿಯಲು ಸಿದ್ಧರಾಗುತ್ತಿದ್ದರು. ಅಷ್ಟರಲ್ಲೇ ಕಾರ್ಯಪ್ರವೃತ್ತರಾದ ರಿಯಾಜುದ್ದೀನ್ ಮತ್ತು ಅರ್ಮಾನ್ ಮನ್ಸೂರಿ ಮಾಡಿದ ಸಾಹಸ ಸಾಮಾನ್ಯದ್ದಲ್ಲ. ಮೇಲಿಂದ ಜಿಗಿಯುವ ಜನರ ಮೂಳೆಗಳು ಮುರಿಯದಿರಲಿ ಮತ್ತು ಅವರು ನೇರವಾಗಿ ಕಾಂಕ್ರೀಟ್ ರಸ್ತೆಗೆ ಬಿದ್ದು ಪ್ರಾಣ ಕಳೆದುಕೊಳ್ಳದಿರಲಿ ಎಂದು, ರಿಯಾಜುದ್ದೀನ್ ತಮ್ಮ ಅಂಗಡಿಯಲ್ಲಿದ್ದ ದಪ್ಪನೆಯ ಹಾಸಿಗೆಗಳನ್ನು ತಕ್ಷಣವೇ ಹೊರಗೆ ತಂದರು.
ಹೋಟೆಲ್ನ ಕೆಳಗೆ ನೂರಾರು ಹಾಸಿಗೆಗಳನ್ನು ಒಂದರ ಮೇಲೊಂದರಂತೆ ಜೋಡಿಸಿ ದೊಡ್ಡ ಮೆತ್ತನೆಯ ಹಾಸಿಗೆಯ ರಕ್ಷಾಕವಚ ಸೃಷ್ಟಿಸಿದರು. ಮೇಲಿಂದ ಜಿಗಿದ ಹಲವರು ಈ ಹಾಸಿಗೆಗಳ ಮೇಲೆ ಬಿದ್ದಿದ್ದರಿಂದ ಅವರ ಪ್ರಾಣ ಉಳಿಯಿತು. ಗಾಯವೂ ಆಗಲಿಲ್ಲ. ಕೇವಲ ಹಾಸಿಗೆ ಹಾಸುವುದಷ್ಟೇ ಅಲ್ಲದೆ, ಬೆಂಕಿಯ ಜ್ವಾಲೆ ಮತ್ತು ಮೇಲಿಂದ ಬೀಳುತ್ತಿದ್ದ ಕಲ್ಲುಗಳ ನಡುವೆಯೂ ನಿಂತು, ಗಾಯಗೊಂಡವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸಲು ನೆರವಾದವರು ರಿಯಾಜುದ್ದೀನ್ ಮತ್ತು ಅರ್ಮಾನ್ ಮನ್ಸೂರಿ.
ಇದನ್ನು ಓದಿದ್ದೀರಾ? ಮುಸ್ಲಿಂ ಸಮುದಾಯದ ವಿರುದ್ಧ ಮುಂದುವರೆದ ಬಿಜೆಪಿ ನಾಯಕರ ದ್ವೇಷ: ನಿರ್ಲಕ್ಷ್ಯವೊಂದೆ ಪರಿಹಾರ
ಅಷ್ಟಕ್ಕೂ ರಿಯಾಜುದ್ದೀನ್ ಅವರದ್ದು ದೊಡ್ಡ ಉದ್ಯಮವೇನಲ್ಲ. ಒಂದು ಸಣ್ಣ ಹಾಸಿಗೆಯ ಅಂಗಡಿ. ಆದರೂ ಆಪತ್ಕಾಲದಲ್ಲಿ ತಮ್ಮ ವ್ಯಾಪಾರದ ನಷ್ಟದ ಬಗ್ಗೆ ಯೋಚಿಸದೆ, ಜನರ ಜೀವ ಮುಖ್ಯ ಎಂದು ಭಾವಿಸಿದವರು ರಿಯಾಜುದ್ದೀನ್. ಟಿವಿ ಸ್ಟುಡಿಯೋಗಳಲ್ಲಿ ಕುಳಿತು ಹಿಂದೂ-ಮುಸ್ಲಿಂ ನಡುವೆ ವಿಷ ಬಿತ್ತುವವರು, 61 ವರ್ಷದ ರಿಯಾಜುದ್ದೀನ್ ಮತ್ತು ಮಗ ಅರ್ಮಾನ್ ಅವರ ಹೆಸರನ್ನು ಕಣ್ಣು ಕಣ್ಣು ಬಿಟ್ಟು ಓದಬೇಕು. ಅಂದು ಆ ಹೋಟೆಲ್ನಲ್ಲಿ ಸಿಲುಕಿದ್ದ ಹಲವಾರು ಹಿಂದೂ ಪ್ರವಾಸಿಗರ ಜೀವ ಉಳಿದಿದ್ದು ಇದೇ ಮುಸ್ಲಿಂ ತಂದೆ-ಮಗನ ಸಮಯಪ್ರಜ್ಞೆ ಎಂಬುದು ಸತ್ಯ.
ರಿಯಾಜುದ್ದೀನ್, ಅರ್ಮಾನ್ ಹೋಟೆಲ್ನ ಮುಂಭಾಗದಲ್ಲಿ ಹಾಸಿಗೆಗಳನ್ನು ಹಾಸಿ ಜನರ ಜೀವ ರಕ್ಷಣೆಗೆ ನಿಂತಿದ್ದರೆ, ಇತ್ತ ಹೋಟೆಲ್ನ ಹಿಂಭಾಗದ ಕಿರಿದಾದ ಗಲ್ಲಿಯಲ್ಲಿ ಮೊಹಮ್ಮದ್ ಅಸ್ಲಾಂ ಎಂಬ ಯುವಕ ಸೃಷ್ಟಿಸಿದ್ದು ಮತ್ತೊಂದು ಅಭೂತಪೂರ್ವ ಇತಿಹಾಸ. ಸುತ್ತಲೂ ದಟ್ಟವಾದ ಕಪ್ಪು ಹೊಗೆ, ಸುಡುವ ಬೆಂಕಿಯ ಜ್ವಾಲೆ – ಇವೆಲ್ಲದರ ನಡುವೆ ಮೊಹಮ್ಮದ್ ಅಸ್ಲಾಂ ತೋರಿದ ಧೈರ್ಯ, ಧರ್ಮದ ಹೆಸರಿನಲ್ಲಿ ಮತಗಳ ಲೂಟಿ ಹೊಡೆಯುವ ರಾಜಕಾರಣಿಗಳ ಕಣ್ಣಿಗೆ ಖಂಡಿತವಾಗಿಯೂ ಚಾಟಿ ಏಟು.
ಹೋಟೆಲ್ನ ಮುಂಭಾಗಕ್ಕಿಂತ ಹಿಂಭಾಗದ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು. ಅಲ್ಲಿನ ಗಲ್ಲಿಗಳು ಅತ್ಯಂತ ಕಿರಿದಾಗಿದ್ದರಿಂದ ಅಗ್ನಿಶಾಮಕ ದಳದ ದೊಡ್ಡ ವಾಹನಗಳು ತಕ್ಷಣವೇ ಒಳಗೆ ನುಗ್ಗಲು ಸಾಧ್ಯವಾಗುತ್ತಿರಲಿಲ್ಲ. ಹೋಟೆಲ್ನ ಹಿಂಭಾಗದ ಕೋಣೆಗಳಲ್ಲಿದ್ದ 15ಕ್ಕೂ ಹೆಚ್ಚು ಹಿಂದೂ ಯಾತ್ರಿಕರು ಹೊರಗೆ ಬರಲಾರದಂತೆ ದಟ್ಟ ಹೊಗೆಯ ನಡುವೆ ಸಿಲುಕಿಕೊಂಡಿದ್ದರು. ಉಸಿರುಗಟ್ಟಿ ಸಾವು ಬಹುತೇಕ ಖಚಿತ ಎಂದಾಗ ಅಲ್ಲಿಗೆ ಧಾವಿಸಿದ್ದು ಮೊಹಮ್ಮದ್ ಅಸ್ಲಾಂ.
ಅಸ್ಲಾಂ ಎಲ್ಲೋ ಇದ್ದ ಏಣಿಯೊಂದನ್ನು ಹುಡುಕಿತಂದು, ಕಿರಿದಾದ ಗಲ್ಲಿಯಲ್ಲೇ ಗೋಡೆಗೆ ಒರಗಿಸಿ ನಿಲ್ಲಿಸಿ ತಾವೂ ಉಸಿರುಗಟ್ಟುವ ಅಪಾಯವಿದ್ದರೂ ಯೋಚಿಸದೆ ಸರಸರನೆ ಮೇಲೇರಿದ್ದರು. ಉರಿಯುತ್ತಿದ್ದ ಕೋಣೆಗಳ ಕಿಟಕಿ ಗಾಜುಗಳನ್ನು ಒಡೆದು, ಒಳಗಿದ್ದ ಹೊಗೆ ಹೊರಗೆ ಹೋಗಲು ದಾರಿ ಮಾಡಿಕೊಟ್ಟರು. ಕೈಗಳಿಗೆ ಗಾಯಗಳಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಒಳಗಿದ್ದವರನ್ನು ಹೊರಗೆ ಬರಲು ಪ್ರೇರೇಪಿಸಿದರು. ಕೇವಲ ಗಾಜು ಒಡೆಯುವುದಷ್ಟೇ ಅಲ್ಲ, ಕಿಟಕಿಯ ಮೂಲಕ ಧಾವಿಸಿ ಬಂದ ವೃದ್ಧರು, ಮಹಿಳೆಯರು ಸೇರಿದಂತೆ 15ಕ್ಕೂ ಹೆಚ್ಚು ಯಾತ್ರಿಕರನ್ನು ತಮ್ಮ ತೋಳುಗಳಿಂದ ಹಿಡಿದು, ಅತ್ಯಂತ ಜಾಗರೂಕತೆಯಿಂದ ಏಣಿಯ ಮೂಲಕ ಕೆಳಗಿಳಿಸಿ ಸಾವಿನಿಂದ ಪಾರು ಮಾಡಿದ್ದಾರೆ.
ಇನ್ನು ಸ್ಥಳೀಯ ನಿವಾಸಿಗಳಾದ ಇಮ್ರಾನ್ ಮತ್ತು ಅವರ ಸ್ನೇಹಿತರು ಅಗ್ನಿಶಾಮಕ ದಳ ಬರುವ ಮುನ್ನವೇ ತಮ್ಮ ಪ್ರಾಣದ ಹಂಗು ತೊರೆದು, ಬೆಂಕಿ ಮತ್ತು ತೀವ್ರ ಶಾಖದ ನಡುವೆಯೂ ಒದ್ದೆಯಾದ ಚೀಲ ಮತ್ತು ಬದಲಿ ಬಟ್ಟೆಗಳನ್ನು ಹಿಡಿದು ಕಟ್ಟಡದೊಳಗೆ ನುಗ್ಗಿದ್ದರು. ಪ್ರತಿಯೊಂದು ಕೊಠಡಿಯ ಬಾಗಿಲುಗಳನ್ನು ಮುರಿದು ಸಿಲುಕಿಕೊಂಡಿದ್ದ ವೃದ್ಧರು ಮತ್ತು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಹೊರ ತಂದಿದ್ದರು. ಮನ್ಸೂರ್ ಮತ್ತು ಕಪಿಲ್ ಎಂಬುವವರು ಇಟ್ಟಿಗೆಗಳಿಂದ ಹೋಟೆಲ್ನ ಗಾಜಿನ ಕಿಟಕಿಗಳನ್ನು ಒಡೆದು, ಒಳಗೆ ಸಿಲುಕಿದ್ದ ಜನರಿಗೆ ಕೆಳಗೆ ಇಳಿಯಲು ಹಗ್ಗಗಳನ್ನು ಎಸೆದಿದ್ದರು. ಉಸಿರಾಡಲು ಕಷ್ಟಪಡುತ್ತಿದ್ದ ಜನರಿಗೆ ಮೊಹಮ್ಮದ್ ಅಫ್ಜಲ್ ಅಮೀರ್ ಖಾನ್ ಮತ್ತು ತಂಡ ತಕ್ಷಣ ಸ್ಥಳದಲ್ಲೇ ಸಿಪಿಆರ್ ಪ್ರಥಮ ಚಿಕಿತ್ಸೆ ನೀಡಿ ಪ್ರಜ್ಞೆ ಬರುವಂತೆ ಮಾಡಿದ್ದರು.
ಸಫೀರ್ ಅಹ್ಮದ್ ಎಂಬವರು ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ತಲುಪಿಸಲು ತಮ್ಮದೇ ಆದ ವಾಹನಗಳನ್ನು ಬಳಸಿ ‘ಗ್ರೀನ್ ಕಾರಿಡಾರ್’ ನಂತೆ ಕೆಲಸ ಮಾಡಿದರು. ರಕ್ತದ ಅವಶ್ಯಕತೆಯಿದ್ದ ಗಾಯಾಳುಗಳಿಗೆ ಸ್ವತಃ ರಕ್ತದಾನ ಮಾಡಿ ಜೀವ ಉಳಿಸಿದವರು ಅಹ್ಮದ್. ಬೆಂಕಿಯ ತೀವ್ರತೆಗೆ ಹೋಟೆಲ್ ಮಹಡಿಯಿಂದ ಜಿಗಿಯಲು ಯತ್ನಿಸುತ್ತಿದ್ದವರನ್ನು ಶಹಬಾಜ್ ಆಲಂ ಎಂಬವರು ಸಮಾಧಾನಪಡಿಸಿ, ಕೆಳಗೆ ಹಾಸಿಗೆಗಳನ್ನು ಹಿಡಿದು ನಿಂತು, ಹಲವರು ಸಾವಿನ ದವಡೆಯಿಂದ ಪಾರಾಗುವಂತೆ ಮಾಡಿದವರು. ಹೀಗೆ ಮೇಲಿಂದ ಕೆಳಗೆ ನೀವು ಮತ್ತೊಮ್ಮೆ ಹೆಸರುಗಳನ್ನು ಓದಿ. ಇಲ್ಲಿ ಯುವಕರು ಯಾರ ಬಳಿಯೂ “ನಿಮ್ಮ ಧರ್ಮ ಯಾವುದು?” ಎಂದು ಕೇಳಿ ರಕ್ಷಣೆ ಮಾಡಲಿಲ್ಲ. ಅವರ ಕಣ್ಣಿಗೆ ಕಂಡಿದ್ದು ಕೇವಲ ಸಂಕಷ್ಟದಲ್ಲಿದ್ದ ಜೀವಗಳು ಮಾತ್ರ.
ದೇಶದ ಇತಿಹಾಸವನ್ನು ಒಮ್ಮೆ ಕೆದಕಿ ನೋಡಿ
ಭಾರತ ಎಂಬುದು ಕೇವಲ ಒಂದು ಭೂಪ್ರದೇಶವಲ್ಲ. ವಿವಿಧ ಸಂಸ್ಕೃತಿಗಳು, ಧರ್ಮಗಳು ಒಟ್ಟಾಗಿ ಬಾಳುವ ಒಂದು ಸುಂದರ ತೋಟ. ಶತಶತಮಾನಗಳಿಂದ ಹಿಂದೂ ಮತ್ತು ಮುಸ್ಲಿಮರು ಈ ದೇಶದ ಅಭಿವೃದ್ಧಿಗಾಗಿ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿದ್ದಾರೆ. ಸೂಫಿ ಸಂತರು ಮತ್ತು ಭಕ್ತಿ ಚಳವಳಿಯ ಸಂತರು ಧರ್ಮದ ಬೇಲಿಗಳನ್ನು ದಾಟಿ ಮಾನವೀಯತೆಯನ್ನು ಬೋಧಿಸಿದವರು. ಅಶ್ಫಾಖುಲ್ಲಾ ಖಾನ್ ಮತ್ತು ರಾಮ್ ಪ್ರಸಾದ್ ಬಿಸ್ಮಿಲ್ ಅವರ ಸ್ನೇಹ ಇಂದಿಗೂ ಭಾರತೀಯ ಇತಿಹಾಸದ ಅಮರ ಸೌಹಾರ್ದತೆಗೆ ಉದಾಹರಣೆ.
ಕೋಮುವಾದ ಬಿತ್ತುವ ರಾಜಕಾರಣಿಗಳ ಬಲೆಗೆ ಸಿಕ್ಕವರನ್ನು ಬಿಟ್ಟು ದೇಶದ ಹಳ್ಳಿಗಳಲ್ಲಿ ಇಂದಿಗೂ ಮುಸ್ಲಿಮರು ಗಣೇಶ ಹಬ್ಬಕ್ಕೆ ಚಪ್ಪರ ಹಾಕುತ್ತಾರೆ, ಹಿಂದೂಗಳು ರಂಜಾನ್ ಉಪವಾಸದ ಇಫ್ತಿಯಾರ್ ಕೂಟದಲ್ಲಿ ಭಾಗಿಯಾಗುತ್ತಾರೆ. ಆದರೆ ಇಂದು ದೇಶದಲ್ಲಿ ಕೋಮುವಾದವೇ ರಾರಾಜಿಸುವಂತೆ ಮಾಡುವ ರಾಜಕಾರಣಿಗಳ ಷಡ್ಯಂತ ಯಶಸ್ಸು ಕಾಣಲು ಆರಂಭಿಸಿದೆ. ತಮ್ಮ ಒಡೆದು ಆಳುವ ನೀತಿ ಫಲಿಸುತ್ತಿದೆ ಎಂದು ಬೀಗುವ ರಾಜಕಾರಣಿಗಳಿಗೆ ಈ ದೆಹಲಿ ದುರಂತದಲ್ಲಿ ಕಂಡ ಮಾನವೀಯತೆ ಒಂದು ಕಪಾಳಮೋಕ್ಷ.
ಅಷ್ಟಕ್ಕೂ ದೇಶದ ಆತ್ಮ ಇರುವುದು ದ್ವೇಷದಲ್ಲಲ್ಲ, ಬದಲಿಗೆ ಇಂತಹ ಸೌಹಾರ್ದತೆ ಮತ್ತು ತ್ಯಾಗದಲ್ಲಿ. ದೆಹಲಿ ಹೋಟೆಲ್ ಬೆಂಕಿ ದುರಂತದಲ್ಲಿ ಮುಸ್ಲಿಂ ಯುವಕರು ತೋರಿದ ಶೌರ್ಯ ದೇಶದ ಒಕ್ಕೂಟ ವ್ಯವಸ್ಥೆ ಮತ್ತು ಕೋಮು ಸೌಹಾರ್ದತೆಗೆ ಹಿಡಿದ ಕೈಗನ್ನಡಿ. ಮತಗಳಿಗಾಗಿ ಸಮಾಜದಲ್ಲಿ ವಿಷ ಬಿತ್ತುವವರು ಈ ಯುವಕರ ಹೆಸರುಗಳನ್ನು, ಅವರ ತ್ಯಾಗವನ್ನು ಕಣ್ಣು ತೆರೆದು ಓದಬೇಕು. ಧರ್ಮದ ಹೆಸರಿನಲ್ಲಿ ಹಂಚಿಹೋಗುವ ಮುನ್ನ ನಾವು ಮನುಷ್ಯರಾಗೋಣ, ಕೋಮು ದ್ವೇಷದ ಬೆಂಕಿಯ ಜ್ವಾಲೆಗಿಂತ ಪ್ರೀತಿಯ ಬೆಳಕೇ ಲೇಸು.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




