ಹುಬ್ಬಳ್ಳಿಯ ಹೊಸೂರ್ ರಸ್ತೆಯಲ್ಲಿರುವ ಪಾರಿಜಾತ ಲಾಡ್ಜ್‌ನ ಬಾತ್ರೂಮಿನ ಒಳಗಡೆ ಸೀಕ್ರೆಟ್ ಕೋಣೆಯನ್ನು ಮಾಡಿ ಐದು ಯುವತಿಯರನ್ನು ಕೂಡಿಟ್ಟು ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ದೂರಿನ ಮೇರೆಗೆ ಮೈಸೂರಿನ ʼಒಡನಾಡಿʼ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶುರಾಮ್ ಅವರ ತಂಡ ಹುಬ್ಬಳ್ಳಿ ಪೊಲೀಸ್ ಆಯುಕ್ತರಾದ ಶಶಿಕುಮಾರ್ ಜೊತೆಗೆ ದಾಳಿ ನಡೆಸಿದ್ದಾರೆ.
“ಹೋಟೆಲಿನ ಪಕ್ಕದಲ್ಲಿಯೇ ಶಾಲೆ ಇದ್ದು ಕೆಲವು ಗಂಡು ಮಕ್ಕಳನ್ನು ಗಿರಾಕಿಗಳನ್ನು ಕರೆತರಲು ಪ್ರೇರೇಪಿಸಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿತ್ತು. ಹಾಗಾಗಿ ಹುಬ್ಬಳ್ಳಿ ಕಮಿಷನರ್ ಅವರಿಗೆ ಈ ವಿಷಯವನ್ನು ತಿಳಿಸಿ, ಸ್ಥಳೀಯ ಪೊಲೀಸರ ಸಹಾಯದಿಂದ ಶುಕ್ರವಾರ ಮಧ್ಯಾಹ್ನ ದಾಳಿ ನಡೆಸಲಾಗಿದೆ. ಲಾಡ್ಜ್ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದು ತನಿಖೆ ನಡೆಯಲಾಗುತ್ತಿದೆ. ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಪೊಲೀಸ್ ಆಯುಕ್ತರು ನೇರವಾಗಿ ಲಾಡ್ಜ್ ಅನ್ನು ರೆಡ್ ಮಾಡಲು ಒಡನಾಡಿ ಜೊತೆಗೆ ಕೈಜೋಡಿಸಿದ್ದಾರೆ. ತಮ್ಮ ತಂಡವನ್ನು ಕಳುಹಿಸಿದ್ದೇ ಅಲ್ಲದೇ ಅವರೇ ಖುದ್ದು ಭೇಟಿ ಕೊಟ್ಟಿದ್ದಾರೆ. ಒಬ್ಬ ವಿದೇಶಿ ಯುವತಿ ಸೇರಿ ಐವರು ಯುವತಿಯರನ್ನು, ಮೂವರು ಗಿರಾಕಿಗಳು ಮತ್ತು ಲಾಡ್ಜ್ ನಡೆಸುತ್ತಿದ್ದವರು ಸೇರಿ ಏಳುಮಂದಿ ಪುರುಷರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋಟೆಲ್ ಮಾಲೀಕ ವಿಜಿ ಎಂಬಾತ ತಲೆಮರೆಸಿ ಕೊಂಡಿದ್ದಾನೆ. ತಮಿಳುನಾಡು ಸರ್ಕಾರದ ರಾಶಿಗಟ್ಟಲೆ ಕಾಂಡೋಮ್‌ಗಳು ಪತ್ತೆಯಾಗಿವೆ” ಎಂದು ಒಡನಾಡಿ ಪರಶುರಾಮ್ ʼಈ ದಿನʼಕ್ಕೆ ಮಾಹಿತಿ ನೀಡಿದ್ದಾರೆ.
ಸ್ಟ್ಯಾನ್ಲಿ ಅವರು ಮಾತನಾಡಿ, “ಇದು ಅನಾದಿ ಕಾಲದಿಂದಲೂ ಇದೆ. ಆದರೆ ಇದುವರೆಗೆ ಯಾರಿಗೂ ನಿಲ್ಲಿಸಲು ಆಗಿಲ್ಲ. ದಿನಕ್ಕೆ ನೂರೈವತ್ತಕ್ಕೂ ಹೆಚ್ಚು ಪುರುಷರು ಈ ಲಾಡ್ಜ್‌ಗೆ ಭೇಟಿ ಕೊಡುತ್ತಿದ್ದಾರೆ. ಒಟ್ಟು ಇಪ್ಪತ್ತೈದು ಕೋಣೆಗಳಿವೆ. ವಾಸಕ್ಕೆ ಅಯೋಗ್ಯವಾದ ಕೊಠಡಿಗಳಿದ್ದರೂ ಹದಿನೈದು ನಿಮಿಷಕ್ಕೆ ಮೂರು ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಲೋಕಲ್ ಸಿಟಿ ಕಾರ್ಪೊರೇಷನ್ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕಿತ್ತು. ಅಡಗು ತಾಣಗಳನ್ನು ಹೊಂದಿರುವ ವಸತಿ ಗೃಹಗಳಲ್ಲಿ, ರೆಸಾರ್ಟ್ ಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರೆ ಹಾಗೂ ಹಿಂದೆ ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದರೆ ಅಂತಹ ಸ್ಥಳಗಳನ್ನು ಖಾಯಂ ಆಗಿ ಮುಚ್ಚಿಸಲು ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶವು ಈಗಾಗಲೇ ಇದೆ. ಇದೊಂದು ಮಹಿಳಾ ವಿರೋಧಿ ಚಟುವಟಿಕೆ ಹಾಗೂ ಮಹಿಳೆಯರನ್ನು ಪ್ರಾಣಿಗಳಿಗಿಂತಲೂ ನಿಕೃಷ್ಟವಾಗಿ ಇಟ್ಟು ದಂಧೆ ನಡೆಸುವ ಒಂದು ಪ್ರಕ್ರಿಯೆ. ಈ ವಿಚಾರದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಚೌಧರಿ ಅವರ ಜೊತೆಗೆ ಮಾತನಾಡಿದ್ದೇವೆ” ಎಂದು ತಿಳಿಸಿದರು.