ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗೆ (ಎಸ್‌ಸಿ) ಮೀಸಲಿಡುವಂತೆ ಒತ್ತಾಯಿಸಿ, ಸಿಪಿಐ(ಎಂ), ದಲಿತ ಸಂಘರ್ಷ ಸಮಿತಿ (ದಸಂಸ), ರೈತ ಸಂಘ ಹಾಗೂ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ವತಿಯಿಂದ ತಹಸೀಲ್ದಾರ್ ಮೂಲಕ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ಹುಣಸೂರು ತಾಲ್ಲೂಕಿನಲ್ಲಿ ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗಾಗಿ ಕ್ಷೇತ್ರಗಳ ಮೀಸಲಾತಿ ನಿಗದಿಪಡಿಸುವಾಗ ಪರಿಶಿಷ್ಟ ಜಾತಿಯ ಜನಸಂಖ್ಯೆ ಹಾಗೂ ಸಂಬಂಧಿತ ಕಾನೂನುಬದ್ಧ ಮಾನದಂಡಗಳನ್ನು ಪರಿಗಣಿಸಬೇಕು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಕನಿಷ್ಠ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ದಸಂಸ ತಾಲ್ಲೂಕು ಸಂಚಾಲಕ ರಾಮಕೃಷ್ಣ ಅತ್ತಿಕುಪ್ಪೆ ಮಾತನಾಡಿ, ಹುಣಸೂರು ತಾಲ್ಲೂಕಿನ ವಿವಿಧ ಗ್ರಾಮಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿಯ ಜನರು ಗಣನೀಯ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಸಾಮಾಜಿಕ ನ್ಯಾಯ, ರಾಜಕೀಯ ಪ್ರಾತಿನಿಧ್ಯ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸುವುದು ಪ್ರಜಾಪ್ರಭುತ್ವದ ಆಶಯವಾಗಿದೆ. ಪರಿಶಿಷ್ಟ ಜಾತಿಯ ಜನರ ಸಮಸ್ಯೆಗಳಿಗೆ ಸೂಕ್ತ ಪ್ರಾತಿನಿಧ್ಯ ದೊರೆಯುವಂತೆ ಮಾಡುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಕ್ಷೇತ್ರಗಳ ಮೀಸಲಾತಿ ನಿಗದಿಪಡಿಸುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ, ಅನ್ವಯವಾಗುವ ಮೀಸಲಾತಿ ನಿಯಮಗಳು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ನ್ಯಾಯಸಮ್ಮತವಾಗಿ ಪರಿಗಣಿಸಬೇಕು. ಈ ಮೂಲಕ ಹುಣಸೂರು ತಾಲ್ಲೂಕಿನ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಪಿಐ(ಎಂ) ಕಾರ್ಯದರ್ಶಿ ಎಚ್.ಡಿ. ಬೀರೇಶ್ವರ್ ಮಾತನಾಡಿ, ಸಲ್ಲಿಸಿರುವ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಸಾಯನಿಕಗಳಿಲ್ಲದೆ ಎಕರೆಗೆ 80 ಟನ್ ಕಬ್ಬು ಬೆಳೆದು ಗಮನ ಸೆಳೆದ ರೈತ ಮಹೇಶ್
ಈ ಸಂದರ್ಭದಲ್ಲಿ ಸಿಪಿಎಂ ಮುಖಂಡ ಬಸವರಾಜು ವಿ. ಕಲ್ಕುಣಿಕೆ, ದಸಂಸ ನಗರ ಸಂಚಾಲಕ ರಾಜು ಚಿಕ್ಕಹುಣಸೂರು, ರೈತ ಸಂಘದ ನಗರ ಅಧ್ಯಕ್ಷ ಧನಂಜಯ ಕಿರಿಜಾಜಿ, ದಸಂಸ ಮುಖಂಡರಾದ ಶಿವರಾಜ್ ಎಂ.ಆರ್. ಹೊಸಳ್ಳಿ, ಸಿದ್ದೇಶ್ ಅತ್ತಿಕುಪ್ಪೆ, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಮುದಾಸಿರ್, ಹರಳಹಳ್ಳಿ ಬಸವರಾಜು ಹಾಗೂ ತಮ್ಮಡಹಳ್ಳಿ ಗೋವಿಂದಯ್ಯ ಸೇರಿದಂತೆ ಇತರರು ಇದ್ದರು.





