ದೆಹಲಿಯ ಜಂತರ್ ಮಂತರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಯುವ ಹೋರಾಟಗಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಪೊಲೀಸರು ವಶಕ್ಕೆ ಪಡೆದು, 5 ದಿನಗಳ ಜೈಲು ಶಿಕ್ಷೆಗೆ ಗುರಿಪಡಿಸಿರುವುದನ್ನು ಪ್ರತಿಭಟಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X)ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿರುವ ದೀಪ್ಕೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಯುವಜನರ ಹೋರಾಟದ ಹಕ್ಕನ್ನು ಹಸಿಬಿಸಿಯಾಗಿ ಹತೋಟಿ ಮಾಡಲು ಯತ್ನಿಸುತ್ತಿರುವ ಕೇಂದ್ರ ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
“ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಣ್ಣ ಒತ್ತಡಕ್ಕೆ ಭಾರತೀಯರ ಹಿತಾಸಕ್ತಿಗಳನ್ನು ಬಿಟ್ಟುಕೊಟ್ಟು ಶರಣಾದ ನೀವು, ನಿಮ್ಮನ್ನು ಬಲಶಾಲಿ ನಾಯಕ ಎಂದು ಕರೆದುಕೊಳ್ಳುತ್ತೀರಿ. ಆದರೆ ನೀವು ಬಲಶಾಲಿಯಲ್ಲ; ಭಾರತ ಕಂಡ ಅತ್ಯಂತ ದೊಡ್ಡ ಹೇಡಿ ಪ್ರಧಾನಿ ನೀವು. ಸರ್ಕಾರಿ ಯಂತ್ರದ ಹಿಂದೆ ಅಡಗಿ ವಿರೋಧ ಪಕ್ಷಗಳನ್ನು ಮುಗಿಸುವುದಷ್ಟೇ ನಿಮಗೆ ಗೊತ್ತಿದೆ” ಎಂದು ದೀಪ್ಕೆ ಕಿಡಿಕಾರಿದ್ದಾರೆ.
ಇದನ್ನೂ ಓದಿ: ನ್ಯಾಯಾಂಗ ಬಂಧನ ವಿಸ್ತರಣೆ ಬೆನ್ನಲ್ಲೇ ಸಿಜೆಪಿ ನಾಯಕರ ಪ್ರಕರಣ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಿದ ದೆಹಲಿ ಪೊಲೀಸರು
“ಶಾಂತಿಯುತವಾಗಿ ಜಂತರ್ ಮಂತರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ತೆರಳಿದ್ದ 27 ವರ್ಷದ ಯುವಕ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಐದು ದಿನಗಳ ಕಾಲ ಜೈಲಿನಲ್ಲಿಡಲಾಯಿತು. ಯಾವುದೇ ಕಾರಣ ನೀಡದೆ ದಿನಂಪ್ರತಿ ನೆಪಗಳನ್ನು ಹೇಳಿ ಅವರ ಜಾಮೀನು ಮುಂದೂಡಲಾಗಿದೆ” ಎಂದು ದೀಪ್ಕೆ ಆರೋಪಿಸಿದ್ದಾರೆ.
ಪ್ರಧಾನಿ ಮೋದಿಯವರ ಅಧಿಕಾರ ಮತ್ತು ಬಲಪ್ರದರ್ಶನವನ್ನು ಪ್ರಶ್ನಿಸಿದ ದೀಪ್ಕೆ, “ನಿಮ್ಮ ಮೊಮ್ಮಕ್ಕಳ ವಯಸ್ಸಿನ ಯುವಕರನ್ನು ಜೈಲಿನಲ್ಲಿಟ್ಟು ನೀವು ಶಕ್ತಿಶಾಲಿ ಪ್ರಧಾನಿ ಎಂದು ಭಾವಿಸುತ್ತಿದ್ದೀರಾ? ನೀವು ಜೈಲಿನಲ್ಲಿಟ್ಟ ತಕ್ಷಣ ಅವರು ಹೆದರಿಲ್ಲ. ಜೀವನದಲ್ಲೊಮ್ಮೆ ಜೈಲು ಮುಖ ನೋಡದಿದ್ದ 27 ವರ್ಷದ ಸೌರವ್ ದಾಸ್, ಐದು ದಿನ ಜೈಲಿನಲ್ಲಿದ್ದು ಬಂದ ಮೇಲೆಯೂ ಧೈರ್ಯವಾಗಿ ನ್ಯಾಯಾಲಯಕ್ಕೆ ಬಂದಿದ್ದಾರೆ. ಇದು ನಿಜವಾದ ಶಕ್ತಿ. ಇಡೀ ದೆಹಲಿಯನ್ನು ಸ್ತಬ್ಧಗೊಳಿಸಿ, ಸಾವಿರಾರು ಪೊಲೀಸ್ ಮತ್ತು ಸೇನಾ ತುಕಡಿಗಳ ಹಿಂದೆ ಅಡಗಿಕೊಳ್ಳುವುದು ಶಕ್ತಿಯಲ್ಲ, ಅದು ಹೇಡಿತನ” ಎಂದು ಜರೆದಿದ್ದಾರೆ.
“ಬಂಧಿತ ಸೌರವ್ ದಾಸ್ ಅವರ ತಾಯಿಯ ಬಳಿ ನಾನು ನಿನ್ನೆ ಮಾತನಾಡಿದೆ. ಮಗ ಯಾವಾಗ ಬಿಡುಗಡೆಯಾಗುತ್ತಾನೆ ಎಂಬ ಉತ್ತರ ನನ್ನ ಬಳಿ ಇರಲಿಲ್ಲ. ಆದರೆ, ಆ ತಾಯಿ ‘ನನ್ನ ಮಗ ಅಷ್ಟು ಬೇಗ ಧೃತಿಗೆಡುವವನಲ್ಲ’ ಎಂದು ಧೈರ್ಯ ತುಂಬಿದರು. ತಮ್ಮ ಮಗ ನಿಮ್ಮ ಜೈಲಿನಲ್ಲಿದ್ದರೂ ಆ ತಾಯಿ ನಿಮಗೆ ಹೆದರುತ್ತಿಲ್ಲ. ಅದು ನಿಜವಾದ ಶಕ್ತಿ” ಎಂದಿದ್ದಾರೆ.
ಪ್ರತಿಭಟನಾಕಾರರು ಮತ್ತು ದೇಶದ ಯುವಕರ ಸ್ಥಿತಿಯನ್ನು ವಿವರಿಸಲು ‘ಮ್ಯಾರಿ ಕೋಮ್’ ಹಿಂದಿ ಸಿನಿಮಾದ ಮಾತುಗಳನ್ನು ದೀಪ್ಕೆ ನೆನಪಿಸಿಕೊಂಡಿದ್ದಾರೆ. “ಸಿನಿಮಾದಲ್ಲಿ ‘ಯಾರನ್ನಾದರೂ ಭಯಪಡಿಸುವುದಿದ್ದರೆ ಎಷ್ಟು ಹೆದರಿಸಬೇಕೆಂದರೆ, ಅವರೊಳಗಿನ ಭಯವೇ ಸಂಪೂರ್ಣವಾಗಿ ಇಲ್ಲವಾಗಬೇಕು’ ಎಂಬ ಮಾತು ಇದೆ. ಪ್ರಧಾನಿಯವರೇ, ನೀವು ದೇಶದ ಯುವಜನತೆಯನ್ನು ಎಷ್ಟು ಹೆದರಿಸಲು ಯತ್ನಿಸಿದ್ದೀರೆಂದರೆ, ಈಗ ನಮ್ಮೊಳಗಿನ ಭಯವೇ ಮಾಯವಾಗಿದೆ. ನಾವಿನ್ನು ನಿಮಗೆ ಹೆದರುವುದಿಲ್ಲ. ನಿಮ್ಮ ಸಂಪೂರ್ಣ ಪೊಲೀಸ್ ಪಡೆ ಮತ್ತು ತುಕಡಿಗಳನ್ನು ನಮ್ಮ ವಿರುದ್ಧ ಬಳಸಿ, ಅದಕ್ಕಿಂತ ಬೇರೆ ಏನೂ ಮಾಡಲು ನಿಮ್ಮಿಂದ ಸಾಧ್ಯವಿಲ್ಲ” ಎಂದು ನೇರ ಸವಾಲು ಹಾಕಿದ್ದಾರೆ.





