ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಮ್ಮ ತಾಯ್ನಾಡಿಗೆ ಮರಳುವ ದಿನಾಂಕವನ್ನು ಘೋಷಿಸಿದ್ದಾರೆ. ಪ್ರಸ್ತುತ, ತಾರಿಕ್ ರೆಹಮಾನ್ ನೇತೃತ್ವದ ಸರ್ಕಾರವು ತನ್ನನ್ನು ‘ಬಂಧಿಸಿದರೂ, ಹಿಂಸಿಸಿದರೂ ಅಥವಾ ಕೊಲೆ ಮಾಡಿದರೂ’ ಮುಂಬರುವ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಮರಳುವುದು ನಿಶ್ಚಿತ ಎಂದು ಅವರು ಕಡಾಖಂಡಿತವಾಗಿ ಹೇಳಿದ್ದಾರೆ.
2024ರ ಆಗಸ್ಟ್‌ನಲ್ಲಿ ಸಂಭವಿಸಿದ ತೀವ್ರ ಜನಾಂಗೀಯ ಪ್ರತಿಭಟನೆ ಮತ್ತು ರಾಜಕೀಯ ದಂಗೆಯ ಬಳಿಕ ಅಧಿಕಾರಿ ಕಳೆದುಕೊಂಡು, ಭಾರತಕ್ಕೆ ಪಲಾಯನ ಮಾಡಿ, ಭಾರತದಲ್ಲಿ ಹಸೀನಾ ಆಶ್ರಯ ಪಡೆದಿದ್ದಾರೆ. ಇದೀಗ, ಬಾಂಗ್ಲಾಗೆ ಮರಳುವುದಾಗಿ ಘೋಷಿಸಿರುವ ಅವರು, ಜೈಲು ಶಿಕ್ಷೆ ಅಥವಾ ಜೀವಬೆದರಿಕೆಯ ನಡುವೆಯೂ ತಮ್ಮ ಬೆಂಬಲಿಗರ ಪರವಾಗಿ ನಿಲ್ಲುವುದು ತಮ್ಮ ರಾಜಕೀಯ ಜವಾಬ್ದಾರಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ವಾಷಿಂಗ್ಟನ್ ಮೂಲದ ‘ಸೆಂಟ್‌ರ್ ಫಾರ್ ಯುಎಸ್-ಬಾಂಗ್ಲಾದೇಶ ರಿಲೇಶನ್ಸ್’ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವರ್ಚುವಲ್ ಆಗಿ ಭಾಗವಹಿಸಿ ಮಾತನಾಡಿದ ಶೇಖ್ ಹಸೀನಾ, “ನಾನು ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ಹಿಂತಿರುಗುತ್ತೇನೆ. ನನಗೆ ಯಾವುದರ ಭಯವೂ ಇಲ್ಲ. ಅವರು ನನ್ನನ್ನು ಕೊಲ್ಲಬಹುದು, ಬಂಧಿಸಬಹುದು ಅಥವಾ ಚಿತ್ರಹಿಂಸೆ ನೀಡಬಹುದು ಎಂಬುದು ನನಗೆ ಗೊತ್ತು. ಆದರೂ, ಬಾಂಗ್ಲಾಗೆ ಮರಳುವುದು ನನ್ನ ಜವಾಬ್ದಾರಿ. ಅಪಾಯ ಎಷ್ಟೇ ಇರಲಿ, ನಾನು ಕಷ್ಟಗಳಿಗೆ ಅಂಜುವುದಿಲ್ಲ, ನನ್ನ ಸಮ್ಮುಖದಲ್ಲೇ ನನ್ನ ಜನರಿಗಾಗಿ ಹೋರಾಡಬೇಕಾಗಿದೆ” ಎಂದಿದ್ದಾರೆ.
ಈ ಬಗ್ಗೆ ಹಸೀನಾ ಅವರ ಮಗ ಸಜೀಬ್ ವಾಜೆದ್ ಜೋಯ್ ಪ್ರತಿಕ್ರಿಯಿಸಿದ್ದು, ನಿಖರವಾದ ದಿನಾಂಕವನ್ನು ಸಮಯ ಹತ್ತಿರ ಬಂದಾಗ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎದುರಾದ ಸವಾಲುಗಳನ್ನು ನೆನಪಿಸಿಕೊಂಡ ಹಸೀನಾ, “ನಮ್ಮ ತಂದೆ ಶೇಖ್ ಮುಜಿಬುರ್ ರೆಹಮಾನ್ ಸೇರಿದಂತೆ ಕುಟುಂಬಸ್ಥರ ಸರಣಿ ಹತ್ಯೆಯ ಬಳಿಕ 1981ರಲ್ಲಿ ಜೀವಬೆದರಿಕೆಯ ನಡುವೆಯೂ ದೇಶಕ್ಕೆ ಮರಳಿದ್ದರು. 2007ರ ತುರ್ತು ಪರಿಸ್ಥಿತಿಯಲ್ಲಿ ಕ್ರಿಮಿನಲ್ ಆರೋಪಗಳನ್ನು ಎದುರಿಸಿಯೂ ಕದನಕ್ಕಿಳಿದಿದ್ದರು” ಎಂದು ಸ್ಮರಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ? ಅಂಜಲಿ ಭಾರದ್ವಾಜ್ ಏನು ಹೇಳುತ್ತಾರೆ?
ಅಲ್ಲದೆ, ಆಪತ್ತು ಮತ್ತು ಬಿಕ್ಕಟ್ಟಿನ ಸಮಯದಲ್ಲಿ ನಮಗೆ ಮತ್ತು ನಮ್ಮ ಸಹೋದರಿಗೆ ಆಶ್ರಯ ನೀಡಿದ ಭಾರತ ಸರ್ಕಾರ ಮತ್ತು ಭಾರತೀಯ ಜನತೆಗೆ ಅವರು ತೀವ್ರ ಕೃತಜ್ಞತೆ ಸಲ್ಲಿಸಿದ್ದಾರೆ. “1975ರಲ್ಲಿ ನಮಗೆ ಯಾವ ರೀತಿ ಆಸರೆ ಸಿಕ್ಕಿತ್ತೋ, ಅದೇ ರೀತಿ ಈ ಬಾರಿಯೂ ಭಾರತದ ಸರ್ಕಾರ ಮತ್ತು ಜನತೆ ನಮ್ಮನ್ನು ಅತ್ಯಂತ ಗೌರವದಿಂದ ಸ್ವೀಕರಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಪ್ರಸ್ತುತ ಪ್ರಧಾನಿ ತಾರಿಕ್ ರೆಹಮಾನ್ ಆಡಳಿತವು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಮತ್ತು ಅವಾಮಿ ಲೀಗ್ ನಾಯಕರ ಧ್ವನಿಯನ್ನು ಅಡಗಿಸಲು ಸುಳ್ಳು ಕ್ರಿಮಿನಲ್ ಮೊಕದ್ದಮೆಗಳನ್ನು ಬಳಸಿಕೊಳ್ಳುತ್ತಿದೆ. ರಾಜಕೀಯ ನಾಯಕರ ಮೇಲಿನ ಪ್ರತಿಯೊಂದು ಆರೋಪವೂ ನಿಷ್ಪಕ್ಷಪಾತ ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ಇತ್ಯರ್ಥವಾಗಬೇಕು. ಬಾಂಗ್ಲಾದೇಶದ ರಾಜಕೀಯ ಭವಿಷ್ಯವನ್ನು ಅಲ್ಲಿನ ಪ್ರಜೆಗಳು ಮುಕ್ತ ಹಾಗೂ ಸರ್ವಸಮ್ಮತ ಪ್ರಜಾಸತ್ತಾತ್ಮಕ ಚುನಾವಣೆಯ ಮೂಲಕವೇ ನಿರ್ಧರಿಸಬೇಕು” ಎಂದು ಹಸೀನಾ ಪ್ರತಿಪಾದಿಸಿದ್ದಾರೆ.
“ಸ್ವತಂತ್ರ ನ್ಯಾಯಾಲಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಅಲ್ಪಸಂಖ್ಯಾತರ ರಕ್ಷಣೆ ಹಾಗೂ ಕಾನೂನಿನ ಪಾಲನೆಗೆ ಒತ್ತು ನೀಡಬೇಕು. ಪ್ರಜಾಸತ್ತಾತ್ಮಕ ಪ್ರಕ್ರಿಯೆಯಿಂದ ಪ್ರಮುಖ ರಾಜಕೀಯ ಪಕ್ಷಗಳನ್ನು ಹೊರಗಿಡುವುದು ದೇಶದಲ್ಲಿ ಮತ್ತಷ್ಟು ವಿಭಜನೆ ಮತ್ತು ದ್ವೇಷಕ್ಕೆ ಕಾರಣವಾಗಲಿದ್ದು, ದೇಶದ ಭವಿಷ್ಯವು ವೈಷಮ್ಯದ ಮೇಲಲ್ಲ, ಬದಲಿಗೆ ಸಾಮರಸ್ಯದ ಮೇಲೆ ನಿರ್ಮಾಣವಾಗಬೇಕಿದೆ” ಎಂದು ಹಸೀನಾ ಹೇಳಿದ್ದಾರೆ.




