ಭಾರತದಲ್ಲಿ ಕಥೆಗಳನ್ನು ಹೇಳುವ, ಕಟ್ಟುವ ಮತ್ತು ವಿಸ್ತರಿಸುವ ಪರಂಪರೆ ಅತ್ಯಂತ ಶ್ರೀಮಂತವಾಗಿದ್ದು, ಜಗತ್ತಿನ ಬೇರೆ ಯಾವುದೇ ದೇಶದಲ್ಲಿ ಇಂತಹ ವೈವಿಧ್ಯಮಯ ಜನಪದ ಕಥಾ ಪರಂಪರೆ ಕಾಣಸಿಗುವುದಿಲ್ಲ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಹೇಳಿದರು.
ಜಯಲಕ್ಷ್ಮೀಪುರಂನ ಮಹಾಜನ ವಿದ್ಯಾಸಂಸ್ಥೆಯ ವಿವೇಕಾನಂದ ಸಭಾಂಗಣದಲ್ಲಿ ಸೆಪ್ಟೆಂಬರ್ 10 ಮತ್ತು 11ರಂದು ಆಯೋಜಿಸಿರುವ ಎರಡು ದಿನಗಳ ‘ಕನ್ನಡ ವಿವೇಕ ಪರಂಪರೆ ಮತ್ತು ಕುವೆಂಪು’ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು.
ಅಮೆರಿಕ, ಫ್ರಾನ್ಸ್, ರಷ್ಯಾ, ಕೆನಡಾ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಾಹಿತ್ಯ, ಕಾವ್ಯ, ಗ್ರಂಥಗಳು ಹಾಗೂ ಅಲ್ಲಿನ ಸಾಂಸ್ಕೃತಿಕ ಪರಂಪರೆಯನ್ನು ಗಮನಿಸಿದ್ದೇನೆ. ಆದರೆ ಭಾರತದಲ್ಲಿರುವ ಜನರ ಕಥೆಗಳು, ಜನಪದ ಸಾಹಿತ್ಯ ಮತ್ತು ಕಥೆ ಹೇಳುವ ಪರಂಪರೆಗೆ ಜಗತ್ತಿನ ಬೇರೆ ಯಾವುದೇ ಭಾಷೆಯಲ್ಲೂ ಸಮಾನವಾದ ಶ್ರೀಮಂತಿಕೆ ಕಂಡುಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಭಾರತದ ಜನಪದ ಸಾಹಿತ್ಯದಲ್ಲಿ ಅಸಂಖ್ಯಾತ ಕಥೆಗಳು ಅಡಗಿವೆ. ರಾಮಾಯಣ ಮತ್ತು ಮಹಾಭಾರತಗಳೂ ಸಹ ಮೂಲತಃ ಜನಪದ ಕಥಾ ಪರಂಪರೆಯಿಂದ ಬೆಳೆದು, ವಿಸ್ತಾರಗೊಂಡು ಮಹಾಕಾವ್ಯಗಳಾಗಿ ರೂಪುಗೊಂಡ ಕಥೆಗಳೆಂದು ಅವರು ವಿಶ್ಲೇಷಿಸಿದರು. ಕೆಲವೇ ವಾಕ್ಯಗಳಲ್ಲಿ ಮುಗಿಯುವ ಕಥೆಗಳಿಂದ ಹಿಡಿದು ತಲೆಮಾರುಗಳಿಂದ ತಲೆಮಾರುಗಳಿಗೆ ವಿಸ್ತರಿಸಿಕೊಂಡು ಬಂದಿರುವ ಬೃಹತ್ ಕಥೆಗಳವರೆಗೆ ಭಾರತೀಯ ಕಥಾ ಪರಂಪರೆ ವಿಶಿಷ್ಟವಾಗಿದೆ ಎಂದರು.
ಭಾರತದಲ್ಲಿ ಕಥೆಗಳಿಲ್ಲದೆ ಮಕ್ಕಳು ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಕಥೆಗಳು ಮಕ್ಕಳ ಕಲ್ಪನೆ, ಸಂತೋಷ ಮತ್ತು ಬದುಕಿನ ಅರಿವನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ. ಆದ್ದರಿಂದ ನಮ್ಮಲ್ಲಿರುವ ಅದ್ಭುತ ಕಥಾ ಸಂಪತ್ತನ್ನು ಮಕ್ಕಳಿಗೆ ತಲುಪಿಸುವ ಕೆಲಸವಾಗಬೇಕು. ಮಕ್ಕಳಿಗೆ ಕಥೆಗಳನ್ನು ಹೇಳಿ, ಆ ಸಂತೋಷವನ್ನು ಅವರೊಂದಿಗೆ ಹಂಚಿಕೊಳ್ಳಬೇಕು ಎಂದು ಡಾ. ಕಂಬಾರ ಕರೆ ನೀಡಿದರು.
ತಮ್ಮ 80ನೇ ವಯಸ್ಸಿನಲ್ಲಿಯೂ ಬರವಣಿಗೆಯನ್ನು ಮುಂದುವರಿಸುತ್ತಿದ್ದು, ಇತ್ತೀಚೆಗಷ್ಟೇ ಕೆಲವು ಲೇಖನಗಳನ್ನು ಬರೆದಿರುವುದಾಗಿ ತಿಳಿಸಿದ ಅವರು, ಮಹಾಜನ ವಿದ್ಯಾಸಂಸ್ಥೆ ಆಯೋಜಿಸಿರುವ ವಿಚಾರ ಸಂಕಿರಣದ ಆಹ್ವಾನ ಪತ್ರಿಕೆಯನ್ನು ಗಮನಿಸಿದ್ದು, ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೇರಿದಂತೆ ಅಪಾರ ಸಂಖ್ಯೆಯ ಜನರು ಭಾಗವಹಿಸುತ್ತಿರುವುದು ಸಂತಸದ ಸಂಗತಿ ಎಂದರು. ಇಂತಹ ಕಾರ್ಯಕ್ರಮಗಳು ಅಪರೂಪವಾಗಿದ್ದು, ಕನ್ನಡ ಸಾಹಿತ್ಯ ಮತ್ತು ಚಿಂತನೆಯ ಬೆಳವಣಿಗೆಗೆ ಮಹತ್ವದ್ದಾಗಿವೆ ಎಂದು ಹೇಳಿದರು.
‘ಕನ್ನಡ ವಿವೇಕ ಪರಂಪರೆ ಮತ್ತು ಕುವೆಂಪು’ ವಿಷಯದ ಕುರಿತು ನಡೆಯುತ್ತಿರುವ ಎರಡು ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣವು ಸೆಪ್ಟೆಂಬರ್ 10 ಮತ್ತು 11ರಂದು ಜಯಲಕ್ಷ್ಮೀಪುರಂನ ಮಹಾಜನ ವಿದ್ಯಾಸಂಸ್ಥೆಯ ವಿವೇಕಾನಂದ ಸಭಾಂಗಣದಲ್ಲಿ ನಡೆಯುತ್ತಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಮಾತೃಭಾಷೆಯೇ ಜ್ಞಾನಭಾಷೆ: ಶಿಕ್ಷಣ ಯಾರ ಹಕ್ಕು?
ಕಾರ್ಯಕ್ರಮದಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಮಹಾಜನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಟಿ. ವಿಜಯಲಕ್ಷ್ಮೀ ಮುರಳೀಧರ್, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಆರ್. ಜಯಕುಮಾರಿ, ಕಾರ್ಯನಿರ್ವಹಣಾಧಿಕಾರಿ ಡಾ. ಎಸ್.ಆರ್. ರಮೇಶ್, ದೇಸೀ ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್.ಆರ್. ತಿಮ್ಮೇಗೌಡ, ನ. ರವಿಕುಮಾರ್ ಸೇರಿದಂತೆ ಹಲವರು ಇದ್ದರು.





