ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರು ಗುರುವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಅಗಲಿಕೆಯಿಂದ ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಅಧ್ಯಕ್ಷ ಕೆ. ಮರೀಗೌಡ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡ ನಾಡು, ನುಡಿ, ಸಾಹಿತ್ಯ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಮಡ್ಡೀಕೆರೆ ಗೋಪಾಲ್ ಅವರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ಸ್ಮರಿಸಿದ್ದಾರೆ. ಕನ್ನಡ ಸೇವೆಯನ್ನು ಕೇವಲ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ಸಾಹಿತ್ಯಾಸಕ್ತರು, ಯುವ ಬರಹಗಾರರು ಹಾಗೂ ಕನ್ನಡಪರ ಮನಸ್ಸುಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಅವರು ನಿರಂತರವಾಗಿ ಶ್ರಮಿಸಿದ್ದರು ಎಂದು ತಿಳಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಗೋಪಾಲ್ ಅವರು ಮೈಸೂರಿನಲ್ಲಿ ಹಲವು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದರು. ಕನ್ನಡ ಸಾಹಿತ್ಯದ ಮೇಲಿನ ಅವರ ಅಪಾರ ಪ್ರೀತಿ, ಸರಳ ನಡೆ-ನುಡಿ ಹಾಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಗುಣ ಅವರನ್ನು ಸಾಹಿತ್ಯ ವಲಯದಲ್ಲಿ ವಿಶಿಷ್ಟವಾಗಿ ಗುರುತಿಸುವಂತೆ ಮಾಡಿತ್ತು ಎಂದು ಹೇಳಿದ್ದಾರೆ.
“ಮಡ್ಡೀಕೆರೆ ಗೋಪಾಲ್ ಅವರ ಅಗಲಿಕೆ ವೈಯಕ್ತಿಕವಾಗಿ ನನಗೆ ನೋವು ತಂದಿದೆ. ಕನ್ನಡದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದ ಅಪರೂಪದ ವ್ಯಕ್ತಿಯನ್ನು ನಾವು ಕಳೆದುಕೊಂಡಿದ್ದೇವೆ. ಅವರ ಕನ್ನಡಪರ ಕಾಳಜಿ, ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಸಮಾಜಮುಖಿ ಚಿಂತನೆ ಸದಾ ಸ್ಮರಣೀಯ,” ಎಂದು ತಿಳಿಸಿದ್ದಾರೆ.
ಈ ವಿಶೇಷ ಸುದ್ದಿ ಓದಿದ್ದೀರಾ? ‘ಓದಿನಲ್ಲಿ ಜೀವ, ಓದಿನಲ್ಲೇ ಜೀವನ’
ಗೋಪಾಲ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಪರಿಷತ್‌ನ ಚಟುವಟಿಕೆಗಳಿಗೆ ಮಾತ್ರವಲ್ಲದೆ, ಮೈಸೂರಿನ ಕನ್ನಡಪರ ಹಾಗೂ ಸಾಂಸ್ಕೃತಿಕ ವಲಯಕ್ಕೂ ದೊಡ್ಡ ಶೂನ್ಯ ನಿರ್ಮಾಣವಾಗಿದೆ. ಅವರ ಆದರ್ಶ ಹಾಗೂ ಕನ್ನಡ ಸೇವೆಯ ಹೆಜ್ಜೆಗುರುತುಗಳು ಮುಂದಿನ ಪೀಳಿಗೆಗೆ ಮಾದರಿಯಾಗಿವೆ ಎಂದು ಹೇಳಿದ್ದಾರೆ.





