‘ಓದಿನಲ್ಲಿ ಜೀವ, ಓದಿನಲ್ಲೇ ಜೀವನ’

Date:

ಆಧುನಿಕತೆಯ ವೇಗದಲ್ಲಿ ಪುಸ್ತಕದಿಂದ ದೂರವಾಗುತ್ತಿರುವ ಪೀಳಿಗೆಗೆ ಓದಿನ ಮಹತ್ವವನ್ನು ಮತ್ತೆ ಮನವರಿಕೆ ಮಾಡಬೇಕಾದ ಕಾಲವಿದು. ಓದು ಕೇವಲ ಅಕ್ಷರಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲ. ಅದು ಮನುಷ್ಯನೊಳಗಿನ ಚಿಂತನೆಗೆ ರೂಪ ನೀಡುವ, ಅರಿವನ್ನು ವಿಸ್ತರಿಸುವ, ಅನುಭವವನ್ನು ಗಟ್ಟಿಗೊಳಿಸುವ ಮತ್ತು ಬದುಕನ್ನು ಅರ್ಥಮಾಡಿಕೊಳ್ಳುವ ಅತ್ಯಂತ ಪರಿಣಾಮಕಾರಿ ಸಾಧನ.

- Advertisement -

‘ಓದಿನಲ್ಲಿ ಜೀವವಿದೆ, ಓದಿನಲ್ಲಿ ಜೀವನವಿದೆ’. ಪುಸ್ತಕದ ಒಂದೊಂದು ಪುಟವೂ ಮನುಷ್ಯನ ಮನಸ್ಸಿಗೆ ಹೊಸ ಕಿಟಕಿಯನ್ನು ತೆರೆದಿಡುತ್ತದೆ. ನಮಗೆ ಗೊತ್ತಿರದ ಜಗತ್ತನ್ನು ಪರಿಚಯಿಸುತ್ತದೆ, ಪ್ರಶ್ನಿಸುವ ಗುಣ ಬೆಳೆಸುತ್ತದೆ, ಸತ್ಯ-ಸುಳ್ಳು, ಒಳಿತು-ಕೆಡುಕುಗಳನ್ನು ವಿವೇಚಿಸುವ ಸಾಮರ್ಥ್ಯವನ್ನು ನೀಡುತ್ತದೆ. ಆದರೆ, ಆಧುನಿಕ ಜೀವನಶೈಲಿಯ ವೇಗದಲ್ಲಿ ಓದುವ ಅಭ್ಯಾಸ ನಿಧಾನವಾಗಿ ಹಿಂದೆ ಸರಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ವಿಶೇಷವಾಗಿ ಮಕ್ಕಳು ಮತ್ತು ಯುವಜನತೆಯ ಬದುಕಿನಲ್ಲಿ ಮೊಬೈಲ್, ಸಾಮಾಜಿಕ ಜಾಲತಾಣ, ರೀಲ್ಸ್, ಆನ್‌ಲೈನ್ ಗೇಮ್ಸ್ ಹಾಗೂ ನಿರಂತರ ಮನರಂಜನೆ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಮಾಹಿತಿ ಸಿಗುವ ವೇಗ ಹೆಚ್ಚಾದರೂ, ಆ ಮಾಹಿತಿಯನ್ನು ಅರ್ಥಮಾಡಿಕೊಳ್ಳುವ ಆಳ ಕಡಿಮೆಯಾಗುತ್ತಿರುವುದು ಇಂದಿನ ದೊಡ್ಡ ಸವಾಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಮೊಬೈಲ್ ಜಗತ್ತು ಕೈಯಲ್ಲಿದೆ; ಆದರೆ, ಪುಸ್ತಕ ಎಲ್ಲಿದೆ?

Advertisements

‘ಮೊಬೈಲ್ ಇದ್ದರೆ ಇಡೀ ಜಗತ್ತೇ ಕೈಯಲ್ಲಿದೆ’ ಎನ್ನುವುದು ಇಂದಿನ ವಾಸ್ತವ. ಒಂದು ಸಣ್ಣ ಸಾಧನದ ಮೂಲಕ ಜಗತ್ತಿನ ಯಾವುದೇ ಮೂಲೆಯ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು. ಆನ್‌ಲೈನ್ ಶಿಕ್ಷಣ, ಡಿಜಿಟಲ್ ಗ್ರಂಥಾಲಯ, ಸಂಶೋಧನಾ ಮಾಹಿತಿ, ಸುದ್ದಿಗಳು, ಭಾಷಾ ಕಲಿಕೆ, ಹೊಸ ಕೌಶಲ್ಯಗಳ ಅಭ್ಯಾಸ-ಇವೆಲ್ಲಕ್ಕೂ ಮೊಬೈಲ್ ಅತ್ಯಂತ ಉಪಯುಕ್ತ ಸಾಧನವಾಗಬಲ್ಲದು. ಆದರೆ, ಸಾಧನದ ಉಪಯೋಗ ಮತ್ತು ಅದರ ಮೇಲಿನ ಅವಲಂಬನೆ ಎರಡೂ ಒಂದೇ ಅಲ್ಲ. ಮೊಬೈಲ್ ನಮ್ಮ ಕೈಯಲ್ಲಿರಬೇಕೇ ಹೊರತು, ನಮ್ಮ ಜೀವನವೇ ಮೊಬೈಲ್‌ನ ಕೈಯಲ್ಲಿ ಸಿಲುಕಬಾರದು.

ಅಗತ್ಯವಿರುವ ಮಾಹಿತಿಯನ್ನು ಹುಡುಕುವುದರಿಂದ ಆರಂಭವಾಗುವ ಮೊಬೈಲ್ ಬಳಕೆ ಕೆಲವೇ ನಿಮಿಷಗಳಲ್ಲಿ ರೀಲ್ಸ್, ಗೇಮ್ಸ್, ಚಾಟ್, ಮನರಂಜನೆ ಮತ್ತು ನಿರಂತರ ಸ್ಕ್ರೋಲಿಂಗ್‌ಗೆ ತಿರುಗುತ್ತದೆ. ಒಂದು ವೀಡಿಯೊ ಮುಗಿದ ತಕ್ಷಣ ಮತ್ತೊಂದು, ಮತ್ತೊಂದು ಮುಗಿದ ತಕ್ಷಣ ಇನ್ನೊಂದು ಎಂಬ ಅಂತ್ಯವಿಲ್ಲದ ಚಕ್ರದಲ್ಲಿ ಸಮಯ ಕಳೆದುಹೋಗುತ್ತದೆ. ನಮಗೆ ಸಮಯ ಕಳೆಯುತ್ತಿದ್ದೇವೆ ಎಂಬ ಅರಿವೇ ಇಲ್ಲದಂತೆ ಗಂಟೆಗಳು ಉರುಳುತ್ತವೆ. ಇದು ಕೇವಲ ಸಮಯದ ನಷ್ಟವಲ್ಲ. ಗಮನ ಕೇಂದ್ರೀಕರಿಸುವ ಸಾಮರ್ಥ್ಯ, ತಾಳ್ಮೆಯಿಂದ ಓದುವ ಗುಣ, ಆಳವಾಗಿ ಯೋಚಿಸುವ ಅಭ್ಯಾಸ ಮತ್ತು ಒಂದೇ ವಿಷಯದ ಮೇಲೆ ದೀರ್ಘಕಾಲ ಮನಸ್ಸು ಕೇಂದ್ರೀಕರಿಸುವ ಸಾಮರ್ಥ್ಯಕ್ಕೂ ಇದು ಸವಾಲಾಗಬಹುದು.

ಓದುವಾಗಲೂ ಮೊಬೈಲ್, ಊಟ ಮಾಡುವಾಗಲೂ ಮೊಬೈಲ್

ಇಂದಿನ ಬದುಕಿನಲ್ಲಿ ಮೊಬೈಲ್ ಕೇವಲ ಸಂವಹನದ ಸಾಧನವಲ್ಲ; ಅದು ಅನೇಕ ಸಂದರ್ಭಗಳಲ್ಲಿ ಜೀವನದ ಅವಿಭಾಜ್ಯ ಸಂಗಾತಿಯಾಗಿದೆ. ಓದುವಾಗ ಮೊಬೈಲ್ ಬೇಕು. ಊಟ ಮಾಡುವಾಗ ಮೊಬೈಲ್ ಬೇಕು. ಮಲಗುವ ಮುನ್ನ ಮೊಬೈಲ್ ಬೇಕು. ಬೆಳಗ್ಗೆ ಎದ್ದ ತಕ್ಷಣವೂ ಮೊಬೈಲ್ ಬೇಕು. ಊಟದ ತಟ್ಟೆಯಲ್ಲಿರುವ ಅನ್ನದ ರುಚಿಯನ್ನು ಸವಿಯುವುದಕ್ಕಿಂತ ಪರದೆಯಲ್ಲಿನ ದೃಶ್ಯ ಮುಖ್ಯವಾಗುವ ಸ್ಥಿತಿ ನಿರ್ಮಾಣವಾಗಿದೆ. ಕುಟುಂಬದವರು ಒಟ್ಟಿಗೆ ಕುಳಿತರೂ ಅವರ ಮನಸ್ಸು ಒಂದೇ ಸ್ಥಳದಲ್ಲಿರುವುದಿಲ್ಲ. ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ ಒಂದೊಂದು ಪರದೆಯೊಳಗೆ ಒಂದೊಂದು ಪ್ರಪಂಚದಲ್ಲಿ ಬದುಕುವ ಪರಿಸ್ಥಿತಿ ಕಾಣಿಸುತ್ತಿದೆ.

ಇದು ಕುಟುಂಬ ಸಂಬಂಧಗಳ ಮೇಲೂ ಪರಿಣಾಮ ಬೀರುತ್ತಿದೆ. ಹಿಂದೆ ಮನೆಯಲ್ಲಿನ ಊಟದ ಸಮಯ ಸಂಭಾಷಣೆಯ ಸಮಯವಾಗಿತ್ತು. ಹಿರಿಯರ ಅನುಭವ ಕೇಳಲಾಗುತ್ತಿತ್ತು. ಮಕ್ಕಳ ದಿನಚರಿ ತಿಳಿಯುತ್ತಿತ್ತು. ಸಮಸ್ಯೆಗಳನ್ನು ಹಂಚಿಕೊಳ್ಳಲಾಗುತ್ತಿತ್ತು. ಈಗ ಆ ಜಾಗವನ್ನು ಮೊಬೈಲ್ ಪರದೆ ಆಕ್ರಮಿಸುತ್ತಿರುವುದು ಸಂಬಂಧಗಳ ಗುಣಮಟ್ಟದ ಬಗ್ಗೆ ಪ್ರಶ್ನೆ ಹುಟ್ಟಿಸುತ್ತದೆ. ವಿಡಿಯೋ ಕಾಲ್ ಮೂಲಕ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ವ್ಯಕ್ತಿಯನ್ನು ಕ್ಷಣಾರ್ಧದಲ್ಲಿ ನೋಡಬಹುದು. ಆದರೆ, ಪಕ್ಕದಲ್ಲೇ ಕುಳಿತಿರುವ ವ್ಯಕ್ತಿಯೊಂದಿಗೆ ಮಾತನಾಡಲು ಸಮಯವಿಲ್ಲದ ಪರಿಸ್ಥಿತಿ ನಿರ್ಮಾಣವಾದರೆ ಆಧುನಿಕತೆಯ ಅರ್ಥವನ್ನೇ ಮರುಪರಿಶೀಲಿಸಬೇಕಾಗುತ್ತದೆ.

ಸಂಪರ್ಕ ಹೆಚ್ಚಾದರೂ ಸಂಬಂಧ ಏಕೆ ಕಡಿಮೆಯಾಗುತ್ತಿದೆ?

ತಂತ್ರಜ್ಞಾನ ಮನುಷ್ಯರನ್ನು ಸಂಪರ್ಕಿಸುವ ಸಾಮರ್ಥ್ಯವನ್ನು ಅಪಾರವಾಗಿ ಹೆಚ್ಚಿಸಿದೆ. ಆದರೆ, ಸಂಪರ್ಕ ಮತ್ತು ಸಂಬಂಧ ಒಂದೇ ಅಲ್ಲ. ಸಂದೇಶ ಕಳುಹಿಸುವುದು, ಫೋನ್ ಮಾಡುವುದು, ವಿಡಿಯೋ ಕಾಲ್ ಮಾಡುವುದು ಸುಲಭವಾಗಿದೆ. ಆದರೆ, ಒಬ್ಬರೊಂದಿಗೆ ಒಬ್ಬರು ಕುಳಿತು ಮಾತನಾಡುವುದು, ಅವರ ಮಾತನ್ನು ತಾಳ್ಮೆಯಿಂದ ಕೇಳುವುದು, ಅವರ ನೋವನ್ನು ಅರ್ಥಮಾಡಿಕೊಳ್ಳುವುದು ಮತ್ತು ಸಂತೋಷವನ್ನು ಹಂಚಿಕೊಳ್ಳುವುದು ಬೇರೆ ರೀತಿಯ ಮಾನವೀಯ ಅನುಭವ.

ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಸ್ನೇಹಿತರಿದ್ದರೂ ನಿಜವಾದ ಸಂಕಷ್ಟದ ಸಂದರ್ಭದಲ್ಲಿ ಪಕ್ಕದಲ್ಲಿ ನಿಲ್ಲುವವರ ಸಂಖ್ಯೆ ಕಡಿಮೆಯಾಗಬಹುದು. ಸಾವಿರಾರು ‘ಫಾಲೋವರ್ಸ್’ ಇದ್ದರೂ ಮನಸ್ಸಿನ ಮಾತು ಹೇಳಿಕೊಳ್ಳಲು ಒಬ್ಬ ಆತ್ಮೀಯ ವ್ಯಕ್ತಿಯನ್ನು ಹುಡುಕಬೇಕಾಗಬಹುದು. ಆದ್ದರಿಂದ, ತಂತ್ರಜ್ಞಾನವನ್ನು ತಿರಸ್ಕರಿಸುವುದಲ್ಲ, ಅದರೊಂದಿಗೆ ಮಾನವೀಯ ಸಂಬಂಧಗಳ ಸಮತೋಲನವನ್ನು ಕಾಪಾಡುವುದು ಮುಖ್ಯ. ಕುಟುಂಬದೊಂದಿಗೆ ಕುಳಿತು ಮಾತನಾಡುವುದು, ಮಕ್ಕಳೊಂದಿಗೆ ಆಟವಾಡುವುದು, ಹಿರಿಯರ ಅನುಭವ ಕೇಳುವುದು, ಸ್ನೇಹಿತರೊಂದಿಗೆ ನೇರವಾಗಿ ಕಾಲ ಕಳೆಯುವುದು-ಇವುಗಳಿಗೆ ಯಾವುದೇ ಡಿಜಿಟಲ್ ಪರ್ಯಾಯವಿಲ್ಲ.

ಮಕ್ಕಳ ಆಟದ ಮೈದಾನ ಎಲ್ಲಿದೆ?

ಒಂದು ಕಾಲದಲ್ಲಿ ಶಾಲೆ ಮುಗಿದ ತಕ್ಷಣ ಮಕ್ಕಳು ಮೈದಾನಕ್ಕೆ ಓಡುತ್ತಿದ್ದರು. ಆಟ, ಓಟ, ಸೈಕಲ್, ಸ್ನೇಹಿತರ ಜೊತೆಗಿನ ಮಾತುಕತೆ, ಮರ ಹತ್ತುವುದು, ಪ್ರಕೃತಿಯೊಂದಿಗೆ ಬೆರೆಯುವುದು-ಇವೆಲ್ಲ ಬಾಲ್ಯದ ಸಹಜ ಭಾಗವಾಗಿದ್ದವು. ಇಂದು ಆ ಜಾಗವನ್ನು ಪರದೆಗಳು ಆಕ್ರಮಿಸುತ್ತಿವೆ. ದೈಹಿಕ ಆಟದ ಬದಲು ಆನ್‌ಲೈನ್ ಗೇಮ್ಸ್, ಸ್ನೇಹಿತರ ನೇರ ಮಾತುಕತೆಯ ಬದಲು ಚಾಟ್, ಪ್ರಕೃತಿ ವೀಕ್ಷಣೆಯ ಬದಲು ವೀಡಿಯೊಗಳು ಎಂಬ ಬದಲಾವಣೆ ಕಾಣುತ್ತಿದೆ. ಆಟ ಕೇವಲ ಮನರಂಜನೆಯಲ್ಲ. ಅದು ಶಿಸ್ತು, ತಂಡದ ಮನೋಭಾವ, ಸೋಲನ್ನು ಸ್ವೀಕರಿಸುವ ಗುಣ, ಗೆಲುವನ್ನು ಸಮಚಿತ್ತದಿಂದ ನೋಡುವ ಗುಣ, ದೈಹಿಕ ಸಾಮರ್ಥ್ಯ ಮತ್ತು ಸಾಮಾಜಿಕ ಹೊಂದಾಣಿಕೆಯನ್ನು ಬೆಳೆಸುತ್ತದೆ. ಹೀಗಾಗಿ, ಮಕ್ಕಳ ಬೆಳವಣಿಗೆಯಲ್ಲಿ ಪುಸ್ತಕದಷ್ಟೇ ಆಟಕ್ಕೂ ಮಹತ್ವವಿದೆ.

ಶಾಲಾ ಪಠ್ಯಪುಸ್ತಕದಾಚೆಗಿನ ಓದು ಅಗತ್ಯ

ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆ, ಅಂಕ, ಸ್ಪರ್ಧೆಗಳಿಗೆ ಹೆಚ್ಚಿನ ಮಹತ್ವ ಸಿಕ್ಕಿದೆ. ಆದರೆ ಶಿಕ್ಷಣದ ಗುರಿ ಕೇವಲ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವುದಲ್ಲ. ಬದುಕನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಬೆಳೆಸುವುದೂ ಶಿಕ್ಷಣದ ಉದ್ದೇಶ. ಮಗು ಪಠ್ಯಪುಸ್ತಕವನ್ನು ಓದಬೇಕು. ಆದರೆ, ಅದರಾಚೆಗೂ ಓದಬೇಕು. ಇತಿಹಾಸ ಓದಬೇಕು. ವಿಜ್ಞಾನ ಓದಬೇಕು. ಸಾಹಿತ್ಯ ಓದಬೇಕು. ಜೀವನಚರಿತ್ರೆ ಓದಬೇಕು. ಸಮಾಜ, ಪರಿಸರ, ಸಂವಿಧಾನ, ದೇಶದ ಬೆಳವಣಿಗೆ, ಕೃಷಿ, ತಂತ್ರಜ್ಞಾನ, ಕಲೆ, ಸಂಸ್ಕೃತಿ, ಕ್ರೀಡೆ-ಹೀಗೆ ವಿವಿಧ ಕ್ಷೇತ್ರಗಳ ಬಗ್ಗೆ ತಿಳಿದುಕೊಳ್ಳಬೇಕು. ಓದಿನ ವ್ಯಾಪ್ತಿ ಹೆಚ್ಚಾದಂತೆ ಚಿಂತನೆಯ ವ್ಯಾಪ್ತಿಯೂ ಹೆಚ್ಚುತ್ತದೆ. ತನ್ನ ಸುತ್ತಲಿನ ಜಗತ್ತನ್ನು ಒಂದೇ ದೃಷ್ಟಿಕೋನದಿಂದ ನೋಡುವ ಬದಲು ವಿವಿಧ ಆಯಾಮಗಳಿಂದ ನೋಡುವ ಸಾಮರ್ಥ್ಯ ಬೆಳೆಯುತ್ತದೆ.

ಗ್ರಂಥಾಲಯಗಳು ಬಣಗುತ್ತಿರುವುದು ಸಮಾಜದ ಎಚ್ಚರಿಕೆಯ ಗಂಟೆ

ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಗ್ರಂಥಾಲಯಗಳು ಜ್ಞಾನಕೇಂದ್ರಗಳಾಗಿದ್ದವು. ಪತ್ರಿಕೆ ಓದಲು, ಪುಸ್ತಕ ಪಡೆಯಲು, ಪರೀಕ್ಷೆಗೆ ಸಿದ್ಧರಾಗಲು, ಹೊಸ ವಿಚಾರ ತಿಳಿದುಕೊಳ್ಳಲು ಜನರು ಗ್ರಂಥಾಲಯಕ್ಕೆ ತೆರಳುತ್ತಿದ್ದರು. ಇಂದು ಅನೇಕ ಕಡೆಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ಚಿಂತೆಯ ಸಂಗತಿ. ಪುಸ್ತಕಗಳು ಕಪಾಟಿನಲ್ಲಿವೆ; ಆದರೆ, ಓದುಗರು ಎಲ್ಲಿದ್ದಾರೆ ಎಂಬ ಪ್ರಶ್ನೆ ಎದುರಾಗುತ್ತಿದೆ.

ಹೊಸ ಪುಸ್ತಕ ಪ್ರಕಟವಾದಾಗ ಅದನ್ನು ಖರೀದಿಸಿ ಓದುವ ಅಭ್ಯಾಸವೂ ಕುಗ್ಗುತ್ತಿದೆ. ಮತ್ತೊಂದೆಡೆ, ಮೊಬೈಲ್ ಡೇಟಾ ಮುಗಿಯುವ ಮುನ್ನವೇ ಹೊಸ ಡೇಟಾ ಪ್ಯಾಕ್ ಮಾಡಿಸಿಕೊಳ್ಳುವ ಆಸಕ್ತಿ ಮಾತ್ರ ಹೆಚ್ಚುತ್ತಿದೆ. ಇದರಲ್ಲಿ ತಂತ್ರಜ್ಞಾನ ತಪ್ಪಲ್ಲ; ನಮ್ಮ ಆದ್ಯತೆಗಳ ಬದಲಾವಣೆಯೇ ಮುಖ್ಯ ಪ್ರಶ್ನೆ. ಮೊಬೈಲ್ ಡೇಟಾಗೆ ಹಣ ಖರ್ಚು ಮಾಡುವಂತೆ ತಿಂಗಳಿಗೆ ಕನಿಷ್ಠ ಒಂದು ಪುಸ್ತಕ ಖರೀದಿಸುವ ಸಂಸ್ಕೃತಿಯೂ ಬೆಳೆಬೇಕು. ಪುಸ್ತಕವನ್ನು ಓದಿ ಮುಗಿಸಿದ ನಂತರ ಅದನ್ನು ಮತ್ತೊಬ್ಬರಿಗೆ ಓದಲು ನೀಡುವ ಅಭ್ಯಾಸವೂ ಬೆಳೆಬೇಕು. ಮನೆಯಲ್ಲಿ ಸಣ್ಣದಾದರೂ ಪುಸ್ತಕದ ಕಪಾಟು ಇರಬೇಕು. ಮಕ್ಕಳಿಗೆ ಆಟಿಕೆಗಳ ಜೊತೆಗೆ ಪುಸ್ತಕವೂ ಉಡುಗೊರೆಯಾಗಬೇಕು.

ಪುಸ್ತಕ ಮನಸ್ಸನ್ನು ಪಕ್ವಗೊಳಿಸುತ್ತದೆ

ಪುಸ್ತಕದ ದೊಡ್ಡ ಕೊಡುಗೆ ಮಾಹಿತಿ ಮಾತ್ರವಲ್ಲ; ಅದು ಮನಸ್ಸನ್ನು ಪಕ್ವಗೊಳಿಸುತ್ತದೆ. ಒಂದು ಜೀವನಚರಿತ್ರೆ ಓದಿದಾಗ ಒಬ್ಬ ಮಹನೀಯನ ಹೋರಾಟ ನಮಗೆ ಪರಿಚಯವಾಗುತ್ತದೆ. ಇತಿಹಾಸ ಓದಿದಾಗ ದೇಶದ ಹಿಂದಿನ ತಪ್ಪು-ಪಾಠಗಳು ತಿಳಿಯುತ್ತವೆ. ಸಾಹಿತ್ಯ ಓದಿದಾಗ ಮನುಷ್ಯನ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ ಬೆಳೆಯುತ್ತದೆ. ವಿಜ್ಞಾನ ಓದಿದಾಗ ಪ್ರಶ್ನಿಸುವ ಮತ್ತು ಸಾಕ್ಷ್ಯ ಹುಡುಕುವ ಮನೋಭಾವ ಬೆಳೆದುಬರುತ್ತದೆ. ಓದುವ ವ್ಯಕ್ತಿ ಎಲ್ಲವನ್ನೂ ತಕ್ಷಣ ನಂಬುವುದಿಲ್ಲ. ಪ್ರಶ್ನಿಸುತ್ತಾನೆ. ಪರಿಶೀಲಿಸುತ್ತಾನೆ. ಹೋಲಿಕೆ ಮಾಡುತ್ತಾನೆ. ವಿಚಾರಿಸುತ್ತಾನೆ. ಈ ವಿವೇಚನಾ ಶಕ್ತಿಯೇ ಪ್ರಜಾಪ್ರಭುತ್ವದ ಸಮಾಜಕ್ಕೆ ಅತ್ಯಗತ್ಯ.

ಇತಿಹಾಸದಿಂದ ದೂರವಾದ ಪೀಳಿಗೆ ಭವಿಷ್ಯವನ್ನು ಹೇಗೆ ಕಟ್ಟುತ್ತದೆ?

ಇತಿಹಾಸ ಎಂದರೆ ಕೇವಲ ಪರೀಕ್ಷೆಗೆ ಓದುವ ದಿನಾಂಕಗಳ ಸರಣಿ ಅಲ್ಲ. ಒಂದು ದೇಶ ಹೇಗೆ ರೂಪುಗೊಂಡಿತು, ಸ್ವಾತಂತ್ರ್ಯಕ್ಕಾಗಿ ಎಷ್ಟು ಹೋರಾಟ ನಡೆಯಿತು, ಸಮಾಜದಲ್ಲಿ ಬದಲಾವಣೆ ಹೇಗೆ ಸಂಭವಿಸಿತು, ವಿಜ್ಞಾನ-ತಂತ್ರಜ್ಞಾನ ಹೇಗೆ ಬೆಳೆದವು, ಮಹನೀಯರು ಯಾವ ತ್ಯಾಗ ಮಾಡಿದರು ಎಂಬುದನ್ನು ತಿಳಿದುಕೊಳ್ಳುವ ಮಾರ್ಗ. ಇತಿಹಾಸದಿಂದ ದೂರವಾದ ಸಮಾಜ ತನ್ನ ಬೇರುಗಳನ್ನು ಕಳೆದುಕೊಳ್ಳುವ ಅಪಾಯದಲ್ಲಿರುತ್ತದೆ. ಹಿಂದಿನ ಅನುಭವಗಳಿಂದ ಪಾಠ ಕಲಿಯದಿದ್ದರೆ ಅದೇ ತಪ್ಪುಗಳು ಮತ್ತೆ ಸಂಭವಿಸಬಹುದು. ದೇಶದ ಆಗುಹೋಗು, ಸಂವಿಧಾನ, ಸಾಮಾಜಿಕ ಬದಲಾವಣೆ, ರಾಜಕೀಯ ವ್ಯವಸ್ಥೆ, ವಿಜ್ಞಾನ, ಪರಿಸರ-ಇವುಗಳ ಬಗ್ಗೆ ಅರಿವು ಹೊಂದಿರುವ ಯುವಜನತೆ ಮಾತ್ರ ಜವಾಬ್ದಾರಿಯುತ ನಾಗರಿಕ ಸಮಾಜವನ್ನು ಕಟ್ಟಬಲ್ಲದು.

‘ನನಗೂ ಇದಕ್ಕೂ ಸಂಬಂಧವಿಲ್ಲ’ ಎನ್ನುವ ಮನೋಭಾವ ಅಪಾಯಕಾರಿ

ಸಮಾಜದಲ್ಲಿ ನಡೆಯುವ ಯಾವುದೇ ವಿಚಾರಕ್ಕೂ ‘ಅದು ನನ್ನ ಸಮಸ್ಯೆಯಲ್ಲ’ ಎಂದು ದೂರ ನಿಲ್ಲುವ ಮನೋಭಾವ ಬೆಳೆಯಬಾರದು. ನೀರು, ಪರಿಸರ, ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ, ಸಾರ್ವಜನಿಕ ವ್ಯವಸ್ಥೆ, ಪ್ರಜಾಪ್ರಭುತ್ವ-ಇವೆಲ್ಲವೂ ಪ್ರತಿಯೊಬ್ಬರ ಬದುಕಿಗೆ ಸಂಬಂಧಿಸಿದ ವಿಷಯಗಳು. ಓದು ಈ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾವು ಒಬ್ಬರೇ ಬದುಕುವುದಿಲ್ಲ. ನಮ್ಮ ಬದುಕು ಕುಟುಂಬದೊಂದಿಗೆ, ಸಮಾಜದೊಂದಿಗೆ, ಪ್ರಕೃತಿಯೊಂದಿಗೆ ಮತ್ತು ದೇಶದೊಂದಿಗೆ ಬೆಸೆದುಕೊಂಡಿದೆ ಎಂಬ ಅರಿವು ಓದಿನಿಂದ ಬರುತ್ತದೆ.

ಮೊಬೈಲ್ ಶತ್ರುವಲ್ಲ; ಬಳಕೆಯ ರೀತಿಯೇ ನಿರ್ಧಾರಕ

ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿರಾಕರಿಸುವುದು ಇಂದಿನ ಕಾಲದಲ್ಲಿ ಸಾಧ್ಯವೂ ಅಲ್ಲ, ಅಗತ್ಯವೂ ಅಲ್ಲ. ಡಿಜಿಟಲ್ ತಂತ್ರಜ್ಞಾನ ಶಿಕ್ಷಣದ ಹೊಸ ಬಾಗಿಲುಗಳನ್ನು ತೆರೆದಿದೆ. ಉತ್ತಮ ಉಪನ್ಯಾಸಗಳು, ಇ-ಪುಸ್ತಕಗಳು, ಆನ್‌ಲೈನ್ ಕೋರ್ಸ್‌ಗಳು, ಸಂಶೋಧನಾ ಮಾಹಿತಿಗಳು, ಭಾಷಾ ಕಲಿಕಾ ಸಾಧನಗಳು-ಇವೆಲ್ಲವೂ ವಿದ್ಯಾರ್ಥಿಗಳಿಗೆ ಅಪಾರ ಅವಕಾಶಗಳನ್ನು ಒದಗಿಸುತ್ತವೆ.

ಆದರೆ, ‘ಉಪಯೋಗ’ ಮತ್ತು ‘ವ್ಯಸನ’ದ ನಡುವಿನ ಗಡಿ ಸ್ಪಷ್ಟವಾಗಬೇಕು

ಅಧ್ಯಯನಕ್ಕಾಗಿ ಮೊಬೈಲ್ ಬಳಸಿದರೆ ಅದು ಜ್ಞಾನ ಸಾಧನ. ನಿರಂತರ ರೀಲ್ಸ್‌ಗಾಗಿ ಬಳಸಿದರೆ ಅದು ಸಮಯದ ದೋಚುಗಾರ. ಅಗತ್ಯ ಮಾಹಿತಿಗಾಗಿ ಬಳಸಿದರೆ ಅದು ಗ್ರಂಥಾಲಯ. ನಿಯಂತ್ರಣವಿಲ್ಲದ ಸ್ಕ್ರೋಲಿಂಗ್‌ಗೆ ಬಳಸಿದರೆ ಅದು ಗಮನವನ್ನು ಚದುರಿಸುವ ಸಾಧನ. ಹೀಗಾಗಿ, ಪ್ರಶ್ನೆ ‘ಮೊಬೈಲ್ ಬೇಕೇ ಬೇಡವೇ?’ ಎಂಬುದಲ್ಲ. ‘ಮೊಬೈಲ್ ನಮ್ಮನ್ನು ನಿಯಂತ್ರಿಸುತ್ತಿದೆಯೇ, ಅಥವಾ ನಾವು ಮೊಬೈಲ್ ಅನ್ನು ನಿಯಂತ್ರಿಸುತ್ತಿದ್ದೇವೆಯೇ?’ ಎಂಬುದು.

ಪೋಷಕರಿಗೂ ದೊಡ್ಡ ಜವಾಬ್ದಾರಿ

ಮಕ್ಕಳಿಗೆ ‘ಮೊಬೈಲ್ ನೋಡಬೇಡ’ ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ. ಮನೆಯಲ್ಲಿ ದೊಡ್ಡವರು ಯಾವ ರೀತಿಯ ಡಿಜಿಟಲ್ ಅಭ್ಯಾಸ ತೋರಿಸುತ್ತಾರೆ ಎಂಬುದೂ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲೇ ದಿನದ ನಿರ್ದಿಷ್ಟ ಸಮಯವನ್ನು ‘ಮೊಬೈಲ್ ಮುಕ್ತ ಸಮಯ’ವನ್ನಾಗಿ ಮಾಡಬಹುದು. ಊಟದ ಸಮಯದಲ್ಲಿ ಫೋನ್ ಬದಿಗಿಡಬಹುದು. ಪ್ರತಿದಿನ ಸ್ವಲ್ಪ ಸಮಯ ಕುಟುಂಬದ ಸಂಭಾಷಣೆಗೆ ಮೀಸಲಿಡಬಹುದು. ವಾರಕ್ಕೆ ಒಂದು ದಿನ ಗ್ರಂಥಾಲಯಕ್ಕೆ ಅಥವಾ ಪುಸ್ತಕ ಮಳಿಗೆಗೆ ಮಕ್ಕಳನ್ನು ಕರೆದೊಯ್ಯಬಹುದು. ಮಕ್ಕಳಿಗೆ ಪುಸ್ತಕ ಓದಲು ಹೇಳುವುದಕ್ಕಿಂತ ಪೋಷಕರು ತಾವೇ ಪುಸ್ತಕ ಓದಿದರೆ ಅದರ ಪರಿಣಾಮ ಹೆಚ್ಚು. ಮಕ್ಕಳು ಉಪದೇಶಕ್ಕಿಂತ ಮಾದರಿಯಿಂದ ಹೆಚ್ಚು ಕಲಿಯುತ್ತಾರೆ.

ದಿನಕ್ಕೆ ಅರ್ಧ ಗಂಟೆ ಓದುವುದರಿಂದ ಆರಂಭವಾಗಲಿ

ಓದುವ ಅಭ್ಯಾಸವನ್ನು ದೊಡ್ಡ ಗುರಿಯಿಂದ ಆರಂಭಿಸುವ ಅಗತ್ಯವಿಲ್ಲ. ಪ್ರತಿದಿನ 20 ಅಥವಾ 30 ನಿಮಿಷಗಳನ್ನು ಓದಿಗೆ ಮೀಸಲಿಡಬಹುದು. ಆರಂಭದಲ್ಲಿ ಇಷ್ಟವಾಗುವ ವಿಷಯದ ಪುಸ್ತಕ ಓದಬಹುದು. ಕಥೆ, ಕಾದಂಬರಿ, ಜೀವನಚರಿತ್ರೆ, ವಿಜ್ಞಾನ, ಇತಿಹಾಸ, ಪ್ರವಾಸ, ಕೃಷಿ, ಸಾಹಿತ್ಯ-ಯಾವುದೇ ವಿಷಯವಾಗಬಹುದು. ಓದಿದ ವಿಷಯವನ್ನು ನಾಲ್ಕು ಸಾಲುಗಳಲ್ಲಿ ಬರೆಯುವ ಅಭ್ಯಾಸ ಮಾಡಬಹುದು. ಓದಿದ ಪುಸ್ತಕದ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಬಹುದು. ತಿಂಗಳಿಗೆ ಒಂದು ಪುಸ್ತಕ ಓದುವ ಗುರಿ ಇಟ್ಟುಕೊಳ್ಳಬಹುದು. ಹೀಗೆ ಸಣ್ಣ ಅಭ್ಯಾಸವೇ ಮುಂದೆ ದೊಡ್ಡ ಓದು ಸಂಸ್ಕೃತಿಯಾಗಿ ರೂಪುಗೊಳ್ಳಬಹುದು.

ಓದಿನೊಂದಿಗೆ ಬರವಣಿಗೆಯೂ ಬೆಳೆಬೇಕು

ಓದುವುದು ಒಂದು ಬದಿ. ಓದಿದ್ದನ್ನು ಸ್ವಂತ ಮಾತಿನಲ್ಲಿ ವ್ಯಕ್ತಪಡಿಸುವುದು ಮತ್ತೊಂದು ಬದಿ. ಮಕ್ಕಳು ದಿನಚರಿ ಬರೆಯಲಿ. ಓದಿದ ಪುಸ್ತಕದ ಬಗ್ಗೆ ಅಭಿಪ್ರಾಯ ಬರೆಯಲಿ. ಒಂದು ಸುದ್ದಿಯನ್ನು ತಮ್ಮದೇ ಭಾಷೆಯಲ್ಲಿ ವಿವರಿಸಲಿ. ಒಂದು ಸಮಸ್ಯೆಯ ಬಗ್ಗೆ ತಮ್ಮ ಅಭಿಪ್ರಾಯ ದಾಖಲಿಸಲಿ. ಪ್ರಶ್ನೆಗಳನ್ನು ಬರೆಯಲಿ. ಓದು ಮತ್ತು ಬರವಣಿಗೆ ಪರಸ್ಪರ ಪೂರಕ. ಓದಿದಷ್ಟು ಪದಸಂಪತ್ತು ಹೆಚ್ಚುತ್ತದೆ. ಬರೆದಷ್ಟು ಆಲೋಚನೆ ಸ್ಪಷ್ಟವಾಗುತ್ತದೆ. ಮಾತನಾಡುವ ಸಾಮರ್ಥ್ಯವೂ ಬೆಳೆಯುತ್ತದೆ.

ಪುಸ್ತಕ ಖರೀದಿಸುವುದು ಜ್ಞಾನದಲ್ಲಿ ಹೂಡಿಕೆ

ಹೊಸ ಬಟ್ಟೆ, ಹೊಸ ಮೊಬೈಲ್, ಮನರಂಜನೆ, ಆಹಾರ ಇವುಗಳಿಗೆ ನಾವು ಹಣ ಖರ್ಚು ಮಾಡುತ್ತೇವೆ. ಅದೇ ರೀತಿ ಪುಸ್ತಕ ಖರೀದಿಸುವುದನ್ನೂ ಖರ್ಚು ಎಂದು ನೋಡಬಾರದು; ಅದು ಜ್ಞಾನದಲ್ಲಿ ಮಾಡುವ ಹೂಡಿಕೆ.
ಒಂದು ಪುಸ್ತಕದ ಬೆಲೆ ಕೆಲವೊಮ್ಮೆ ಒಂದು ಊಟದ ಖರ್ಚಿಗಿಂತ ಕಡಿಮೆ ಇರಬಹುದು. ಆದರೆ, ಅದರಲ್ಲಿರುವ ವಿಚಾರಗಳು ಜೀವನಪೂರ್ತಿ ನಮ್ಮೊಂದಿಗೆ ಉಳಿಯಬಹುದು. ಒಬ್ಬರು ಒಂದು ಪುಸ್ತಕ ಖರೀದಿಸಿ ಓದಿದರೆ ಅದು ಅವರ ಜ್ಞಾನ. ಅದೇ ಪುಸ್ತಕವನ್ನು ಮತ್ತೊಬ್ಬರಿಗೆ ನೀಡಿದರೆ ಇಬ್ಬರ ಜ್ಞಾನ. ಹೀಗೆ ಓದು ಹಂಚಿದಂತೆ ಜ್ಞಾನವೂ ವಿಸ್ತರಿಸುತ್ತದೆ.

ಮಕ್ಕಳು ಮತ್ತು ಯುವಜನತೆ ದೇಶದ ಭವಿಷ್ಯ

ಮಕ್ಕಳು ಮತ್ತು ಯುವಜನತೆ ದೇಶದ ಶಕ್ತಿ. ಅವರ ಕೈಯಲ್ಲಿರುವ ಸಮಯ, ಜ್ಞಾನ ಮತ್ತು ಸಾಮರ್ಥ್ಯವೇ ಮುಂದಿನ ಭಾರತದ ರೂಪವನ್ನು ನಿರ್ಧರಿಸುತ್ತದೆ. ಅವರ ಕೈಯಲ್ಲಿರುವ ಮೊಬೈಲ್ ಒಂದು ಕಡೆ ಅಪಾರ ಜ್ಞಾನಕ್ಕೆ ಬಾಗಿಲು ತೆರೆದರೆ, ಇನ್ನೊಂದು ಕಡೆ ಸಮಯ ಮತ್ತು ಗಮನವನ್ನು ಕಸಿದುಕೊಳ್ಳುವ ಸಾಧ್ಯತೆಯೂ ಇದೆ. ಆದ್ದರಿಂದ ತಂತ್ರಜ್ಞಾನವನ್ನು ತಿರಸ್ಕರಿಸದೆ, ಅದನ್ನು ವಿವೇಕದಿಂದ ಬಳಸುವ ಡಿಜಿಟಲ್ ಸಂಸ್ಕೃತಿ ಬೆಳೆಸಬೇಕಾಗಿದೆ. ಭವಿಷ್ಯದ ನಾಗರಿಕರು ಕೇವಲ ಮಾಹಿತಿಯನ್ನು ಹೊಂದಿರುವವರಾಗಿರಬಾರದು; ಅರಿವು, ವಿವೇಚನೆ, ಮಾನವೀಯತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ದೇಶದ ಬಗ್ಗೆ ಕಾಳಜಿ ಹೊಂದಿರುವವರಾಗಬೇಕು.

ದೇಶ ನಮಗೆ ಎಲ್ಲವನ್ನೂ ಕೊಟ್ಟಿದೆ; ನಾವು ದೇಶಕ್ಕೆ ಏನು ಕೊಡಬೇಕು?

ನಾವು ಬಳಸುವ ಭಾಷೆ, ಶಿಕ್ಷಣ, ರಸ್ತೆ, ನೀರು, ವಿದ್ಯುತ್, ಸಾರ್ವಜನಿಕ ಸಂಸ್ಥೆಗಳು, ಸಂವಿಧಾನ, ಸ್ವಾತಂತ್ರ್ಯ-ಇವೆಲ್ಲವೂ ಅನೇಕ ತಲೆಮಾರುಗಳ ಪರಿಶ್ರಮ ಮತ್ತು ತ್ಯಾಗದ ಫಲ. ಈ ದೇಶ ನಮಗೆ ಏನು ಕೊಟ್ಟಿದೆ ಎಂಬುದನ್ನು ಅರಿಯುವುದರ ಜೊತೆಗೆ, ನಾವು ದೇಶಕ್ಕೆ ಏನು ಕೊಡಬೇಕು ಎಂಬ ಪ್ರಶ್ನೆಯನ್ನೂ ಯುವಜನತೆ ಕೇಳಿಕೊಳ್ಳಬೇಕು. ಅದಕ್ಕೆ ‘ಮೊದಲ ಹೆಜ್ಜೆ ಜ್ಞಾನ. ಜ್ಞಾನಕ್ಕೆ ಮೊದಲ ದಾರಿ ಓದು’. ಓದಿದ ವ್ಯಕ್ತಿ ತನ್ನ ಬದುಕನ್ನು ಮಾತ್ರವಲ್ಲ, ತನ್ನ ಸುತ್ತಲಿನ ಸಮಾಜವನ್ನೂ ಅರ್ಥಮಾಡಿಕೊಳ್ಳಲು ಆರಂಭಿಸುತ್ತಾನೆ. ಸಮಾಜವನ್ನು ಅರ್ಥಮಾಡಿಕೊಂಡಾಗ ಜವಾಬ್ದಾರಿ ಮೂಡುತ್ತದೆ. ಜವಾಬ್ದಾರಿ ಮೂಡಿದಾಗ ದೇಶದ ಬಗ್ಗೆ ಕಾಳಜಿ ಬೆಳೆಯುತ್ತದೆ.

ಆಧುನಿಕತೆ ಬರಲಿ; ಓದು ಮರೆಯಾಗದಿರಲಿ

ಆಧುನಿಕತೆ ಅನಿವಾರ್ಯ. ತಂತ್ರಜ್ಞಾನವೂ ಅನಿವಾರ್ಯ. ಬದಲಾವಣೆಯನ್ನೂ ತಡೆಯಲು ಸಾಧ್ಯವಿಲ್ಲ. ಆದರೆ ಬದಲಾವಣೆಯ ಹೆಸರಿನಲ್ಲಿ ನಮ್ಮ ಮೂಲಭೂತ ಮಾನವೀಯ ಗುಣಗಳನ್ನು ಕಳೆದುಕೊಳ್ಳಬಾರದು. ಮೊಬೈಲ್ ಇರಲಿ; ಪುಸ್ತಕವೂ ಇರಲಿ. ಆನ್‌ಲೈನ್ ಶಿಕ್ಷಣ ಇರಲಿ; ಗ್ರಂಥಾಲಯವೂ ಇರಲಿ. ಡಿಜಿಟಲ್ ಜ್ಞಾನ ಇರಲಿ; ಆಳವಾದ ಓದಿನ ಅಭ್ಯಾಸವೂ ಇರಲಿ. ಸಾಮಾಜಿಕ ಜಾಲತಾಣ ಇರಲಿ; ನೈಜ ಸಾಮಾಜಿಕ ಸಂಬಂಧವೂ ಇರಲಿ. ಆಧುನಿಕತೆ ಇರಲಿ; ಮಾನವೀಯತೆಯೂ ಇರಲಿ.
ಜೀವನದ ವೇಗ ಹೆಚ್ಚಾದಷ್ಟೂ ಮನಸ್ಸಿಗೆ ನಿಲ್ಲುವ, ಯೋಚಿಸುವ, ಓದುವ ಸಮಯ ಇನ್ನಷ್ಟು ಅಗತ್ಯವಾಗುತ್ತದೆ.

ಓದಿನ ಕಡೆಗೆ ಮರಳಬೇಕಾದ ಕಾಲ

ಪುಸ್ತಕಗಳು ದೂಳು ಹಿಡಿಯದಂತೆ ನೋಡಿಕೊಳ್ಳಬೇಕಾಗಿದೆ. ಗ್ರಂಥಾಲಯಗಳು ಓದುಗರಿಲ್ಲದೆ ಬಾಗಿಲು ಮುಚ್ಚದಂತೆ ನೋಡಿಕೊಳ್ಳಬೇಕಾಗಿದೆ. ಮಕ್ಕಳ ಕೈಯಲ್ಲಿ ಮೊಬೈಲ್ ಇರುವುದರ ಜೊತೆಗೆ ಪುಸ್ತಕವೂ ಇರಬೇಕು. ಯುವಜನತೆ ಡೇಟಾ ಪ್ಯಾಕ್‌ಗೆ ಖರ್ಚು ಮಾಡುವಷ್ಟೇ ಆಸಕ್ತಿಯಿಂದ ಪುಸ್ತಕಕ್ಕೂ ಹಣ ಮೀಸಲಿಡಬೇಕು.

ಪ್ರತಿ ಮನೆಯಲ್ಲಿ ಸಣ್ಣ ಪುಸ್ತಕದ ಕಪಾಟು ಇರಲಿ. ಪ್ರತಿ ಶಾಲೆಯಲ್ಲಿ ಓದು ಸಂಸ್ಕೃತಿ ಬೆಳೆಸುವ ಕಾರ್ಯಕ್ರಮಗಳು ನಡೆಯಲಿ. ಪ್ರತಿ ಗ್ರಾಮದಲ್ಲಿ ಗ್ರಂಥಾಲಯ ಜೀವಂತವಾಗಲಿ. ಪ್ರತಿ ಯುವಕ-ಯುವತಿಯ ಜೀವನದಲ್ಲಿ ಪ್ರತಿದಿನ ಸ್ವಲ್ಪ ಸಮಯ ಓದಿಗೆ ಮೀಸಲಾಗಲಿ. ಓದಿದವರು ಮತ್ತೊಬ್ಬರನ್ನು ಓದುವಂತೆ ಪ್ರೇರೇಪಿಸಲಿ. ಒಂದು ಪುಸ್ತಕ ಮತ್ತೊಂದು ಪುಸ್ತಕದ ಕಡೆಗೆ ಕರೆದೊಯ್ಯಲಿ. ಒಂದು ವಿಚಾರ ಮತ್ತೊಂದು ಪ್ರಶ್ನೆಯನ್ನು ಹುಟ್ಟಿಸಲಿ. ಒಂದು ಪ್ರಶ್ನೆ ಹೊಸ ಆವಿಷ್ಕಾರಕ್ಕೆ ದಾರಿ ಮಾಡಿಕೊಡಲಿ.

ಏಕೆಂದರೆ ಹೊಸ ಆವಿಷ್ಕಾರಕ್ಕೂ, ಹೊಸ ಆಲೋಚನೆಗೂ, ಹೊಸ ಸಮಾಜಕ್ಕೂ ಬೀಜವಾಗುವುದು ಜ್ಞಾನ; ಜ್ಞಾನಕ್ಕೆ ದಾರಿ ತೋರಿಸುವ ಪ್ರಮುಖ ಸಾಧನ ಓದು. ಆಧುನಿಕತೆ ಬದಲಾಗಬಹುದು. ತಂತ್ರಜ್ಞಾನ ಬದಲಾಗಬಹುದು. ಮೊಬೈಲ್‌ಗಳು ಬದಲಾಗಬಹುದು. ಅಪ್ಲಿಕೇಶನ್‌ಗಳು ಬದಲಾಗಬಹುದು. ಆದರೆ, ಓದು, ಬರಹ ಮತ್ತು ಪುಸ್ತಕಗಳ ಮಹತ್ವ ಎಂದಿಗೂ ಮುಗಿಯುವುದಿಲ್ಲ.

ಓದಿನಲ್ಲಿ ಜೀವವಿದೆ. ಓದಿನಲ್ಲಿ ಜ್ಞಾನವಿದೆ. ಓದಿನಲ್ಲಿ ವಿವೇಚನೆಯಿದೆ. ಓದಿನಲ್ಲಿ ಸಮಾಜವಿದೆ. ಓದಿನಲ್ಲಿ ದೇಶದ ಭವಿಷ್ಯವಿದೆ. ಹೀಗಾಗಿ, ಇಂದಿನ ಪೀಳಿಗೆಗೆ ಅಗತ್ಯವಾದ ಪ್ರಶ್ನೆ ಒಂದೇ- ಮೊಬೈಲ್ ನಮ್ಮ ಸಮಯವನ್ನು ಎಷ್ಟು ತೆಗೆದುಕೊಂಡಿದೆ ಎಂಬುದಲ್ಲ; ನಮ್ಮ ಜೀವನದಲ್ಲಿ ಓದಿಗೆ ನಾವು ಎಷ್ಟು ಸಮಯ ಕೊಟ್ಟಿದ್ದೇವೆ ಎಂಬುದು.

ಈ ವಿಶೇಷ ಸುದ್ದಿ ಓದಿದ್ದೀರಾ? ಹಳೇ ಮೈಸೂರಿನ ‘ನೀರ್ ಸಾಬ್’: ನೀರಿನಿಂದ ಪಂಚಾಯತ್ ರಾಜ್‌ವರೆಗೆ ಜನರ ಬದುಕಿಗೆ ದಾರಿ ತೋರಿದ ಅಪರೂಪದ ನಾಯಕ

ಓದಿನ ಜೀವನವನ್ನು ಆಧುನಿಕತೆಯ ವೇಗದಲ್ಲಿ ಕಳೆದುಕೊಳ್ಳದಿರೋಣ. ಪುಸ್ತಕದ ಪುಟ ತೆರೆದು, ಹೊಸ ಜಗತ್ತಿನ ಬಾಗಿಲು ತೆರೆಯೋಣ.

WhatsApp Image 2025 02 05 at 18.09.20
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ ವಿವಿಯಲ್ಲಿ ಆಯುಧಪೂಜೆ ಕಡ್ಡಾಯ; ಸಾಹಿತಿಗಳು, ಶಿಕ್ಷಣ ತಜ್ಞರು ಖಂಡನೆ

ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರು ಎಲ್ಲ ಅಧ್ಯಯನ ವಿಭಾಗಗಳ ಶಿಕ್ಷಕ/ ಶಿಕ್ಷಕೇತರ ಸಿಬ್ಬಂದಿ...

ʼಬಾಂಬೆ ಬಾಯ್ಸ್‌ʼ ಪುಸ್ತಕ ಹೊರಬಂದರೆ ಮೂರೂ ಪಕ್ಷಗಳ ನಾಯಕರು ಬೆತ್ತಲು: ಎಚ್‌ ವಿಶ್ವನಾಥ್‌ ಹೊಸ ಬಾಂಬ್!‌

‘ಬಾಂಬೆ ಬಾಯ್ಸ್‌’ ಪುಸ್ತಕ ಪ್ರಕಟವಾದರೆ ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳ...

ಪ್ರಜಾಪ್ರಭುತ್ವದ ಗಟ್ಟಿತನವಿರುವುದು ಪ್ರಜೆಗಳಿಗೆ ಸರ್ಕಾರವನ್ನು ಪ್ರಶ್ನಿಸುವ ಸ್ವಾತಂತ್ರ್ಯ ಇರುವಲ್ಲಿ: ಸಿಎಂ ಡಿ.ಕೆ ಶಿವಕುಮಾರ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಹೊಣೆಗಾರಿಕೆಯೇ ಬುನಾದಿಯಾಗಿದೆ. ಎಲ್ಲರೂ ಸರ್ಕಾರಕ್ಕೆ ಕುರುಡಾಗಿ ತಲೆಬಾಗುವುದೇ...