ಹೆಣ್ಣು ಮಕ್ಕಳ ರಕ್ಷಣೆಗೆ ಕಠಿಣ ಕಾನೂನು ಜಾರಿಗೊಳಿಸಿ ಕಾಮುಕರಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಹೆಣ್ಣು ಮಕ್ಕಳ ಕೈಗೆ ದೇಶದ ಆಡಳಿತ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ. ನಳಿನಿಗೌಡ ಸರ್ಕಾರವನ್ನು ಎಚ್ಚರಿಸಿದರು.
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ ರೈತ ಸಂಘದ ವತಿಯಿಂದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಂದಾಯ ಅಧಿಕಾರಿ ಶಾಂತಮ್ಮ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ನಳಿನಿಗೌಡ, ಸ್ವಾತಂತ್ರ್ಯ ಬಂದು 79 ವರ್ಷಗಳು ಕಳೆದರೂ ದೇಶದಲ್ಲಿ ಹೆಣ್ಣು ಮಕ್ಕಳು ಭಯಮುಕ್ತವಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಮಹಿಳೆಯರ ಸುರಕ್ಷತೆಗೆ ಪರಿಣಾಮಕಾರಿ ಕಾನೂನು ರೂಪಿಸಿ, ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಬಸ್‌ನಲ್ಲಿ ಅತ್ಯಾಚಾರ ನಡೆದಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಪೋಕ್ಸೋ ಸೇರಿದಂತೆ ಹಲವು ಕಠಿಣ ಕಾನೂನುಗಳಿದ್ದರೂ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳು ಮುಂದುವರಿಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಆರೋಪಿಗಳಿಗೆ ತ್ವರಿತವಾಗಿ ಶಿಕ್ಷೆಯಾಗುವಂತೆ ಕಾನೂನು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಆಗ್ರಹಿಸಿದರು.
ಕೂಲಿಕಾರ್ಮಿಕ ಮಹಿಳೆ ಐತಾಂಡಹಳ್ಳಿ ಶೈಲಜ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಜಿಪಿಎಸ್, ಪ್ಯಾನಿಕ್ ಬಟನ್, ಕ್ಯಾಮೆರಾ ಹಾಗೂ ಕಣ್ಗಾವಲು ವ್ಯವಸ್ಥೆ ಕಡ್ಡಾಯಗೊಳಿಸಬೇಕು. ಬಸ್‌ಗಳ ಒಳಭಾಗದಲ್ಲಿ ಸಿಸಿಟಿವಿ ಅಳವಡಿಸಿ, ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಹೆಣ್ಣನ್ನು ಭೋಗದ ವಸ್ತುವಾಗಿ ಕಾಣುವ ಮನಸ್ಥಿತಿ ಬದಲಾಗಬೇಕು. ಹೆಣ್ಣು ಮಕ್ಕಳಿಗೆ ಸುರಕ್ಷಿತ ಮತ್ತು ಭಯಮುಕ್ತ ವಾತಾವರಣ ಕಲ್ಪಿಸದೆ ದೇಶದ ಯಾವುದೇ ಅಭಿವೃದ್ಧಿಗೂ ಅರ್ಥವಿಲ್ಲ. ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ತ್ವರಿತವಾಗಿ, ನಿಗದಿತ ಅವಧಿಯೊಳಗೆ ಶಿಕ್ಷೆಯಾಗುವ ವ್ಯವಸ್ಥೆ ಜಾರಿಯಾಗಬೇಕು. ಇಲ್ಲವಾದರೆ ಹೆಣ್ಣು ಮಕ್ಕಳೇ ಕಾನೂನು ಕೈಗೆತ್ತಿಕೊಳ್ಳುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಕಂದಾಯ ಅಧಿಕಾರಿ ಶಾಂತಮ್ಮ, ಮಹಿಳೆಯರ ಪರವಾಗಿ ಸಲ್ಲಿಸಿರುವ ಮನವಿಯನ್ನು ಹಿರಿಯ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ..? ಕೋಲಾರ | ಚೋಳಘಟ್ಟ ಗಡಿ ಗ್ರಾಮದಲ್ಲಿ ಮಂಜೂರಾದ ಜಮೀನಿಗೆ ಅತಿಕ್ರಮಣ ಆರೋಪ
ಪ್ರತಿಭಟನೆಯಲ್ಲಿ ಗೌರಮ್ಮ, ರತ್ನಮ್ಮ, ಚೌಡಮ್ಮ, ವೆಂಕಟಮ್ಮ, ಶಾಂತಮ್ಮ, ಪುಷ್ಪ, ಪವಿತ್ರ, ಗಾಯತ್ರಿ, ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ, ಮಂಗಸಂದ್ರ ತಿಮ್ಮಣ್ಣ, ರಾಜು, ಗಿರೀಶ್, ವೇಣು, ಬಾಬು ಸೇರಿದಂತೆ ಹಲವರು ಭಾಗವಹಿಸಿದ್ದರು.





