ಬಾಲಕನ ಮೇಲೆ ಹುಲಿ ದಾಳಿ ನಡೆಸಿದ್ದು, ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮೇಟಿಕುಪ್ಪೆ ವನ್ಯಜೀವಿ ವಲಯದಲ್ಲಿ ಬಾಲಕನ ಮೇಲೆ ಹುಲಿ ದಾಳಿ ಮಾಡಿದೆ. ಕಲ್ಲಟ್ಟಿ ಗ್ರಾಮದ ನಿವಾಸಿ ಕೃಷ್ಣ ನಾಯಕ್ ಎಂಬವರ ಪುತ್ರ ಚರಣ್ ನಾಯಕ್ (9) ಮೃತ ಬಾಲಕ ಎಂದು ತಿಳಿದುಬಂದಿದೆ.
ಕೃಷ್ಣ ನಾಯಕ್ ಅವರ ಜಮೀನಿನಲ್ಲಿ ಮೆಣಸು ಕೊಯ್ಲು ಕೆಲಸ ನಡೆಯುತ್ತಿತ್ತು. ಚರಣ್‌ನನ್ನು ಮೆಣಸು ಕಾವಲಿಗೆ ಕೂರಿಸಲಾಗಿತ್ತು. ಈ ವೇಳೆ, ಆತನ ಮೇಲೆ ಹುಲಿ ನಡೆಸಿದೆ. ಕಾಲಿನ ಭಾಗವನ್ನು ತಿಂದುಹಾಕಿದೆ ಎಂದು ಹೇಳಲಾಗಿದೆ.
ಬಾಲಕ ಚೀರಿಕೊಂಡಿದ್ದು, ಜಮೀನಿನಲ್ಲಿದ್ದವರು ಸ್ಥಳಕ್ಕೆ ಧಾವಿಸಿದ್ದಾರೆ. ಆ ವೇಳೆಗೆ ಹುಲಿ ಪರಾರಿಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶಾಸಕ ಅನಿಲ್ ಚಿಕ್ಕಮಾದು, ಡಿ.ಸಿ.ಎಫ್ ಹರ್ಷಕುಮಾರ್, ಎಸಿಎಫ್ ರಂಗಸ್ವಾಮಿ, ಡಿ.ವೈ.ಎಸ್.ಪಿ. ಮಹೇಶ್, ಆರ್.ಎಫ್.ಓ ಹರ್ಷಿತ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.