ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ನೇರಳೆ ಗ್ರಾಮದಲ್ಲಿ ಧಮ್ಮ ಪಯಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಾವಿರಕ್ಕೂ ಅಧಿಕ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಎರಡು ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ ಧಮ್ಮ ದೀಪ ಹಿಡಿದು ಕ್ರಮಿಸಿದರು.
ಗ್ರಾಮದ ಯಜಮಾನರು, ಮುಖಂಡರು, ಮಹಿಳೆಯರು, ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು, ಗ್ರಾಮದ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮಾತೆ ಗೌತಮಿ ಬಂತೇಯವರ ಸಾನಿಧ್ಯದಲ್ಲಿ ಈ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮವು ಸುಮಾರು 2500 ಮೀಟರ್ ಧಮ್ಮ ಧ್ವಜ ಮತ್ತು ಧಮ್ಮ ತೋರಣಗಳಿಂದ ಕಂಗೊಳಿಸುತ್ತಿತ್ತು.
ಪ್ರತಿಯೊಂದು ಮನೆಯಲ್ಲಿಯೂ ಬುದ್ಧ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ದೀಪವನ್ನು ಬೆಳಗುವುದರ ಮೂಲಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದರು.
ಡಾ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕರಿಸಿದ 68ನೇ ವರ್ಷದ ಸವಿ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಅಂಬೇಡ್ಕರ್ ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಿದೆ. ಅವರ ಆಶಯ ಮತ್ತು ಚಿಂತನೆಗಳ ಗುರಿಯತ್ತ ನಾವು ಸಾಗಬೇಕಿದೆ ಎಂದರು.

ಚಿಂತಕ ಮಲ್ಕುಂಡಿ ಮಹದೇವಸ್ವಾಮಿ ಮಾತನಾಡಿ, ಬುದ್ದನ ಶಾಂತಿ ಮತ್ತು ಮೈತ್ರಿ ಇಂದಿನ ಜಗತ್ತಿಗೆ ಅವಶ್ಯಕವಾಗಿದ್ದು ನಮಗೆ ಯುದ್ಧ ಬೇಡ, ಬುದ್ಧ ಬೇಕು. ಇದನ್ನರಿತು ಸರ್ವ ಸಮಾಜಗಳು ಸಹಬಾಳ್ವೆಯಿಂದ ಜೀವನ ನಡೆಸಬೇಕು. ಸಮಾನತೆಯ ಚಿಂತನೆಗಳನ್ನು ಬಿತ್ತಿದ ಮಹನೀಯರನ್ನು ನೆನೆಯುವ ಅನಿವಾರ್ಯ ಇಂದಿನ ಯುವ ತಲೆಮಾರಿಗೆ ಅತ್ಯವಶ್ಯಕವಾಗಿದೆ ಎಂದರು.
ಧಮ್ಮ ನಡಿಗೆಯಲ್ಲಿ ಮಾತೆ ಗೌತಮಿಯವರು ಪಂಚಶೀಲಗಳ ಮಹತ್ವವನ್ನು ಬೋಧಿಸಿದರು. ಮಲ್ಲಳ್ಳಿ ನಾರಾಯಣ, ಕುಡ್ಲಾಪುರ ವಾಸು, ಉಪಾಸಕ, ಉಪಾಸಕಿಯರು, ಬಸವಟ್ಟಿಗೆ ಗ್ರಾಮಸ್ಥರು ಧಮ್ಮ ದೀಪವನ್ನು ಆಹ್ವಾನಿಸಿ ಜೊತೆಗೂಡಿದರು.
