ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ತಾಲೂಕಿನ ಹೇಮಾವತಿ ಜಲಾಶಯದ ಎಡದಂಡೆ ನಾಲೆಯ 54 ನೇ ವಿತರಣಾ ನಾಲೆ ನವೀಕರಣ ಕಾಮಗಾರಿ ಸಂಪೂರ್ಣ ಕಳಪೆ ಹಾಗೂ ಅವೈಜ್ಞಾನಿಕವಾಗಿ ಕೂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮಂಡ್ಯ ಜಿಲ್ಲಾಧ್ಯಕ್ಷ ಡಿ ಎಸ್ ವೇಣು ಆರೋಪಿಸಿ, ಕಾಮಗಾರಿ ಸ್ಥಳದಲ್ಲಿದ್ದ ಹೇಮಾವತಿ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಚಂದ್ರೇಗೌಡರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಇದೆ.
ಕೆ ಆರ್ ಪೇಟೆ ತಾಲೂಕಿನ ಕಸಬಾ ಹೋಬಳಿಯ ಹಿರೀಕಳಲೆ, ಗಾಂಧಿನಗರ, ಗಂಗನಹಳ್ಳಿ ಕೃಷ್ಣಾಪುರ ಲಿಂಗಾಪುರ
ಮಾಕವಳ್ಳಿ, ಮಲ್ಲೇನಹಳ್ಳಿ, ಕರೋಠಿ, ಹೆಗ್ಗಡಹಳ್ಳಿ ಗ್ರಾಮದ ವ್ಯಾಪ್ತಿಗೆ ಬರುವ ಹೇಮಾವತಿ ಎಡದಂಡೆ ನಾಲೆಯ ಸರಪಳಿ 118.500 ಕಿಮೀ ನಲ್ಲಿ ಡಿ54 ವಿತರಣಾ ನಾಲೆಯ ಆಧುನೀಕರಣ ಕಾಮಗಾರಿಯನ್ನು ಅವರು ವೀಕ್ಷಿಸಿದರು.

ಈ ಭಾಗದ ರೈತರು ನಾಲೆಯಲ್ಲಿ ನೀರು ಹರಿದರೆ ಕುಂದೂರುನಿಂದ ಮಲ್ಲೇನಹಳ್ಳಿವರೆಗೆ ಅಂತರ್ಜಲ ಹೆಚ್ಚಾಗಿ ಎಲ್ಲ ಕೊಳವೆಬಾವಿಗಳ ನೀರು ಮರುಪೂರಣವಾಗುತ್ತವೆ. ಇದರಿಂದ ಈ ನಾಲೆಯ ವ್ಯಾಪ್ತಿಗೆ ಸೇರುವ ಅಧಿಕೃತ ಜಮೀನಿನ ಎರಡು ಪಟ್ಟು ಜಮೀನುಗಳಿಗೆ ನೀರು ಒದಗುತ್ತದೆ ಎಂಬ ದೂರ ದೃಷ್ಟಿಯಿಂದ ಸತತ 20 ವರ್ಷಗಳ ಸ್ಥಳೀಯ ರೈತರ ಹೋರಾಟದ ಫಲವಾಗಿ ಹಿಂದಿನ ಸರ್ಕಾರದ ಮಾಜಿ ಸಚಿವ ಕೆ ಸಿ ನಾರಾಯಣಗೌಡ ಸುಮಾರು 55 ಕೋಟಿ ವೆಚ್ಚದಲ್ಲಿ 54 ನೇ ವಿತರಣಾ ನಾಲೆಯ ನವೀಕರಣ ಕಾಮಗಾರಿ ಎರಡು ವರ್ಷ ಹಿಂದೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ ಅದುವೇ ಕಳಪೆ ಕಾಮಗಾರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಕರೋಟಿ ತಮ್ಮಗೌಡ ಮಾತನಾಡಿ, “ಕಾಮಗಾರಿ ಗುಣಮಟ್ಟದಲ್ಲಿ ಇಲ್ಲ. ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಇಲಾಖೆಗೆ ಸಂಬಂಧಪಟ್ಟ ಇಂಜಿನಿಯರಾಗಲೀ, ಇತರೆ ಯಾವುದೇ ಸಹಾಯಕ ಅಧಿಕಾರಿ ಖುದ್ದಾಗಿ ಸ್ಥಳದಲ್ಲಿದ್ದು ಕಾಮಗಾರಿಯ ಗುಣಮಟ್ಟ ವೀಕ್ಷಿಸಿಕೊಳ್ಳದೆ ಇರುವುದರಿಂದ.ಗುತ್ತಿಗೆದಾರ ಹಣ ಲೂಟಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
ಅನುದಾನದ ನೀಲಿ ನಕ್ಷೆಯಂತೆ ಕಾಮಗಾರಿ ನೆರವೇರಿಸದೆ ಕಳಪೆ ಕಾಮಗಾರಿ ನಡೆಯುತ್ತಿದ್ದು, ಕೆಲ ದಿನಗಳಲ್ಲಿ ನಡೆದ ಕಾಮಗಾರಿಗಳು ಸೂಕ್ತ ನಿರ್ವಹಣೆ ಇಲ್ಲದೆ ಈಗಾಗಲೆ ಸಿಮೆಂಟ್ ಬಿರುಕು ಬಿಟ್ಟು ಬೀಳುವ ಸ್ಥಿತಿಯಲ್ಲಿದೆ. ಕಳಪೆ ಕಾಮಗಾರಿ ಕಣ್ಣಿಗೆ ಕಂಡರು ಅಧಿಕಾರಿಗಳು ಮೌನ ವಹಿಸಿರುವುದು ನೋಡಿದರೆ ಅಧಿಕಾರಿಗಳು ಗುತ್ತಿಗೆದಾರನ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದರು.

ಕಾಮಗಾರಿ ಹೀಗೆ ಸಾಗಿದರೆ ಒಂದು ವರ್ಷವೂ ಬಾಳಿಕೆ ಬರುವ ಲಕ್ಷಣ ಕಾಣುತ್ತಿಲ್ಲ ಸರ್ಕಾರ ರೈತರಿಗೆ ಸಾರ್ವಜನಿಕರಿಗೆ ಸದ್ಬಳಕೆ ಆಗಬೇಕೆಂಬ ದೂರ ದೃಷ್ಟಿಯಿಂದ ಬಹುಕೋಟಿ ಅನುದಾನ ನೀಡಲಾಗಿದೆ. ಹಾಗಾಗಿ ಶಾಸಕ ಹೆಚ್ ಟಿ ಮಂಜು ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಿ, ಸಂಬಂಧಪಟ್ಟ ಅಧಿಕಾರಿ ಹಾಗೂ ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಹಿರಿಯ ಹೋರಾಟಗಾರ ಕೆ ಆರ್ ಪೇಟೆ ಜಯಣ್ಣ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಿಪುರ ಶಿವಪ್ರಸಾದ್, ತಾಲ್ಲೂಕು ಉಪಾಧ್ಯಕ್ಷ ಹೊಸಹೊಳಲು ಗೋಪಿ, ಕಸಬಾ ಅಧ್ಯಕ್ಷ ಅನಿಲ್, ಯುವ ಮುಖಂಡರಾದ ಗುಂಡಣ್ಣ, ಕುಂದನಹಳ್ಳಿ ಶಿವಕುಮಾರ್, ಕರೋಠಿ ಅಜಯ್,ಸಹಾಯಕ ಅಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.