ಮೈಸೂರು ಜಿಲ್ಲೆ ಹುಣಸೂರಿನ ಆರ್‌ಟಿಓ ಕಚೇರಿ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವ್ಯಾಪಕ ಮಳೆಯಿಂದಾಗಿ ಮಾಳಿಗೆ ಸೋರುತ್ತಿದೆ. ಭಾಗಶಃ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಭಯದ ನಡುವೆ ಕೆಲಸ ಮಾಡಬೇಕಿದೆ. ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಜನಸಾಮಾನ್ಯರು ಆತಂಕದಿಂದ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲಿರುವ ಆರ್‌ಟಿಓ ಕಚೇರಿಗಳಲ್ಲಿ ಹುಣಸೂರು ಆರ್ ಟಿ ಓ ಅಂದ್ರೆ ಜನರಿಗೆ ವಿಶೇಷವಾಗಿ ಇಷ್ಟ. ಅದಕ್ಕೆ ಕಾರಣ ಕೆ ಎ 45. ಯಾವಾಗಲೂ ಗಿಜಿಗಿಡುವ ಜನಸಂದಣಿ, ಇಕ್ಕಟ್ಟಾದ ಕಚೇರಿ, ಯಾವುದೇ ಮೂಲ ಸೌಕರ್ಯವಿಲ್ಲ.
ಅಧಿಕಾರಿಗಳ ಕೊಠಡಿಗಳಾಗಲಿ, ದಾಖಲೆಗಳ ಸಂಗ್ರಹದ ಕೊಠಡಿಯಾಗಲೀ ಸುರಕ್ಷಿತವಾಗಿ ಇಲ್ಲ. ಎಲ್ಲೆಂದರಲ್ಲಿ ನೀರು ಸೋರುತ್ತಿದೆ. ಮೇಲ್ಛಾವಣಿ ಕಿತ್ತಿದೆ. ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. ಮಳೆಯಿಂದಾಗಿ ಶೀತ ಹೆಚ್ಚಾದಂತೆ ಕಡತಗಳು ಹಾಳಾಗುವ ಸಾಧ್ಯತೆಯೇ ಹೆಚ್ಚಿದೆ.
ಕಟ್ಟಡದ ಅವಸ್ಥೆ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್ ದಾಸ್ ಹೆಚ್ ಎಸ್, “2004ರಲ್ಲಿ ಕಾವೇರಿ ನೀರಾವರಿ ನಿಗಮ ಮಂಡಳಿಯಿಂದ ಬಾಡಿಗೆಗೆ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಆರ್‌ಟಿಓ ಕಟ್ಟಡವಾಗಿದೆ. ಇಲ್ಲಿಗೆ ಸರಿ ಸುಮಾರು 20 ವರ್ಷಗಳೇ ಕಳೆಯುತ್ತಾ ಬಂದಿದೆ. ಇದು ಬಾಡಿಗೆಯ ಕಟ್ಟಡ ಆಗಿರುವುದರಿಂದ ಸಮರ್ಪಕ ನಿರ್ವಹಣೆ ಸಾಧ್ಯವಾಗಿಲ್ಲ. ಮಳೆ ಬಂತೆಂದರೆ ಇಡೀ ಕಟ್ಟಡ ಸೋರುತ್ತದೆ” ಎಂದು ತಮ್ಮ ನೋವು ತೋಡಿಕೊಂಡರು.
ಆರ್ ಟಿ ಓ ಕಚೇರಿ ಬದಲಾಯಿಸಬೇಕು ಎನ್ನುವ ಪ್ರಸ್ತಾವನೆಗೆ ಈಗಾಗಲೇ ಹಣ ಎತ್ತಿಟ್ಟಿದ್ದು, ಸರಿಯಾದ ಜಾಗ ದೊರೆತರೆ ತಕ್ಷಣದಲ್ಲಿಯೇ ಬದಲಾಯಿಸುವ ವ್ಯವಸ್ಥೆ ಕೈಗೊಳ್ಳಲಾಗುತ್ತದೆ. 2023ರಲ್ಲಿ ಹುಣಸೂರು ತಹಶೀಲ್ದಾರ್ ಅವರಿಗೆ ಜಾಗ ಕೋರಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ಅದಕ್ಕೆ ಬೇರೊಬ್ಬರು ತಡೆ ಅರ್ಜಿ ಹಾಕಿರುವುದರಿಂದ ಆಗಿಲ್ಲ. ನಮಗೆ ಒಳ್ಳೆಯ ಜಾಗ ಸಿಕ್ಕರೆ ಸುಸಜ್ಜಿತವಾದ ಆರ್‌ಟಿಓ ಕಚೇರಿ ಕಟ್ಟಲು ಸಿದ್ಧವಿರುವುದಾಗಿ ತಿಳಿಸಿದರು.
ಆರ್‌ಟಿಓ ಕಚೇರಿಗೆ ಬಂದಿದ್ದ ಅಶೋಕ್ ಹುಣಸೂರು ಮಾತನಾಡಿ, “ನಾವು ಕಾರ್ ಎಫ್‌ಸಿ ಮಾಡಿಸಲು ಕೆಲವು ವರ್ಷಗಳ ಹಿಂದೆ ಬಂದಿದ್ದೆವು. ಇದು ಆಗಿನಿಂದ ಈಗಲೂ ಹಾಗೆಯೇ ಇದೆ. ಏನೂ ಬದಲಾವಣೆ ಇಲ್ಲ. ಸ್ವಲ್ಪ ಕೂಡ ಕಟ್ಟಡ ಚೆನ್ನಾಗಿಲ್ಲ. ಮಳೆ ಬಂದರೆ ಜನರು ನಿಲ್ಲೋದಕ್ಕೂ ಸರಿಯಾದ ಜಾಗ ಇಲ್ಲ. ಒಳಗೆ ಹೋದರೂ ಇಕ್ಕಟ್ಟು. ಸರಿಯಾಗಿ ಕುಳಿತುಕೊಳ್ಳಲಿಕ್ಕೂ ಆಗಲ್ಲ. ಹುಣಸೂರಿಗೆ ಒಳ್ಳೆಯ ಆರ್‌ಟಿಓ ಕಟ್ಟಡ ಆದಷ್ಟು ಶೀಘ್ರವಾಗಿ ಆಗಬೇಕು” ಎಂದು ಮನವಿ ಮಾಡಿದರು.

ನಟರಾಜ್ ಹನಗೂಡು ಮಾತನಾಡಿ, “ಮಳೇಲಿ ಬಂದ್ರೆ ನೆನೆಯೋದು ಮಾತ್ರ ತಪ್ಪಲ್ಲ. ಎಲ್ಲ ಕಡೆ ಸೋರುತ್ತೆ. ಅಧಿಕಾರಿಗಳು ಗಮನ ಹರಿಸಬೇಕು. ಅವರ ಪಾಡಿಗೆ ಅವರು ಇದ್ರೆ ಹೊಸ ಕಟ್ಟಡ ಎಲ್ಲಿಂದ ಆಗುತ್ತೆ. ಈಗಲೆ ಗೋಡೆಯೆಲ್ಲ ಬಿರುಕು ಬಿಟ್ಟು ಸೋರುತ್ತೆ. ಏನಾದ್ರೂ ಆಗಿ ಜನಗಳ ಮೇಲೆ ಬಿದ್ರೆ ಇದಕ್ಕೆಲ್ಲ ಹೊಣೆ ಯಾರು? ಸರ್ಕಾರಿ ಕಚೇರಿಗಳಿಗೆ ಇಂತಹ ದುಸ್ಥಿತಿ ಇರುವುದು ನಿಜಕ್ಕೂ ಖೇದನೀಯ. ಇನ್ನು ಜನ ಸಾಮಾನ್ಯರ ಬದುಕು ಹೇಗಿರುತ್ತೆ ಎಂದು ಒಮ್ಮೆ ಆಲೋಚಿಸಿ” ಎಂದು ಪ್ರಶ್ನಿಸಿದರು.

ಸಣ್ಣೇಗೌಡ ಯಮಗುಂಬ ಮಾತನಾಡಿ, “ಹುಣಸೂರಿನಲ್ಲಿ ಇರುವಷ್ಟು ಕೆಟ್ಟ ಕಚೇರಿ-ಕಟ್ಟಡಗಳು ಇಡೀ ರಾಜ್ಯದಲ್ಲಿ ಇಲ್ಲ ಅನಿಸುತ್ತದೆ. ಯಾವ ಕಚೇರಿಗೆ ಹೋಗಿ ಎಲ್ಲವೂ ಹಾಳಾಗಿವೆ. ಒಂದೂ ಕೂಡ ಚೆನ್ನಾಗಿಲ್ಲ. ಅಧಿಕಾರಿಗಳಿಗೆ ಇದು ಗೊತ್ತಿದ್ದರೂ, ಈ ಬಗ್ಗೆ ಧ್ವನಿ ಎತ್ತೋದೇ ಇಲ್ಲ. ಜನರಿಗೆ ಕೂರಲು ಹೋಗಲಿ ಶೌಚಾಲಯ, ಕುಡಿಯುವ ನೀರಿಲ್ಲ. ಇದನ್ನು ಯಾರೂ ಕೂಡ ಕೇಳೋದೇ ಇಲ್ಲ. ಗತಿ ಇಲ್ಲದಂತಾಗಿದೆ. ಹುಣಸೂರು ಕಚೇರಿಗಳು ಯಾವಾಗ ಬದಲಾಗುತ್ತೋ ಅದನ್ನ ಅಧಿಕಾರಿಗಳೇ ಹೇಳಬೇಕು” ಎಂದು ಆಕ್ರೋಶ ಹೊರಹಾಕಿದರು.
ಹುಣಸೂರಿಗೆ ಒಳ್ಳೆಯ ಆರ್‌ಟಿಓ ಕಚೇರಿ ಆಗಬೇಕು ಎಂಬುದು ಕೇವಲ ಜನರ ಬೇಡಿಕೆಯಲ್ಲ, ಅಧಿಕಾರಿಗಳದ್ದೂ ಕೂಡ. ಆದಷ್ಟು ಶೀಘ್ರವೇ ಹೊಸ ಕಟ್ಟಡವಾಗಿ, ಹಳೆಯ ಕಟ್ಟಡದಿಂದ ಮುಕ್ತಿ ಪಡೆಯಲಿ ಎಂಬುದು ಸ್ಥಳೀಯರ ಆಗ್ರಹ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರೋ ಅಥವಾ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಲಿದ್ದಾರಾ ಎಂಬುದನ್ನು ಕಾದುನೋಡಬೇಕಿದೆ.
