ಮೈಸೂರು ಜಿಲ್ಲೆ ಟಿ ನರಸೀಪುರ ತಾಲೂಕು ಬನ್ನೂರು ಹೋಬಳಿ ಯಾಚೇನಹಳ್ಳಿಯಲ್ಲಿ ಜಿಲ್ಲಾಡಳಿತ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯಿಂದ ರಾಷ್ಟ್ರಕವಿ ಕುವೆಂಪು ಚಿತಾಭಸ್ಮ ಸ್ಮಾರಕ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ಶಂಕುಸ್ಥಾಪನೆ ನೆರವೇರಿಸಿದರು.
‘ಸರ್ವಜನಾಂಗದ ಶಾಂತಿಯ ತೋಟ’ ನಿರ್ಮಿಸುವುದು ಕುವೆಂಪು ಅವರ ಆಶಯವಾಗಿದ್ದು, ಯುವ ಜನರು ಮನುಜ ಮತ, ವಿಶ್ವಪಥದೆಡೆಗೆ ಸಾಗಬೇಕು ‘ ಎಂದು ಕರೆ ನೀಡಿದರು.

ದೇಶವನ್ನು ಜಾತಿ,ಮತ,ಧರ್ಮಗಳಲ್ಲಿ ಒಡೆಯುವ ಮನಸ್ಥಿತಿ ಬಂದೊದಗಿರುವಾಗ ಬುದ್ಧ, ಬಸವ, ಅಂಬೇಡ್ಕರ್ ಹಾದಿಯಲ್ಲಿ ಕುವೆಂಪುರವರ ಆಶಯಗಳಿಗೆ ಬದ್ಧರಾಗಿ ನಡೆಯಬೇಕಿದೆ ಎಂದರು.
ವೈಜ್ಞಾನಿಕತೆ,ವೈಚಾರಿಕತೆ ದೃಷ್ಟಿಯಿಂದ ಕುವೆಂಪು ಸ್ಮಾರಕ ಭವನ ನಿರ್ಮಾಣಗೊಳ್ಳುತ್ತಿದ್ದು ಬೌದ್ಧಿಕವಾಗಿ ನಾವು ಎಚ್ಚರವಾಗದಿದ್ದರೆ ಶ್ರೇಣಿಕೃತ ವ್ಯವಸ್ಥೆಯಲ್ಲಿ ಪಾತಾಳಕ್ಕೆ ತಳ್ಳಲಿದ್ದಾರೆ. ಕುವೆಂಪು ವಿಚಾರಧಾರೆ ಎಂದಿಗೂ ಜೀವಂತ. ಶೂದ್ರ ಸಮಾಜವನ್ನು ಕತ್ತಲಿನಿಂದ ಬೆಳಕಿಗೆ ಕರೆತರುವ ನಿಟ್ಟಿನಲ್ಲಿ ವಿಶ್ವಮಾನವ ಸಂದೇಶ ಸಾರಿ ಮನುಜ ಮತದ ಸಾರ್ಥಕತೆಯ ಅರಿವು ಕೊಟ್ಟವರು ಎಂದು ಮಹದೇವಪ್ಪ ಸ್ಮರಿಸಿದರು.
ಇದನ್ನು ಓದಿದ್ದೀರಾ? ಹುಣಸೂರು | ಸೋರುತ್ತಿದೆ ಆರ್‌ಟಿಓ ಕಚೇರಿ ಮಾಳಿಗೆ; ಅಧಿಕಾರಿಗಳಿಗೇ ಇಲ್ಲ ಮೂಲ ಸೌಕರ್ಯ!
ಕಾರ್ಯಕ್ರಮದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನಿಲ್ ಬೋಸ್, ಚಿಂತಕ ಪ್ರೊ ಕೆ ಎಸ್ ಭಗವಾನ್, ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯ ಶೇಖರ್, ಸರೋಜಮ್ಮ, ಮಾಜಿ ಶಾಸಕಿ ಸುನಿತಾ ವೀರಪ್ಪಗೌಡ, ಮೈಮುಲ್ ನಿರ್ದೇಶಕ ಚಲುವರಾಜು, ರಾಮಕೃಷ್ಣ ಸೇವಾ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ನಾಗಾಂದನಾಥ ಸ್ವಾಮೀಜಿ, ನಿವೇಶನ ದಾನ ಮಾಡಿದ ವೈ ಎನ್ ಶಂಕರೇಗೌಡ, ಹಿರಿಯ ಮುಖಂಡ ವಜ್ರೇಗೌಡ, ಮುಖಂಡರಾದ ಮುನವರ್ ಪಾಷ, ವೀಣಾ ಶಿವಕುಮಾರ್, ಚನ್ನಕೇಶವ ಸೇರಿದಂತೆ ಹಲವರು ಉಪಸ್ಥಿತರಿದ್ದರು.
