ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಕೆಲಸ ನೀಡದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೂಸ) ಕಾರ್ಯಕರ್ತರು ಸೋಮವಾರ ಹುಮನಾಬಾದ್ ತಾಲ್ಲೂಕು ಪಂಚಾಯಿತಿ ಎದುರು ಧರಣಿ ನಡೆಸುತ್ತಿದ್ದಾರೆ.
ತಾಲ್ಲೂಕಿನ ಸೀತಾಳಗೇರಾ, ನಿಂಬೂರು, ಸಿಂಧನಕೇರಾ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕರು ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಅಧಿಕಾರಿಗಳು ನರೇಗಾ ಅಡಿ ಕೆಲಸ ನೀಡಲು ಸ್ಪಂದಿಸುತ್ತಿಲ್ಲ. ಕೆಲಸ ನೀಡದ ಕಾರ್ಮಿಕರಿಗೆ ನಿರುದ್ಯೋಗ ಭತ್ತೆ ನೀಡುವಂತೆ ತಾ.ಪಂ.ಗೆ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಕಾರ್ಮಿಕರು ದೂರಿದರು.
ಸಿಂಧನಕೇರಾ ಗ್ರಾಮ ಪಂಚಾಯಿತಿಯ ಹಣಕುಣಿ ಗ್ರಾಮದ 30 ಕಾರ್ಮಿಕರು ಕೆಲಸ ನೀಡುವಂತೆ ಅರ್ಜಿ ಸಲ್ಲಿಸಲು ಪಂಚಾಯಿತಿಗೆ ತೆರಳಿದ್ದಾಗ ಪಿಡಿಒ ಅರ್ಜಿ ಸ್ವೀಕರಿಸದೇ ಬೇಜವ್ದಾರಿಯಾಗಿ ವರ್ತಿಸಿದ್ದಾರೆ. ಬಳಿಕ ಅರ್ಜಿ ಸ್ವೀಕರಿಸಿದರೂ ಇಲ್ಲಿಯವರೆಗೆ ಕೆಲಸ ನೀಡಿಲ್ಲ ಎಂದು ಪ್ರತಿಭಟನಾ ನಿರತ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಆರ್ಥಿಕ ಬಲವರ್ಧನೆಗೆ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುತ್ತಿದೆ. ಆದರೆ ಅಧಿಕಾರಿಗಳು ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಕೆಲಸ ನೀಡದೇ ಕಾರ್ಮಿಕರ ಹಕ್ಕು ಕಸಿದುಕೊಳ್ಳುತ್ತಿದ್ದಾರೆ. ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ಕೆಲಸ ನೀಡಬೇಕು. ನಿರುದ್ಯೋಗ ಭತ್ತೆ ಕೊಡಬೇಕು. ಕಾರ್ಮಿಕರನ್ನು ನಿರ್ಲಕ್ಷಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಇಒ ದೀಪಿಕಾ ನಾಯ್ಕರ್ ಭೇಟಿ ನೀಡಿದ್ದಾರೆ. ಆದರೆ ಪ್ರತಿಭಟನಾಕಾರರ ಬೇಡಿಕೆಗಳಿಗೆ ಇಒ ಸ್ಪಂದಿಸದ ಕಾರಣ ಧರಣಿ ಮುಂದುವರಿದಿದ್ದು, ನಮ್ಮ ಬೇಡಿಕೆ ಈಡೇರುವವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 141 ಕೊಲೆ : ಗೃಹ ಸಚಿವ ಜಿ.ಪರಮೇಶ್ವರ
ಪ್ರತಿಭಟನೆಯಲ್ಲಿ ಜಿಲ್ಲಾ ಗ್ರಾಕೂಸ್ ಸಂಘಟನೆಯ ಜಿಲ್ಲಾ ಕಾರ್ಯಕರ್ತೆ ಸಪ್ನಾದೀಪ, ತಾಲ್ಲೂಕು ಪ್ರಮುಖರಾದ ಗೀತಾ ಡಿಗಾರೆ, ರೇಷ್ಮಾ, ರಾಜಕುಮಾರ್, ಸುರೇಖಾ, ಸುಶೀಲಾ ಸೇರಿದಂತೆ ಸಂಘಟನೆಯ ಕಾರ್ಮಿಕರು ಪಾಲ್ಗೊಂಡಿದ್ದಾರೆ.
ವರದಿ : ಲೋಕೇಶ್ ಕಾಂಬಳೆ, ಸಿಟಿಜನ್ ಜರ್ನಲಿಸ್ಟ್ ಭಾಲ್ಕಿ