ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಅರುಣ್ ಚೌಗಲೆ(39)ಯನ್ನು ಇಂದು ಸಂಜೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಉಡುಪಿಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ವಿಚಾರಣೆ ನಡೆಸಿದ ಬಳಿಕ ಹದಿನಾಲ್ಕು ದಿನ ಅಂದರೆ ನ.28ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಆದೇಶಿಸಿದೆ.
ಮುಂದಿನ ಹದಿನಾಲ್ಕು ದಿನಗಳಲ್ಲಿ ತನಿಖಾಧಿಕಾರಿಗಳ ತಂಡ ಆರೋಪಿಯು ನೀಡುವ ಎಲ್ಲ ಮಾಹಿತಿಗಳನ್ನು ಕಲೆ ಹಾಕಬೇಕಿದೆ. ಕೊಲೆ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ಎಲ್ಲಿಟ್ಟಿದ್ದಾನೆ ಎಂಬ ಮಾಹಿತಿ ತನಿಖೆಯಿಂದ ತಿಳಿಯಲಿದೆ ಎಂದು ಉಡುಪಿ ಪೊಲೀಸರು ಬುಧವಾರ ಸಂಜೆ ಮಾಹಿತಿ ಹಂಚಿಕೊಂಡಿದ್ದರು.
ಆರೋಪಿಯು ಏರ್ ಇಂಡಿಯಾದಲ್ಲಿ ಗಗನಸಖಿಯಾಗಿದ್ದ ಆಯ್ನಾಝ್‌ಳನ್ನು ಕೊಲ್ಲಲು ಬಂದಾಗ ತಡೆಯಲು ಬಂದ ಇತರ ಮೂವರನ್ನು ಹತ್ಯೆಗೈದಿದ್ದ. ಕೊಲೆಯ ಮೂರು ಉದ್ದೇಶವನ್ನು ವಿಚಾರಣೆಯಲ್ಲಿ ಆರೋಪಿಯು ತಿಳಿಸಿದ್ದು, ಕುಟುಂಬಸ್ಥರೊಂದಿಗೆ ಈ ಕುರಿತು ವಿಚಾರಿಸಿ ಸ್ಪಷ್ಟ ಪಡಿಸಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ ಪ್ರಕರಣ | ಅಯ್ನಾಝ್ ಕೊಲ್ಲುವ ಉದ್ದೇಶದಿಂದಲೇ ಪ್ರವೀಣ್ ಬಂದಿದ್ದ: ಎಸ್‌ಪಿ
ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನ ನ್ಯಾಯಾಲಯದ ಆವರಣದಲ್ಲಿ ಸೇರಿದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಮೂವರು ಡಿವೈಎಸ್ಪಿ, 25 ಎಎಸ್‌ಐ, ಐವರು ಪಿಎಸ್‌ಐ, ಮೂವರು ಇನ್‌ಸ್ಪೆಕ್ಟರ್‌ಗಳು, 150 ಕಾನ್‌ಸ್ಟೇಬಲ್‌ಗಳು, ಆರು ಡಿಎಆರ್ ಬೆಟಾಲಿಯನ್‌ಗಳು ಮತ್ತು ಮೂವರು ಕೆಎಸ್‌ಆರ್‌ಪಿ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.