ಸುಪ್ರಸಿದ್ಧ ಭಕ್ತಿಯ ತಾಣ ಚಿಂತಾಮಣಿ ನಿಮ್ಮಕಾಯಲಹಳ್ಳಿ ಗ್ರಾಮದ ಹಜರತ್ ಸೈಯದ್ ಜಲಾಲ್ ಖಾಕಿ ಷಾ ಮೌಲಾ ಬಾಬಾ ದರ್ಗಾದ ಮೊದಲನೇ ದಿನದ ನೂರಾನಿ ಗಂಧೋತ್ಸವವನ್ನು ಗುರುವಾರ ರಾತ್ರಿ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಹಿಂದೂ ಮುಸ್ಲಿಮರ ಭಾವೈಕ್ಯತೆಯ ಸಂಗಮವಾಗಿರುವ ಚಿಂತಾಮಣಿ ತಾಲ್ಲೂಕಿನ ನಿಮ್ಮಕಾಯಲಹಳ್ಳಿಯಲ್ಲಿ ಹಲವು ವರ್ಷಗಳಿಂದ ನೂರಾನಿ ಗಂಧೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಎಂದಿನಂತೆ ದರ್ಗಾ ಮುಜಾವರ್ ಎಸ್ ಮೌಲಾ ಅಲಿ ಅವರೊಂದಿಗೆ ಎಲ್ಲಾ ಮುಜಾವರ್‌ಗಳು ಒಟ್ಟಾಗಿ ಸೇರಿ ಮುಸ್ಲಿಂ ಸಂಪ್ರದಾಯದಂತೆ ಗಂಧೋತ್ಸವನ್ನು ಆಚರಣೆ ಮಾಡಲಾಯಿತು.

ಕುರಾನ್ ಪಠಣೆ, ತಮಟೆ ವಾದ್ಯದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗಂಧೋತ್ಸವ ಮೆರವಣಿಗೆ ಸಾಗಿತು. ಪಕೀರರು ಹಾಗೂ ಗ್ರಾಮದ ಯುವಕರು ಗಂಧದ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನಂತರ ದರ್ಗಾಗೆ ತೆರಳಿ ಗಂಧವನ್ನು ಅರ್ಪಿಸಿದ ಪ್ರಮುಖರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಗಂಧೋತ್ಸವದಲ್ಲಿ ದರ್ಗಾ ಮುಜಾವರಗಳಾದ ಪ್ಯಾರೆಜಾನ್, ಮಹಬೂಬ್ ಸಾಬ್, ಶಫಿವುಲ್ಲಾ, ರಫೀಕ್, ಜಿಯಾ ಉಲ್ಲಾ, ತಾಜ್ ಪೀರ್, ಜಬೀ, ಮುಬಾರಕ್, ಇಲಿಯಾಸ್, ರಹಮತ್, ದರ್ಗಾ ಅಧ್ಯಕ್ಷ ಅಮೀರ್ ಜಾನ್ ಸೇರಿದಂತೆ ದರ್ಗಾ ಸಮಿತಿಯ ಸದಸ್ಯರು ಹಾಗೂ ಗ್ರಾಮದ ಮುಖಂಡರು, ಸ್ಥಳೀಯರು ಭಾಗವಹಿಸಿದ್ದರು.