- ‘ವೈದ್ಯಕೀಯ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ’
- ‘ಕನಕಪುರಕ್ಕೆ ಹೊಸ ಕಾಲೇಜು ಮಂಜೂರು ಮಾಡಿಕೊಳ್ಳಲಿ’
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಸ್ಥಳಾಂತರ ಖಂಡಿಸಿ ಸಾರ್ವಜನಿಕರು, ಸಂಘಟನೆಗಳು ಹೋರಾಟ ಆರಂಭಿಸಿದ್ದಾರೆ. ರಾಮನಗರದಿಂದ ರಾಜೀವ್ ಗಾಂಧಿ ವಿವಿ ಸ್ಥಳಾಂತರ ಮಾಡುವುದು ಬೇಡ ಎಂದು ಮಾಜಿ ಸಿ ಎಂ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಳಾಂತರಕ್ಕೆ ಮುಂದಾಗಿರುವುದನ್ನು ಖಂಡಿಸಿ ಸಾರ್ವಜನಿಕರು, ವಿವಿಧ ಸಂಘಟನೆಗಳು ಈಗಾಗಲೇ ಹೋರಾಟ ಆರಂಭಿಸಿವೆ. ಡಿಸಿಎಂ ಡಿ ಕೆ ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಸ್ಥಳೀಯ ಮುಖಂಡರು ತಮಟೆ ಚಳವಳಿ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಇಷ್ಟು ವಿರೋಧ ಇದ್ದ ಮೇಲೆ ವಿವಿ ಸ್ಥಳಾಂತ ಬೇಡ” ಎಂದರು.
“ಮೈತ್ರಿ ಸರ್ಕಾರದ ಅವಧಿಯಲ್ಲಿ ಕನಕಪುರ ಮೆಡಿಕಲ್ ಕಾಲೇಜಿಗೆ ನಾನೇ 100 ಕೋಟಿ ರೂ. ಅನುದಾನ ಕೊಟ್ಟಿದ್ದೆ. ಆಗ ಡಿ.ಕೆ.ಶಿವಕುಮಾರ್ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಬಳಿಕ ಬಿಜೆಪಿ ಸರ್ಕಾರ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋಯಿತು. ಈಗ ಕಾಂಗ್ರೆಸ್ ಸರ್ಕಾರವಿದೆ, ಆ ಮೆಡಿಕಲ್ ಕಾಲೇಜಿಗೆ ಜೀವಕೊಡಲಿ” ಎಂದು ಒತ್ತಾಯಿಸಿದರು.
“2006 ರಲ್ಲಿ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ರಾಮನಗರಕ್ಕೆ ಬಂತು. ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಆಸ್ಪತ್ರೆ ಬೇಕು ಎಂದು ಕನಸು ಕಂಡಿದ್ದೆ. 600 ಕೋಟಿ ವೆಚ್ಚದಲ್ಲಿ ಹಿಂದಿನ ಸರ್ಕಾರ ಎರಡೂ ಸದನದಲ್ಲಿ ಅನುಮೋದನೆ ಕೊಟ್ಟಿತ್ತು. ಈಗ ಮೆಡಿಕಲ್ ಕಾಲೇಜು ಸ್ಥಳಾಂತರ ಸರಿಯಲ್ಲ. ಇದು ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ವಿರೋಧಿ ನಿಲುವುಳ್ಳ ನಿವೃತ್ತ ನ್ಯಾಯಾಧೀಶರಿಂದ ಬಿಜೆಪಿಗೆ ಬೈಯಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಪ್ರಲ್ಹಾದ್ ಜೋಶಿ
ಹೊಸ ಕಾಲೇಜು ಮಂಜೂರು ಮಾಡಿಕೊಳ್ಳಿ
“ಜಿಲ್ಲಾ ಕೇಂದ್ರ ಬಿಟ್ಟು ಎಲ್ಲೋ ಮೂಲೆಗೆ ಮೆಡಿಕಲ್ ಕಾಲೇಜು ಸ್ಥಳಾಂತರ ಅವೈಜ್ಞಾನಿಕ. ಹೀಗೇ ಆದರೆ ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿಗಳು ಬರುವುದಿಲ್ಲ. ರಾಮನಗರ ಜಿಲ್ಲಾ ಕೇಂದ್ರ, ಇಲ್ಲಿ ಮೆಡಿಕಲ್ ಕಾಲೇಜು ಬಂದರೆ ಸುತ್ತಮುತ್ತಲಿನ ತಾಲೂಕಿಗಳಿಗೂ ಅನುಕೂಲವಾಗಲಿದೆ. ಕನಕಪುರಕ್ಕೆ ಮೆಡಿಕಲ್ ಕಾಲೇಜು ಬೇಕೇ ಬೇಕು ಅಂದರೆ ಅವರದ್ದೇ ಸರ್ಕಾರ ಇದೆ. ಹೊಸ ಕಾಲೇಜು ಮಂಜೂರು ಮಾಡಿಕೊಳ್ಳಲಿ” ಎಂದರು.
ಮೆಡಿಕಲ್ ಕಾಲೇಜು ಸ್ಥಳಾಂತರದ ವಿರುದ್ಧ ಬೃಹತ್ ಹೋರಾಟಕ್ಕೆ ಚಿಂತನೆ ನಡೆಸಲಾಗುತ್ತಿದೆ. ಆಗಸ್ಟ್ 29ರಂದು ಸಾರ್ವಜನಿಕ ಸಭೆ ನಡೆಸಿ ಹೋರಾಟ ನಡೆಸಲು ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಚಿಂತನೆ ನಡೆಸಿದ್ದು, ‘ನಮ್ಮ ಮೆಡಿಕಲ್ ಕಾಲೇಜು –ನಮ್ಮ ಹಕ್ಕು’ ಎಂಬ ಹೆಸರಿನಲ್ಲಿ ಹೋರಾಟ ನಡೆಯಲಿದೆ ಎಂದು ತಿಳಿದುಬಂದಿದೆ.