ಭಾರತದ ಭವಿಷ್ಯಕ್ಕಾಗಿ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸುವ ಮೂಲಕ ಯೋಧರಂತೆ ಸಜ್ಜುಗೊಳಿಸುವುದು ಅಗತ್ಯವಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಶ್ರೀನಿನಾಥ ಪೂಜಾರಿ ಹೇಳಿದರು.
ಬೀದರ್‌ನಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಮೀಸಲಾತಿ ಜನಕ ಶಾಹು ಮಹಾರಾಜರ ಜಯಂತ್ಯೋತ್ಸವ ಹಾಗೂ ಅಂಬೇಡ್ಕರ್ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಖಾಸಗೀಕರಣದಿಂದಾಗಿ ಇಂದಿನ ಶಿಕ್ಷಣ ತುಂಬಾ ದುಬಾರಿಯಾಗಿದೆ. ಅಂಬೇಡ್ಕರ್ ಕನಸಿನ ಭಾರತ ಕಟ್ಟುವ ಶಿಕ್ಷಣ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲ. ಇದರಿಂದಾಗಿ ಸಂವಿಧಾನ ಹಾಗೂ ಪ್ರಜಾಫ್ರಭುತ್ವ ಆಶಯಗಳಿಗೆ ಪೂರಕವಾದ ಮೌಲ್ಯ ಶಿಕ್ಷಣ ದೊರೆಯದ ಕಾರಣ ವಿದ್ಯಾರ್ಥಿಗಳು ಪ್ರಬುದ್ಧರಾಗಿ ಬೆಳೆಯುವ ಅವಕಾಶ ಕಳೆದುಕೊಳ್ಳುತ್ತಿದ್ದಾರೆʼ ಎಂದು ಬೇಸರ ವ್ಯಕ್ತಪಡಿಸಿದರು.
ʼದಲಿತ ವಿದ್ಯಾರ್ಥಿ ಪರಿಷತ್ ತಂಡದಿಂದ ಬಳ್ಳಾರಿ ಹಾಗೂ ಹೊಸಪೇಟೆಗಳಲ್ಲಿ ಸುಮಾರು ಒಂದು ನೂರು ಅಂಬೇಡ್ಕರ್ ರಾತ್ರಿ ಶಾಲೆಗಳು ತೆರೆದು ಬಡಜನರ ಮಕ್ಕಳಿಗೆ ತರಬೇತಿ ನೀಡಿ ಇಂಗ್ಲೀಷ್ ಶಿಕ್ಷಣ ನೀಡಲಾಗುತ್ತಿದೆ. ಪ್ರಬುದ್ಧ ಭಾರತದ ನಿರ್ಮಾಣಕ್ಕೆ ಪೂರಕವಾದ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಲಾಗುತ್ತಿದೆʼ ಎಂದು ಹೇಳಿದರು.
ನಿವೃತ ಪ್ರಾಚಾರ್ಯ ವಿಠ್ಠಲದಾಸ ಪ್ಯಾಗೆ ವಿಶೇಷ ಉಪನ್ಯಾಸ ನೀಡಿ, ʼದೇಶದಲ್ಲಿ ಶಿಕ್ಷಣ ದುಬಾರಿಯಾಗಿದೆ, ಶಿಕ್ಷಣದ ಹೆಸರಿನಲ್ಲಿ ಮೋಸ ನಡೆಯುತ್ತಿದೆ. ಹೊಟ್ಟೆ ತುಂಬಿಸಿಕೊಳ್ಳಲು ಮಾತ್ರ ಶಿಕ್ಷಣ ಪಡೆಯದೇ, ನಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಜೊತೆಗೆ ಸಮಾಜ ಕಟ್ಟುವ ನಿಟ್ಟಿನಲ್ಲಿ ಶಿಕ್ಷಣ ಪಡೆಯಬೇಕು. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬುದ್ಧರ ವಿಚಾರಗಳು ಬದುಕಿನಲ್ಲಿ ಅಳವಡಿಸಿಕೊಂಡರೆ ಪ್ರಬುದ್ಧ ಸಮಾಜ ಕಟ್ಟಲು ಸಾಧ್ಯʼ ಎಂದು ನುಡಿದರು.

ಡಿವಿಪಿ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ʼವಿದ್ಯೆಯೇ ವಿಮೋಚನೆಗೆ ಹೆದ್ದಾರಿ ಎಂಬ ನಿಟ್ಟಿನಲ್ಲಿ ಮಕ್ಕಳಿಗೆ ಸಮಕಾಲೀನ ಭಾರತಕ್ಕೆ ಅನುಗುಣವಾಗಿ ಮೌಲ್ಯ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ನಮ್ಮ ತಂಡ ಶಾಲಾ-ಕಾಲೇಜುಗಳಲ್ಲಿ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಲ್ಲೂ ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಬಲವರ್ಧನೆಗೆ ಬೇಕಾದ ಅಗತ್ಯ ಮಾರ್ಗದರ್ಶನ ನೀಡಲಾಗುತ್ತಿದೆʼ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೃಷಿ ಕೆಲಸಕ್ಕೂ ಅವಕಾಶ ಕಲ್ಪಿಸಿ : ರೈತ ಸಂಘ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುಭಾಷ ನಾಗೂರೆ, ದಸಂಸ ಜಿಲ್ಲಾ ಸಂಚಾಲಕ ಬಾಬುರಾವ ಪಾಸ್ವಾನ್, ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರೀಪತರಾವ ದೀನೆ, ದಸಂಸ ಜಿಲ್ಲಾ ಸಂಚಾಲಕ ಶಿವಕುಮಾರ್ ನೀಲಿಕಟ್ಟಿ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.