‘ಪ್ರವಾದಿ ಮುಹಮ್ಮದ್(ಸ)ರವರು ಪರಿಚಯಿಸಿದ ಆದರ್ಶ ಸಮಾಜ ಮತ್ತು ಇಂದಿನ ಸವಾಲುಗಳು’ ಎಂಬ ಧ್ಯೇಯವಾಕ್ಯದೊಂದಿಗೆ ನವಂಬರ್ 8 ಶುಕ್ರವಾರದಂದು ಮಂಗಳೂರಿನ ಪುರಭವನದಲ್ಲಿ ಸಾರ್ವಜನಿಕ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ನಗರ ಅಧ್ಯಕ್ಷರಾದ ಇಸಾಕ್ ಪುತ್ತೂರು ತಿಳಿಸಿದರು.
ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತಿನ ಸಮಾಜವನ್ನು ಮೌಲ್ಯಾಧಾರಿತವಾಗಿ ರಚಿಸುವಲ್ಲಿ ಎದುರಾಗುತ್ತಿರುವ ಸವಾಲುಗಳೇನು ಎಂಬುದರ ವಿಶ್ಲೇಷಣೆಯು ಈ ಸಮಾವೇಶದಲ್ಲಿ ನಡೆಯಲಿದೆ. ಸಾಮಾಜಿಕ ಮೌಲ್ಯಗಳು ಮತ್ತು ತತ್ವಗಳನ್ನು ಚರ್ಚೆಗೊಡ್ಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.

ನವೆಂಬರ್ 8ರಂದು, ಶುಕ್ರವಾರ ಸಂಜೆ 6:40ಕ್ಕೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಪ್ರಾದೇಶಿಕ ಸೇನಾಧಿಕಾರಿ ಲೆಫ್ಟಿನೆಂಟ್ ಭವ್ಯ ನರಸಿಂಹಮೂರ್ತಿ, ಸಾಮಾಜಿಕ ಚಿಂತಕ ನ್ಯಾಯವಾದಿ ಸುಧೀರ್ ಕುಮಾರ್ ಮುರೋಳ್ಳಿ, ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದವರು ಹೇಳಿದರು.
ಇದನ್ನು ಓದಿದ್ದೀರಾ? ಕುಮಟಾ | ರೈತರಿಗೆ ಪರಿಹಾರ ನೀಡದ ಅಧಿಕಾರಿ: ಎಸಿ ಕಚೇರಿಯ ಪೀಠೋಪಕರಣ ಜಪ್ತಿಗೆ ಕೋರ್ಟ್ ಆದೇಶ
ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ರಹ್ಮಾನ್, ಝಾಕೀರ್, ಸುಮಯ್ಯಾ ಹಮೀದುಲ್ಲಾ, ಶಹೀದಾ ಉಮರ್ ಉಪಸ್ಥಿತರಿದ್ದರು.
