ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಕ್ಟೋಬರ್ 18ರಂದು ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿಯ ವರದಿಯನ್ನು ಮಂಡಿಸಿ ಸಚಿವ ಸಂಪುಟದ ಒಪ್ಪಿಗೆ ಪಡೆದು ಬಿಡುಗಡೆ ಮಾಡಬೇಕೆಂದು ಶೋಷಿತ ಸಮುದಾಯಗಳ ಮಹಾಒಕ್ಕೂಟದ ರಾಜ್ಯ ಸಂಚಾಲಕ ಜಗದೀಶ್ ಒತ್ತಾಯಿಸಿದರು.
ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿಗಣತಿಯ ವರದಿಯನ್ನು ಶೀಘ್ರ ಬಿಡುಗಡೆಗೆ ಮತ್ತು ಅ.18 ರ ಸಚಿವ ಸಂಪುಟ ಸಭೆಯಲ್ಲಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಜಾತಿಗಳ ಆರ್ಥಿಕ ಶೈಕ್ಷಣಿಕ ಸ್ಥಿತಿ-ಗತಿಗಳನ್ನು ಅರಿಯಲು ನಡೆಸಿರುವ ಜಾತಿಗಣತಿಯನ್ನು ಒಪ್ಪಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರವು ಮೀನಮೇಷ ಎಣಿಸುವ ಅಗತ್ಯವಿಲ್ಲ. ಇದು ಎಲ್ಲರ ಸ್ಥಿತಿಗತಿ ಕುರಿತ ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಸರ್ಕಾರ ನೂರಾರು ಕೋಟಿ ವೆಚ್ಚ ಮಾಡಿ ನೆಡೆಸಿರುವ ಗಣತಿ ಫಲಪ್ರದವಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿ ವರದಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಸ್ವಾಗತಾರ್ಹ. ರಾಜ್ಯದ ಜನಸಂಖ್ಯೆಯ ಮುಕ್ಕಾಲು ಭಾಗಕ್ಕೂ ಜಾಸ್ತಿ ಇರುವ ಅಹಿಂದ ವರ್ಗಗಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಪ್ರಾತಿನಿಧ್ಯ, ಉದ್ಯೋಗದ ಅವಕಾಶಗಳು ಮತ್ತು ವಿದ್ಯಾಭ್ಯಾಸದ ಅವಕಾಶಗಳು ಲಭಿಸಿಲ್ಲ. ಅಹಿಂದ ವರ್ಗಗಳಲ್ಲಿ ಅರಿವು ಕೊರತೆ ಕಾರಣಕ್ಕಾಗಿ ಅವಕಾಶಗಳು ಸಿಕ್ಕಿಲ್ಲ. ಈಗ ವರದಿ ಹೊರ ಬಂದರೆ ಅವರ ಸ್ಥಿತಿಗತಿ ತಿಳಿಯಲು, ಪೂರಕವಾಗಿ ಕಾರ್ಯಕ್ರಮ ರೂಪಿಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಮಂಜಪ್ಪ ಮಾತನಾಡಿ, ಬಡವರು, ರೈತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರ ಬಗ್ಗೆ ಅಪಾರವಾದ ಕಾಳಜಿ ಇರುವ ಸದಾ ಸಾಮಾಜಿಕ ನ್ಯಾಯದ ಪರ ಇರುವ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಏಳು ಕೋಟಿ ಜನರಿಗೂ ಅನುಕೂಲ ಆಗುವಂತಹ ಈ ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡಬೇಕು. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿಗಣತಿ ನಡೆಸುವುದಾಗಿ ವಾಗ್ದಾನ ನೀಡಿತ್ತು ಎನ್ನುವುದನ್ನು ಮರೆಯಬಾರದು. ಕೊಟ್ಟ ಮಾತಿನಂತೆ ಈಗ ಜಾತಿಗಣತಿ ವರದಿಯನ್ನು ಒಪ್ಪಿ ಬಿಡುಗಡೆ ಮಾಡಿ `ನಾವು ನುಡಿದಂತೆ ನಡೆಯುವವರು’ ಎನ್ನುವುದನ್ನು ಸಾಬೀತು ಮಾಡಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ ಮಾತನಾಡಿ, ಕರ್ನಾಟಕ 12ನೇ ಶತಮಾನದಲ್ಲೇ ಸಮಸಮಾಜವನ್ನು ಪ್ರತಿಪಾದಿಸಿದ ರಾಜ್ಯ. ಇಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಜಾರಿ ಮಾಡಲಾಗಿತ್ತು. ದಿವಂಗತ ದೇವರಾಜ ಅರಸು ಅವರು `ಹಾವನೂರು ಆಯೋಗ’ ರಚಿಸಿ ಹಿಂದುಳಿದ ವರ್ಗಗಳ ಅಧ್ಯಯನಕ್ಕೆ ಮುನ್ನುಡಿ ಬರೆದರು. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು ಮೀಸಲಾತಿ ಮಿತಿಯನ್ನು ಶೇಕಡಾ 73ಕ್ಕೆ ಏರಿಸುವ ಪ್ರಯತ್ನ ಮಾಡಿದ್ದರು. ಅಂದಿನಿಂದಲೂ ಸಾಮಾಜಿಕ ನ್ಯಾಯದ ಪರವಾಗಿರುವ ಕರ್ನಾಟಕ ಈಗ ಜಾತಿ ಜನಗಣತಿ ಅಥವಾ ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ಸಮೀಕ್ಷಾ ವರದಿಯನ್ನು ತಯಾರಿಸಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ. ವರದಿ ಬಿಡುಗಡೆಗೆ ಸಿಎಂ ಸಿದ್ದರಾಮಯ್ಯನವರು ಮತ್ತು ಅವರ ಸಂಪುಟವು ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು ಎಂದು ಒತ್ತಾಯಿಸಿದರು.
ನಂತರ ಅಖಿಲ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಚಿತ್ರದುರ್ಗ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕೆ.ವೆಂಕಟೇಶ್ ಅವರ ಮುಖಾಂತರ ಕರ್ನಾಟಕ ಸರ್ಕಾರಕ್ಕೆ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಹಾ ಒಕ್ಕೂಟದ ಸಂಚಾಲಕರಾದ ದುರುಗೇಶಪ್ಪ, ಪ್ರಸನ್ನ ಕುಮಾರ್, ನಗರಸಭೆಯ ಮಾಜಿ ಅಧ್ಯಕ್ಷ ನಿರಂಜನ ಮೂರ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

