ಕಲಬುರಗಿ ಜಿಲ್ಲೆಯ ಅಧಿಕಾರಿಗಳು ಮಾತು ಕೇಳುತ್ತಿಲ್ಲ ಕೊಬ್ಬು ಜಾಸ್ತಿಯಾಗಿದೆ, ಚಳಿ ಬಿಡಿಸಬೇಕಾಗಿದೆ. ಇಲ್ಲದಿದ್ದರೆ ನಮ್ಮ ಮಾತು ಕೇಳೋದಿಲ್ಲ ಎಂದು ಮುಖ್ಯಮಂತ್ರಿ ಸಲಹೆಗಾರ, ಆಳಂದ ಶಾಸಕ ಬಿ.ಆರ್.ಪಾಟೀಲ್ ಅಸಮಧಾನ ಹೊರಹಾಕಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ʼಯಾವ ಅಧಿಕಾರಿಯೂ ನಮ್ಮ ಮಾತು ಕೇಳುತ್ತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮೂಲಭೂತ ಸೌಕರ್ಯಗಳಿಗಾಗಿ ಜನರು ಪರದಾಡುತ್ತಿದ್ದಾರೆ. ಆದರೆ, ಪಾಲಿಕೆ ಕಮಿಷನರ್ ಸೇರಿದಂತೆ ಯಾವ ಅಧಿಕಾರಿಯೂ ಜನರ ಸಮಸ್ಯೆಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇವರೆಲ್ಲರೂ ಕೊಬ್ಬಿದ್ದಾರೆʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಜಿಲ್ಲಾ ಪಂಚಾಯತ್ ಸಿಇಓ, ಪಾಲಿಕೆ ಆಯುಕ್ತ ಮಾತೇ ಕೇಳುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇದೆಲ್ಲವನ್ನು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮುಂದೆ ನಾವು ಮಕ್ಕಳಂತೆ ದೂರು ನೀಡಬೇಕಾಗಿದೆ. ಇದು ಸರಿಯೇʼ ಎಂದು ಪ್ರಶ್ನಿಸಿದರು.
ʼಕಲಬುರಗಿ ಮಹಾನಗರ ಪಾಲಿಕೆ ಉಪ ಆಯುಕ್ತ ಆರ್.ಪಿ. ಜಾಧವ್ ಅವರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ ಬೇರೆಡೆ ವರ್ಗಾಯಿಸಬೇಕು. ಅವರ ಅವಧಿಯಲ್ಲಿನ ಕಾಮಗಾರಿಗಳ ಕುರಿತು ಸಂಪೂರ್ಣ ವಿವರ ಪಡೆದು ಆಗಿರುವ ನಷ್ಟಕ್ಕೆ ಅವರ ವೇತನದಲ್ಲಿ ವಸೂಲಿ ಮಾಡಬೇಕು ಎಂದು ಮಹಾಪೌರರು ಮನವಿ ಮಾಡಿದ್ದು, ಶೀಘ್ರ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವೆʼ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಭಾರೀ ಮಳೆಗೆ ಏಕಾಏಕಿ ಕುಸಿದ ಮನೆ; ಮಣ್ಣಿನಡಿ ಸಿಲುಕಿದ್ದ ಮ್ಯಾರಥಾನ್ ಓಟಗಾರನ ರಕ್ಷಣೆ
ಕೆಲವು ಕಾಮಗಾರಿ ಕಳಪೆಯಾದಾಗ ಅಧಿಕಾರಿ ಕರೆದು ಬಿಲ್ ಮಾಡಬೇಡಿ ಅಂದ್ರು ಮಾಡಿ ಕಳಿಸಿದ್ದಾರೆ. ಅದಕ್ಕೆ ಪಾಲಿಕೆ ಉಪ ಆಯುಕ್ತ ಆರ್.ಪಿ.ಜಾಧವ್ ಅವರನ್ನು ಕೂಡಲೇ ಕಿತ್ತು ಹಾಕಬೇಕು. ಈ ಮನುಷ್ಯ ಎಲ್ಲ ಸರ್ಕಾರದಲ್ಲಿ ಇರುತ್ತಾನೆ. ಹೇಗೆ ಇವರೆಲ್ಲ ಒಂದೇ ಸ್ಥಳದಲ್ಲಿ 20 ವರ್ಷ ಕೆಲಸ ಮಾಡುತ್ತಾರೆ’ ಎಂದು ಕಿಡಿಕಾರಿದರು.