- ಬಂಧಿತರ ಸಂಖ್ಯೆ 5ಕ್ಕೆ : ಎಲ್ಲರೂ ಸಂಘಪರಿವಾರದ ಕಾರ್ಯಕರ್ತರು
- ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ
ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ, ಸಂಘಪರಿವಾರದ ಕಾರ್ಯಕರ್ತನನ್ನು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಕೇರಳ ಬಾಯಾರು ನಿವಾಸಿ ರಾಜ ಯಾನೆ ರಾಜೇಶ(26) ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಒಟ್ಟು ಐವರನ್ನು ಬಂಧಿಸಲಾಗಿದೆ.
ಈ ಮೊದಲು ಮೂಡುಬಿದಿರೆ ಮೂಲದ ಪ್ರಸ್ತುತ ಬೆರಿಪದವಿ ನಿವಾಸಿ ಅಕ್ಷಯ್ ದೇವಾಡಿಗ (24), ಬಾಯಾರು ಗ್ರಾಮದ ಕೊಜಪ್ಪ ನಿವಾಸಿ ಕಮಲಾಕ್ಷ ಬೆಳ್ಚಾಡ (30), ಬೆರಿಪದವು ನಿವಾಸಿ ಸುಕುಮಾರ ಬೆಳ್ಚಾಡ (28), ಪೆರುವಾಯಿ ನಿವಾಸಿ ಜಯಪ್ರಕಾಶ್ (38) ಎಂಬ ನಾಲ್ವರು ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ನೊಂದ ಬಾಲಕಿ ಐದು ಮಂದಿಯ ಹೆಸರನ್ನು ದೂರಿನಲ್ಲಿ ತಿಳಿಸಿದ್ದಳು. ಈ ಹಿನ್ನೆಲೆಯಲ್ಲಿ ಮೂರು ಮಂದಿಯನ್ನು ರವಿವಾರ ಬಂಧಿಸಿದ್ದರೆ, ಓರ್ವನನ್ನು ಸೋಮವಾರ ಬಂಧಿಸಲಾಗಿತ್ತು. ಇನ್ನೋರ್ವ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕರಾವಳಿಯಲ್ಲಿ ಮತ್ತೆ ಅನೈತಿಕ ಪೊಲೀಸ್‌ಗಿರಿ: ಐವರು ಸಂಘಪರಿವಾರದ ಕಾರ್ಯಕರ್ತರ ಬಂಧನ
ಪ್ರಕರಣದ ಹಿನ್ನೆಲೆ:
ಅಕ್ಷಯ್ ಬೆರಿಪದವಿನಲ್ಲಿ ಅಣ್ಣನ ಮನೆಯಲ್ಲಿದ್ದುಕೊಂಡು ಪೈಂಟಿಂಗ್ ಕೆಲಸ ನಿರ್ವಹಿಸುತ್ತಿದ್ದ. ಕಮಲಾಕ್ಷ ಗಾರೆ ಕೆಲಸ ಹಾಗೂ ಸುಕುಮಾರ ಚಾಲಕ ವೃತ್ತಿಯನ್ನು ಮಾಡುತ್ತಿದ್ದ. ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಯನ್ನು 2019 ರಲ್ಲಿ ಆಕೆಯ ಸಂಬಂಧಿಕರ ಮನೆಯಲ್ಲಿ ಜಯಪ್ರಕಾಶ್ ಎಂಬಾತ ಅತ್ಯಾಚಾರ ನಡೆಸಿದ್ದ. ಕಳೆದ ಜನವರಿಯಲ್ಲಿ ಅಕ್ಷಯ್ ಎಂಬಾತ ಬೆರಿಪದವು ಶಾಲೆಯ ಬಳಿಗೆ ಬಂದು ಬೇರೆ ಬೇರೆ ದಿನಗಳಲ್ಲಿ ಮೂರು ಬಾರಿ ಅತ್ಯಾಚಾರ ನಡೆಸಿದ್ದಾನೆ.
ಕಳೆದ ಮೇ ತಿಂಗಳಿನಲ್ಲಿ ಬೆರಿಪದವು ರಾಜ ಎಂಬಾತ ಬಾಲಕಿಗೆ ಕರೆ ಮಾಡಿ ಮಾತನಾಡುತ್ತಿದ್ದ. ಬೆರಿಪದವು ವಿದ್ಯಾರಣ್ಯ ಶಾಲೆಯ ಗುಡ್ಡ ಜಾಗಕ್ಕೆ ಬರಲು ಹೇಳಿ, ಬಾಲಕಿಯನ್ನು ಮದುವೆಯಾಗುತ್ತೇನೆಂದು ಪುಸಲಾಯಿಸಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಳೆದ ಜೂನ್ ತಿಂಗಳಿನ ಮೊದಲ ವಾರದಲ್ಲಿ ಅಚ್ಚು ಯಾನೆ ಅಕ್ಷಯ್ ಎಂಬಾತನ ಮುಖಾಂತರ ಸುಕುಮಾರ ಪರಿಚಯಿಸಿಕೊಂಡು ಮದುವೆಯಾಗುತ್ತೇನೆಂದು ಬೆರಿಪದವು ಎಂಬಲ್ಲಿಗೆ ಬರಲು ಹೇಳಿ ಅಲ್ಲಿನ ವಿದ್ಯಾರಣ್ಯ ಶಾಲೆಯ ಗುಡ್ಡ ಜಾಗದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಅಲ್ಲದೇ, 2023ರ ಜುಲೈ 28ರಂದು ರಾತ್ರಿ ವೇಳೆ ಕಮಾಲಾಕ್ಷ ಬೆಳ್ಚಡನು ಮದುವೆಯಾಗುತ್ತೇನೆಂದು ಭರವಸೆ ನೀಡಿದ್ದ. ಅಲ್ಲದೇ ಆತನ ಮನೆಯಾದ ಬಾಯಾರು ಗ್ರಾಮದಲ್ಲಿರುವ ಅವರ ಸಂಬಂಧಿಯ ಖಾಲಿ ಮನೆಗೆ ಬರಲು ಹೇಳಿ ಬಾಲಕಿಯು ಹೋದಾಗ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಎಲ್ಲ ಘಟನೆಗಳನ್ನು ಬಾಲಕಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದು, ಅದರಂತೆ ಪೋಕ್ಸೋ, ಅತ್ಯಾಚಾರ ಪ್ರಕರಣ ದಾಖಲಾಗಿದೆ.