ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಮಿಸಲಿಟ್ಟ 11,000 ಕೋಟಿ ಅನುದಾನವನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ. ಸರ್ಕಾರ ನಡೆ ಪರಿಶಿಷ್ಟರ ವಿರೋಧಿಯಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ (ಡಿವಿಎಸ್) ಆಕ್ರೋಶ ವ್ಯಕ್ತಪಡಿಸಿದೆ.
ರಾಯಚೂರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ ಡಿವಿಎಸ್ ಕಾರ್ಯಕರ್ತರು, “ಎಸ್‌ಸಿ/ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಬಳಕೆ ಆಗಬೇಕಿದ್ದ ಅನುದಾನದಲ್ಲಿ 11 ಸಾವಿರ ಕೋಟಿ ರೂಪಾಯಿ ಹಣವನ್ನು ಸರ್ಕಾರದ ಗ್ಯಾರಂಟಿ ಯೊಜನೆಗಳಿಗೆ ಬಳಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು” ಎಂದು ಒತ್ತಾಯಿಸಿದ್ದಾರೆ.
ಹಕ್ಕೊತ್ತಾಯ ಪತ್ರ ಸಲ್ಲಿಸಿ ಮಾತನಾಡಿದ ಮೌನೇಶ್ ಜಾಲವಾಡಗಿ, “ಎಸ್‌ಸಿ/ಎಸ್‌ಟಿ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ಮೀಸಲಿರಬೇಕಾಗಿದ್ದ ಹಣವನ್ನು ಸರ್ಕಾರದ ಗ್ಯಾರಂಟಿ ಯೊಜನೆಗಳಿಗಾಗಿ ಬಳಸುತ್ತಿರುವುದನ್ನು ಖಂಡನೀಯ. ಶೋಷಿತ ಸಮುದಾಯಗಳ ಹಕ್ಕು ಕಿತ್ತುಕೊಂಡು, ತಮ್ಮ ಗ್ಯಾರಂಟಿ ಯೋಜನೆಗಳಿಗೆ ಬಳಸುವುದು ಸರಿಯಲ್ಲ. ಎಸ್‌ಸಿ/ಎಸ್‌ಟಿ ಅನುದಾನವನ್ನು ಅದೇ ಸಮುದಾಯಗಳ ಅಭಿವೃದ್ಧಿಗೆ ಮಾತ್ರವೇ ಬಳಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಸಂಘಟನೆಯ ಮುಖಂಡ ರವಿಕುಮಾರ್ ಗೋನವಾರ, ಮನಿಷಪ್ಪ, ಶಾಂತಪ್ಪ ಇದ್ದರು.