- ಬೀದರ್ ತಾಲೂಕಿನ ಹಮಿಲಾಪುರ್ ಗ್ರಾಮದ ಸೈಯದ್ ಸೈಫುದ್ದೀನ್
- ‘ಗಡ್ಡ ನೋಡಿ ಗುಂಡಿಟ್ಟು ಸಾಯಿಸಲಾಗಿದೆ’ ಎಂದ ಸಹೋದರ ಯೂನುಸ್
ಜೈಪುರ-ಮುಂಬೈ ಎಕ್ಸ್‌ಪ್ರೆಸ್ ರೈಲಲ್ಲಿ ಕಳೆದ ಸೋಮವಾರ ಬೆಳಗ್ಗೆ ಐದು ಗಂಟೆಯ ಸುಮಾರಿಗೆ ಆರ್‌ಪಿಎಫ್ ಕಾನ್‌ಸ್ಟೆಬಲ್ ತನ್ನ ಸ್ವಯಂಚಾಲಿತ ರೈಫಲ್‌ನಿಂದ ಗುಂಡು ಹಾರಿಸಿ, ನಾಲ್ವರನ್ನು ಕೊಂದಿರುವ ಘಟನೆಯಲ್ಲಿ ಮೃತಪಟ್ಟವರಲ್ಲಿ ಓರ್ವರು ಬೀದರ್ ಜಿಲ್ಲೆಯವರು ಎಂದು ತಿಳಿದುಬಂದಿದೆ.
ಆರ್‌ಪಿಎಫ್ ಕಾನ್‌ಸ್ಟೆಬಲ್ ಚೇತನ್ ಸಿಂಗ್‌ನಿಂದ ಕೊಲ್ಲಲ್ಪಟ್ಟ ನಾಲ್ವರ ಪೈಕಿ ಓರ್ವರು ಆರ್‌ಪಿಎಫ್ ಸಹೋದ್ಯೋಗಿ ಎಎಸ್‌ಐ ಟಿಕಾ ರಾಮ್ ಮೀನಾ ಹಾಗೂ ಉಳಿದ ಮೂವರು ಮುಸ್ಲಿಮ್ ಪ್ರಯಾಣಿಕರು ಎಂದು ತಿಳಿದು ಬಂದಿತ್ತು. ಈ ಪೈಕಿ ಇಬ್ಬರನ್ನು ಅಬ್ದುಲ್ ಕದಿರ್, ಅಸ್ಗರ್ ಕೈ ಎಂದು ಗುರುತಿಸಲಾಗಿತ್ತು. ಇನ್ನೊಬ್ಬರ ಪ್ರಯಾಣಿಕನ ವಿವರ ತಿಳಿದು ಬಂದಿರಲಿಲ್ಲ.
ನಾಲ್ಕನೇಯ ವ್ಯಕ್ತಿಯ ವಿವರವನ್ನು ಪತ್ತೆಹಚ್ಚಲಾಗಿದ್ದು, ಬೀದರ್ ತಾಲೂಕಿನ ಹಮಿಲಾಪುರ್ ಗ್ರಾಮದ ಸೈಯದ್ ಸೈಫುದ್ದೀನ್ ಎಂದು ತಿಳಿದುಬಂದಿದೆ. ಇವರು ಹೈದರಾಬಾದ್‌ನಲ್ಲಿ ನೆಲೆಸಿದ್ದರು ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಮೃತನ ಸಹೋದರ ಸೈಯದ್ ಯೂನುಸ್, ‘ಹೈದರಾಬಾದ್‌ನ ಮೊಬೈಲ್ ಸರ್ವಿಸ್ ಅಂಗಡಿ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅಂಗಡಿಯ ಮಾಲೀಕರ ಜೊತೆಗೆ ಅಜ್ಮೀರ್‌ಗೆ ತೆರಳಿ ವಾಪಸ್ ಮುಂಬೈಗೆ ಬರುವ ವೇಳೆ ಈ ದುರ್ಘಟನೆ ನಡೆದಿದೆ. ಸೈಫುದ್ದೀನ್ ಅವರು ಗಡ್ಡ ಇಟ್ಟುಕೊಂಡಿದ್ದರು. ಆದರೆ ಅವರ ಜೊತೆಗಿದ್ದ ಮಾಲೀಕರಿಗೆ ಗಡ್ಡ ಇರಲಿಲ್ಲ. ಹೀಗಾಗಿ ಗಡ್ಡ ಇಟ್ಟಿರುವುದನ್ನು ಗಮನಿಸಿ ಸೈಫುದ್ದೀನ್ ಮೇಲೆ ಆರ್‌ಪಿಎಫ್‌ನ ಪೊಲೀಸ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಅಂತ ನಮಗೆ ಮಾಹಿತಿ ಬಂದಿದೆ. ಇವರಿಗೆ ಪತ್ನಿ, ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರಿಗೆ ಇನ್ನು ಯಾರು ಗತಿ?’ ಎಂದು ನೋವು ತೋಡಿಕೊಂಡರು.
ಇದನ್ನು ಓದಿದ್ದೀರಾ? ಮುಸ್ಲಿಮರು ಭಾರತದಲ್ಲಿರಬೇಕಾದರೆ ಮೋದಿ-ಯೋಗಿ ಹೇಳಿದಂತೆ ಕೇಳಬೇಕು : ನಾಲ್ವರನ್ನು ಕೊಂದ ಕಾನ್‌ಸ್ಟೆಬಲ್
‘ಬೀದರ್ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದರೂ ಮನೆಗೆ ಯಾರೂ ಭೇಟಿ ನೀಡಲಿಲ್ಲ. ಸದ್ಯ ಮೃತದೇಹವು ಮುಂಬೈನಿಂದ ಹೊರಟಿದೆ. ರಾತ್ರಿ 8ಕ್ಕೆ ಸ್ವಗ್ರಾಮಕ್ಕೆ ಬರುತ್ತದೆ’ ಎಂದು ಯೂನುಸ್ ಮಾಹಿತಿ ನೀಡಿದರು.
ಈ ದಿನ.ಕಾಮ್ ಜೊತೆಗೆ ಮಾತನಾಡಿದ ಸೈಫುದ್ದೀನ್ ಅವರ ಸ್ನೇಹಿತ ಅಸದುಲ್ಲಾ ಖಾನ್, ‘ಸರ್ಕಾರ ಸೈಫುದ್ದೀನ್ ಕುಟುಂಬಕ್ಕೆ ₹5 ಕೋಟಿ ಪರಿಹಾರ ನೀಡಬೇಕು, ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಕಲ್ಪಿಸಬೇಕು, ಕುಟುಂಬಕ್ಕೆ ಮನೆ ನಿರ್ಮಿಸಿಕೊಡಬೇಕು, ಪತ್ನಿಗೆ ಸರ್ಕಾರಿ ನೌಕರಿ ಸಿಗುವಂತೆ ಮಾಡಬೇಕು ಎಂಬುದು ನಮ್ಮೆಲ್ಲರ ಬೇಡಿಕೆ’ ಎಂದು ತಿಳಿಸಿದರು.
25 ಲಕ್ಷ ರೂ. ಪರಿಹಾರ ನೀಡಿ: ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್
ಸೈಯದ್ ಸೈಫುದ್ದೀನ್ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾದ ಬಂಡೆಪ್ಪ ಖಾಶೆಂಪುರ್ ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ಘಟನೆಯ ಸುದ್ದಿ ಕೇಳಿ ದುಃಖವಾಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ನಡೆದ ಗುಂಡಿನ ದಾಳಿಯಲ್ಲಿ ಮೃತರಾದವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಮತ್ತು ಅವರ ಕುಟುಂಬ ವರ್ಗಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಘಟನೆಯಲ್ಲಿ ಪ್ರಾಣ ಕಳೆದುಕೊಂಡ ನಮ್ಮ ಜಿಲ್ಲೆಯ ಹಮಿಲಾಪೂರ್ ಗ್ರಾಮದ ಸೈಯದ್ ಸೈಫುದ್ದೀನ್ ರವರ ಸಹೋದರ ಯೂನುಸ್ ರವರೊಂದಿಗೆ ನಾನು ಈಗಾಗಲೇ ಮಾತನಾಡಿ ಸಾಂತ್ವನ ಹೇಳಿದ್ದೇನೆ ಎಂದು ಖಾಶೆಂಪುರ್ ತಿಳಿಸಿದ್ದಾರೆ.
ಸೈಫುದ್ದೀನ್ ಕುಟುಂಬಕ್ಕೆ ರೈಲ್ವೆ ಇಲಾಖೆ (ಕೇಂದ್ರ ಸರ್ಕಾರ) ಹಾಗೂ ಅಲ್ಲಿನ ರಾಜ್ಯ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು. ಕೂಡಲೇ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ಆಗ್ರಹಿಸಿದ್ದಾರೆ.
ಮಾಹಿತಿ : ಬಾಲಾಜಿ ಕುಂಬಾರ್, ಬೀದರ್