ಈ ಹಿಂದೆ ಗಗನಕ್ಕೇರಿದ್ದ ಈರುಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ. ಈರುಳ್ಳಿ ಕಳ್ಳತನದ ಪ್ರಕರಣಗಳು ವರದಿಯಾಗುತ್ತಿವೆ. ಜಮೀನಿಗೆ ನುಗ್ಗಿ ಈರುಳ್ಳಿ ಕದ್ದೊಯ್ದಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದ್ದು, ಈರುಳ್ಳಿ ಬೆಳೆದಿದ್ದ ರೈತ ಕಣ್ಣೀರು ಹಾಕಿದ್ದಾರೆ.
ಹಾವೇರಿ ತಾಲೂಕಿನ ಯಲಹಚ್ಚ ಗ್ರಾಮದ ರೈತ ಮಾದೇವಪ್ಪ ಹಳೇರಿತ್ತಿ ಎಂಬವರು ತಮ್ಮ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಉತ್ತಮ ಇಳುವರಿ ಇದೆ. ಬೆಲೆ ಏರಿಕೆಯಿಂದ ಒಳ್ಳೆಯ ಲಾಭ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ರಾತ್ರೋರಾತ್ರಿ ಜಮೀನಿಗೆ ನುಗ್ಗಿರುವ ಖದೀಮರು ಈರುಳ್ಳಿಯನ್ನು ಕದ್ದೊಯ್ದಿದ್ದಾರೆ.
ಎರಡು ಎಕರೆ ಜಮೀನಿನಲ್ಲಿ ಮಾದೇವಪ್ಪ ಈರುಳ್ಳಿ ಬೆಳೆದಿದ್ದರು. ಇತ್ತೀಚೆಗೆ, ಮೊದಲ ಹಂತದ ಕಟಾವು ಮಾಡಿ, ಮಾರಾಟ ಮಾಡಿದ್ದರು. ಉತ್ತಮ ಲಾಭ ಪಡೆದಿದ್ದರು. ಜಮೀನಿನಲ್ಲಿರುವ ಈರುಳ್ಳಿಯಿಂದ ಇನ್ನೂ ಸುಮಾರು 80 ಸಾವಿರದವರೆಗೆ ಆದಾಯ ಬರುತ್ತದೆ ಎಂಬ ಭರವಸೆಯೂ ಅವರಲ್ಲಿತ್ತು. ಆದರೆ, ಕಳ್ಳರು ಅವರ ಶ್ರಮವನ್ನು ಲೂಟಿ ಮಾಡಿದ್ದಾರೆ.
ಈರುಳ್ಳಿ ಬೆಳೆಯನ್ನು ಕಾಯುತ್ತಾ ಮಾದೇವಪ್ಪ ಜಮೀನಿನಲ್ಲೇ ಮಲಗುತ್ತಿದ್ದರು. ಆದರೆ, ಬೇರೆಡೆ ಇದ್ದ ಜಮೀನಿನಲ್ಲಿ ಮೆಕ್ಕೆಜೋಳವನ್ನೂ ಬೆಳೆದಿದ್ದ ಮಾದೇವಪ್ಪ, ಜೋಳವನ್ನು ಕಟಾವು ಮಾಡಿದ್ದ ಕಾರಣ, ಅದನ್ನು ಕಾಯಲು ಹೋಗಿದ್ದರು. ಈ ಸಮಯಕ್ಕಾಗಿ ಕಾಯುತ್ತಿದ್ದ ಖದೀಮರು ಈರುಳ್ಳಿಯನ್ನು ಕದ್ದೊಯ್ದಿದ್ದಾರೆ.
ಮರುದಿನ ಬೆಳಗ್ಗೆ ಜಮೀನಿಗೆ ಬಂದಾಗ ಈರುಳ್ಳಿ ಕಳುವಾಗಿರುವುದು ಗೊತ್ತಾಗಿದೆ. ದಪ್ಪ ಗಾತ್ರದ ಈರುಳ್ಳಿಯನ್ನು ಕದ್ದಿರುವ ಕಳ್ಳರು, ಸಣ್ಣ ಈರುಳ್ಳಿಗಳನ್ನು ಜಮೀನಿನಲ್ಲೇ ಬಿಟ್ಟು ಹೋಗಿದ್ದಾರೆ. ಬರಗಾಲ, ವಿದ್ಯುತ್ ಸಮಸ್ಯೆಯ ನಡುವೆಯೂ ಈರುಳ್ಳಿ ಬೆಳೆದಿದ್ದ ರೈತ ಕಣ್ಣೀರು ಹಾಕಿದ್ದಾರೆ.