ಬಯಲು ಶೌಚ ವಿಸರ್ಜನೆಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭಾರಿ ಪ್ರಚಾರಾಂದೋಲನ ನಡೆಸುತ್ತಿವೆ. ಇದಕ್ಕಾಗಿ ಸರ್ಕಾರ ಕೋಟಿಗಟ್ಟಲೇ ಹಣ ಸುರಿಯುತ್ತಿದೆ. ವಿಪರ್ಯಾಸವೆಂದರೆ, ಇಲ್ಲೊಂದು ಶಾಲೆಯಲ್ಲಿ ವ್ಯಾಸಂಗ ಮಾಡುವ ನೂರಾರು ವಿದ್ಯಾರ್ಥಿಗಳು ಈಗಲೂ ಬಯಲು ಶೌಚಾಲಯವನ್ನೇ ನೆಚ್ಚಿಕೊಳ್ಳಬೇಕಾದ ಸ್ಥಿತಿ ಇದೆ.
ಲಿಂಗಸುಗೂರು ತಾಲೂಕಿನ ಯಲಗಟ್ಟಾ ಗ್ರಾಮದ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಒಂದೇ ಒಂದು ಶೌಚಾಲಯ ಇಲ್ಲದಿರುವುದ್ದರಿಂದ ಮಕ್ಕಳು ಮೂತ್ರ ವಿಸರ್ಜನೆಗೆ ಬಯಲನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ ಇದೆ.
ಪ್ರತಿಯೊಂದು ಶಾಲೆಯಲ್ಲಿ ಕುಡಿಯುವ ನೀರು, ಹೈಟೆಕ್ ಶೌಚಾಲಯ ಸೇರಿ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂಬ ನಿಯಮವಿದ್ದರೂ, ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಶಿಕ್ಷಕರು ಹಾಗೂ ಶಾಲಾ ಮಕ್ಕಳು ನಿತ್ಯ ನಾನಾ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಯಲಗಟ್ಟಾ ಗ್ರಾಮದಲ್ಲಿನ ಸರ್ಕಾರಿ ಶಾಲೆ 1ರಿಂದ 10ನೇ ತರಗತಿವರೆಗೆ ಒಂದೇ ಆವರಣದಲ್ಲಿದ್ದು, ಸುಮಾರು 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಇಚ್ಚಾಶಕ್ತಿ ತೋರಿಲ್ಲ. ಅದರಲ್ಲೂ ಪ್ರೌಢ ಶಾಲೆಯ ಬಾಲಕಿಯರಿಗೆ ಶೌಚಾಲಯ ವ್ಯವಸ್ಥೆ ತೀರಾ ಅನಿವಾರ್ಯ. ಆದರೆ, ಮಕ್ಕಳಿಗೆ ಪ್ರತೇಕ ಶೌಚಾಲಯ ನಿರ್ಮಾಣಕ್ಕೆ ಮಹತ್ವ ನೀಡದ ಅಧಿಕಾರಿಗಳ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ಎಸ್ಡಿಎಮ್ಸಿ ಅಧ್ಯಕ್ಷ ನಿಂಗಪ್ಪ ಸಾವುಕಾರ್ ಮಾತನಾಡಿ, “ಶಾಲೆಯಲ್ಲಿ ಶೌಚಾಲಯ ಇಲ್ಲದ ಕಾರಣ ವಿದ್ಯಾರ್ಥಿಗಳು, ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ನೂರಾರು ವಿದ್ಯಾರ್ಥಿಗಳು ಅಭ್ಯಾಸಿಸುವ ಈ ಶಾಲೆಯಲ್ಲಿ ಶೌಚಾಲಯ ಇಲ್ಲದಿರುವುದು ಬೇಸರದ ಸಂಗತಿ. ಶಾಲೆಗೆ ಶೌಚಾಲಯ ನಿರ್ಮಿಸುವಂತೆ ಶಿಕ್ಷಣ ಇಲಾಖೆಗೆ ಶೀಘ್ರವೇ ಮನವಿ ಸಲ್ಲಿಸಲಾಗುವುದು” ಎಂದು ಹೇಳಿದರು.
“ಶಾಲೆಯ ಅಕ್ಕ ಪಕ್ಕದಲ್ಲಿ ಹೊಲಗದ್ದೆಗಳಿವೆ. ಮಕ್ಕಳು ಬಯಲು ಶೌಚಕ್ಕೆ ತೆರಳಿ ಮುಳ್ಳು ಚುಚ್ಚಿಕೊಂಡಿರುವ ಘಟನೆಗಳು ಜರುಗಿವೆ. ಶೌಚಾಲಯ ಸಮಸ್ಯೆಯಿಂದ ಅತಿಥಿ ಶಿಕ್ಷಕಿಯರು ಶಾಲೆಗೆ ನೇಮಕವಾಗಲು ಹಿಂದೇಟು ಹಾಕುತ್ತಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಸಜ್ಜಿತವಾದ ಶೌಚಾಲಯ ನಿರ್ಮಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ನೇಣು ಬಿಗಿದು ಪೊಲೀಸ್ ಕಾನ್ಸ್ಟೇಬಲ್ ಆತ್ಮಹತ್ಯೆ
ಎಸ್ಎಫ್ಐ ತಾಲೂಕು ಕಾರ್ಯದರ್ಶಿ ಪವನ್ ಕಮದಾಳ ಮಾತನಾಡಿ, “ಸರಕಾರಿ ಶಾಲೆಗಳಿಗೆ ಶೌಚಾಲಯ ನಿರ್ಮಿಸುವುದು ಗ್ರಾಮ ಪಂಚಾಯಿತಿ ಕರ್ತವ್ಯವಾಗಿದೆ. ಅಲ್ಲದೇ ಜಿಪಂ ಸೇರಿದಂತೆ ಸ್ಥಳೀಯ ಶಾಸಕರ ಕರ್ತವ್ಯ ಇದೆ, ಆದರೆ, ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಮಕ್ಕಳು ಶೌಚಾಲಯದಿಂದ ವಂಚಿತರಾಗಿದ್ದಾರೆ. ಈಗಲಾದರೂ ಶಿಕ್ಷಣ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಿ ಶಾಲಾ ಅವಸ್ಥೆ ಸರಿಪಡಿಸಲು ಮುಂದಾಗಬೇಕು.ಇಲ್ಲದಿದ್ದರೆ ಮುಂದಿನ ದಿನದಲ್ಲಿ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.