“ಒಬ್ಬೊಬ್ಬ ಶಿಕ್ಷಣ, ಆರೋಗ್ಯದ ವ್ಯಾಪಾರಿಗಳು, ಭೂ ದಂಧೆ ಕೋರರ ಕೈಯಲ್ಲಿ ನೂರಾರು ಎಕರೆ ಕೃಷಿ ಭೂಮಿ ಜಮೆಯಾಗತೊಡಗಿದೆ. ಉಳ್ಳಾಲ ಮತ್ತೊಮ್ಮೆ ಜಮೀನ್ದಾರಿ ಯುಗಕ್ಕೆ ತೆರೆದುಕೊಳ್ಳುತ್ತಿದೆ. ಗ್ರಾಮಸ್ಥರು ಮೈಕೊಡವಿ ಹೋರಾಟಕ್ಕೆ ಇಳಿಯದಿದ್ದಲ್ಲಿ ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುವ, ವಸತಿ, ಆಹಾರಕ್ಕೂ ಪರದಾಡುವ ಅಭ್ರದ್ರತೆಯ ಬದುಕಿಗೆ ಬೀಳಬೇಕಾಗುತ್ತದೆ. ಕೃಷಿ ಭೂಮಿಯ ಸಂರಕ್ಷಣೆಗಾಗಿ ಇಡೀ ಊರಿನ ಗ್ರಾಮಸ್ಥರು ಒಂದಾಗಿ ಸಂಘಟಿತ ಹೋರಾಟ ನಡೆಸಬೇಕು” ಎಂದು ಸಿಪಿಐಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ ಎಚ್ಚರಿಸಿದರು.
ಕುತ್ತಾರ್‌ನಲ್ಲಿ ಬುಧವಾರ ಜರುಗಿದ ಉಳ್ಳಾಲ ತಾಲೂಕಿನ ಬೆಳ್ಮ, ಮುನ್ನೂರು, ಅಂಬ್ಲಮೊಗರು ಗ್ರಾಮಗಳಲ್ಲಿ ಖಾಸಗಿ ಬಂಡವಾಳಶಾಹಿಗಳು ನೂರಾರು ಎಕರೆ ಕೃಷಿ ಭೂಮಿ ಖರೀದಿಸುತ್ತಿರುವುದರಿಂದ ಗಂಭೀರ ಸಮಸ್ಯೆಗಳಿಗೆ ಈಡಾಗಿರುವ ಗ್ರಾಮಸ್ಥರ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
“ಉಳುವವನೆ ಹೊಲದೊಡೆಯ ಘೋಷಣೆಯಡಿ ಗೇಣಿದಾರರು ನಡೆಸಿದ ಸಂಘರ್ಷಮಯ ಹೋರಾಟದಿಂದಾಗಿ ನೂರಾರು ಎಕರೆ ಭೂಮಿ ಹೊಂದಿದ್ದ ಭೂ ಒಡೆಯರು ರೈತರಿಗೆ ಭೂಮಿಯನ್ನು ಬಿಟ್ಟುಕೊಡಬೇಕಾಯಿತು. ಅಂದು ಇಂತಹ ಚಾರಿತ್ರಿಕ ಹೋರಾಟದ ಕೇಂದ್ರವಾಗಿದ್ದ ಉಳ್ಳಾಲ ತಾಲೂಕಿನಲ್ಲಿ ಬಂಡವಾಳಶಾಹಿಗಳು ಸಣ್ಣ ರೈತರಿಂದ ವಿವಿಧ ರೀತಿಯ ಆಮಿಷ, ಬೆದರಿಕೆ, ರಾಜಕೀಯ ಬೆಂಬಲದ ಮೂಲಕ ಜಮೀನನ್ನು ಬಲವಂತವಾಗಿ ವಶ ಪಡಿಸಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.
ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಈಗಾಗಲೇ ಮಂಗಳೂರಿನ ಹಲವು ಭಾಗಗಳಲ್ಲಿ ಖಾಸಗಿ ಧನಿಕರು, ಉದ್ಯಮಿಗಳು ಏಜಂಟರ ಮೂಲಕ ನೂರಾರು ಎಕರೆ ಜಮೀನು ಖರೀದಿಸಿದ್ದಾರೆ. ದಾಖಲೆಗಳನ್ನು ಪೋರ್ಜರಿಗೊಳಿಸುವುದು, ರಸ್ತೆ ಸಂಪರ್ಕ, ನೀರಿನ ಮೂಲಗಳನ್ನು ಮುಚ್ಚಿ ಭೂಮಿಯನ್ನು ತಾವು ನಿಗದಿ ಮಾಡಿದ ಭೂಮಿ ನೀಡುವಂತೆ ಬಲವಂತ ಪಡಿಸುವುದು ನಡೆಯುತ್ತಿದೆ. ರಾಜಕೀಯ, ಆಡಳಿತದ ಬಲವೂ ಭೂ ಮಾಫಿಯಾಗಳ ಪರವಾಗಿದ್ದು, ಬಲವಾದ ಸಂಘಟಿತ ಹೋರಾಟ ಕಟ್ಟದಿದ್ದಲ್ಲಿ ಅಪಾಯ ಕಾದಿದೆ” ಎಂದರು.
ಸಭೆಯಲ್ಲಿ ಕೃಷಿ ಭೂಮಿ ಸಂರಕ್ಷಣಾ ಹೋರಾಟ ಸಮಿತಿಯನ್ನು ರಚಿಸಲಾಯಿತು. ಸಮಸ್ಯೆಗಳ ಗಂಭೀರತೆಯನ್ನು ಜನತೆಯ ಮಧ್ಯೆ ಕೊಂಡೊಯ್ಯಲು ವಿವಿಧ ಹಂತದ ಕಾರ್ಯ ಕ್ರಮಗಳನ್ನು ನಡೆಸಿ ಬಳಿಕ ಬೃಹತ್ ಹೋರಾಟವನ್ನು ಕೈಗೊಳ್ಳಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.